ನವದೆಹಲಿ, ಆ. 31 (ಪಿಟಿಐ)– ವಿಶ್ವವಿದ್ಯಾಲಯ ಹಾಗೂ ಕಾಲೇಜು ಶಿಕ್ಷಕರು ಮುಷ್ಕರವನ್ನು ನಿಲ್ಲಿಸಿ ಕೆಲಸಕ್ಕೆ ಮರಳುವಂತೆ ಸರ್ಕಾರ ಇಂದು ಮನವಿ ಮಾಡಿದೆ.
ಮೂರು ವಾರಗಳಿಂದ ನಡೆಯುತ್ತಿರುವ ಮುಷ್ಕರವನ್ನು ಇನ್ನೂ ಮುಂದುವರಿಸುವ ಶಿಕ್ಷಕರ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸಿರುವ ಸರ್ಕಾರದ ಪ್ರಕಟಣೆ, ತಕ್ಷಣ ಕೆಲಸಕ್ಕೆ ಹಾಜರಾದರೆ ಸಮಸ್ಯೆಯ ಶೀಘ್ರ ಇತ್ಯರ್ಥಕ್ಕೆ ಪ್ರಯತ್ನಿಸಬಹುದು ಎಂದು ಹೇಳಿದೆ.
ಮಾನವ ಸಂಪನ್ಮೂಲ ಖಾತೆ ಸಚಿವ ಮುರಳಿ ಮನೋಹರ ಜೋಷಿ ಅವರು ಶಿಕ್ಷಕ ಸಮುದಾಯದೊಡನೆ ಮಾತುಕತೆ ನಡೆಸಿದ ಮೇಲೆ ವೇತನ ಪರಿಷ್ಕರಣೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಗಳಿಂದ ಕೇಂದ್ರಕ್ಕೆ ಪ್ರಸ್ತುತ ಹಣಕಾಸು ವರ್ಷದಲ್ಲಿ ರೂ 2,300 ಕೋಟಿ ಹೊರೆ ಬೀಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ಎಚ್ಚರಿಕೆ (ಬೆಂಗಳೂರು ವರದಿ): ಕಳೆದ ಇಪ್ಪತ್ತೊಂದು ದಿನಗಳಿಂದ ಚಳವಳಿ ನಡೆಸುತ್ತಿರುವ ರಾಜ್ಯದ ಕಾಲೇಜು ಶಿಕ್ಷಕರು ಕೂಡಲೇ ಚಳವಳಿಯನ್ನು ನಿಲ್ಲಿಸದೇ ಇದ್ದಲ್ಲಿ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ಪಾಟೀಲ್ ಅಟ್ಟೂರು ಇಂದು ಇಲ್ಲಿ ಎಚ್ಚರಿಸಿದರು.
ಚಳವಳಿ ನಡೆಸುತ್ತಿರುವ ಕಾಲೇಜು ಶಿಕ್ಷಕರ ವಿರುದ್ಧ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಬಳಸುವ ವಿಚಾರದಲ್ಲಿ ಸರ್ಕಾರ ಇನ್ನೂ ತೀರ್ಮಾನಿಸಿಲ್ಲ. ಚಳವಳಿ ರಾಷ್ಟ್ರದಾದ್ಯಂತ ನಡೆಯುತ್ತಿರುವುದರಿಂದ ಈ ವಿಚಾರದಲ್ಲಿ ಕೇಂದ್ರದ ಸೂಚನೆಗಾಗಿ ಕಾಯುತ್ತಿದ್ದೇವೆ’ ಎಂದು ಹೇಳಿದರು.
ಹಾಸನ, ಆ. 31– ಬಾಗೂರು– ನವಿಲೆ ಸುರಂಗ ಸಂತ್ರಸ್ತ ಹಳ್ಳಿಗಳ ಗ್ರಾಮಸ್ಥರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಪ್ರಕರಣದ ವಿಚಾರಣೆಗೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಎನ್.ಎಸ್. ಮೂರ್ತಿ ಮತ್ತು ಟಿ.ಕೆ. ನಾಯರ್ ಅವರನ್ನು ಮಾನವ ಹಕ್ಕು ಆಯೋಗ ನೇಮಿಸಿದೆ.
ಜುಲೈ 20 ಹಾಗೂ 21ರಂದು ಬಾಗೂರು, ವಡ್ಡರಹಳ್ಳಿ, ಗೊಲ್ಲರಹೊಸಳ್ಳಿ, ದ್ಯಾವೇನಹಳ್ಳಿ, ಚೌಡೇನಹಳ್ಳಿ, ಓಬಳಾಪುರ, ಬಿ. ಹೊನ್ನೇನಹಳ್ಳಿಗಳಲ್ಲಿ ಪೊಲೀಸರು ಮನೆ ಮನೆಗಳಿಗೆ ನುಗ್ಗಿ ಹೆಂಗಸರು, ಮಕ್ಕಳು, ವಯೋವೃದ್ಧರೆನ್ನದೆ ಸಿಕ್ಕವರನ್ನೆಲ್ಲಾ ಥಳಿಸಿ, ದೌರ್ಜನ್ಯವೆಸಗಿದ್ದನ್ನು ಅಖಿಲ ಭಾರತ ಕಿಸಾನ್ ಸಭಾ, ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಎ) ಮತ್ತು ಕಾಂಗ್ರೆಸ್ ಪಕ್ಷಗಳು ಹಾಗೂ ಖಾಸಗಿ ವ್ಯಕ್ತಿಗಳು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.