ನವದೆಹಲಿ, ಡಿ. 6 (ಪಿಟಿಐ, ಯುಎನ್‌ಐ)– ಅಯೋಧ್ಯೆಯ ಬಾಬ್ರಿ ಮಸೀದಿ ನೆಲಸಮಗೊಂಡ ಆರನೇ ವರ್ಷಾಚರಣೆ ದಿನವಾದ ಇಂದು ಕೇರಳದ ಕೆಲವೆಡೆ ಕಲ್ಲು ತೂರಾಟದಂಥ ಹಿಂಸಾಚಾರ ಪ್ರಕರಣಗಳು ನಡೆದರೆ, ಪುದುಚೇರಿಯಲ್ಲಿ ಅರೆಸೇನಾ ಪಡೆಯ ಯೋಧರು ಪಥಸಂಚಲನ ನಡೆಸಿದರು.
ಡಿಸೆಂಬರ್ 6, 1992ರಂದು ಅಯೋಧ್ಯೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಬಾಬ್ರಿ ಮಸೀದಿ ನೆಲಸಮ ಮಾಡಿದ್ದನ್ನು ಪ್ರತಿಭಟಿಸಿ ದೇಶದಾದ್ಯಂತ ಮೆರವಣಿಗೆಗಳು, ಪ್ರದರ್ಶನಗಳು ಹಾಗೂ ಸಭೆಗಳು ನಡೆದವು.
ದೇವಲಗಾಣಗಾಪುರ: ಘರ್ಷಣೆ, ಗಾಳಿಯಲ್ಲಿ ಗುಂಡು
ಕಲ್ಬುರ್ಗಿ, ಡಿ. 6– ದೇವಲಗಾಣಗಾಪುರದಲ್ಲಿ ಎರಡು ಪ್ರಬಲ ರಾಜಕೀಯ ಗುಂಪುಗಳ ನಡುವಿನ ವೈಷಮ್ಯ ಸ್ಫೋಟಿಸಿ ಗುಂಡು ಹಾರಿಸ ಲಾಯಿತಲ್ಲದೆ, ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ವಿಠ್ಠಲ ಹೇರೂರ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಫ್ಜಲಪುರ ತಾಲ್ಲೂಕಿನ ದೇವಲಗಾಣ ಗಾಪುರದಲ್ಲಿ ಜಿಲ್ಲಾ ಸಚಿವ ಮಾಲೀಕಯ್ಯ ಗುತ್ತೇದಾರ್ ಹಾಗೂ ವಿಠ್ಠಲ ಹೇರೂರ ಅವರ ಗುಂಪುಗಳ ನಡುವೆ ಘರ್ಷಣೆ ಇಂದೂ ಮುಂದುವರಿದು, ಹೇರೂರ ಹಾಗೂ ಅವರ ಅಂಗರಕ್ಷಕ ತೀವ್ರ ಗಾಯಗೊಂಡಿದ್ದಾರೆ. ಪರಿಸ್ಥಿತಿ ಈಗ ಶಾಂತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.