ಚಿತ್ರದುರ್ಗ, ಸೆ. 20– ವಿದ್ಯುತ್ ಸರಬರಾಜು ಅವ್ಯವಸ್ಥೆ ಪ್ರತಿಭಟಿಸಿ ಉದ್ರಿಕ್ತ ಗುಂಪೊಂದು ಇಂದು ಮಧ್ಯಾಹ್ನ ಚಳ್ಳಕೆರೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿ) ಕಚೇರಿಗೆ ನುಗ್ಗಿ ಸಿಬ್ಬಂದಿಗಳನ್ನು ಥಳಿಸಿತಲ್ಲದೆ ಪೀಠೋಪಕರಣಗಳನ್ನು ಜಖಂಗೊಳಿಸಿ ಕಾಗದ ಪತ್ರಗಳನ್ನು ಚಲ್ಲಾಪಲ್ಲಿ ಮಾಡಿತು.
ಪರಶುರಾಂಪುರದಲ್ಲಿಯೂ ಸಾವಿರಾರು ರೈತರು ಇಂದು ಕೆಪಿಟಿಸಿ ಕಚೇರಿಗೆ ಮುತ್ತಿಗೆ ಹಾಕಿದರು. ಚಿತ್ರದುರ್ಗದ ನೆಹರು ನಗರದಲ್ಲಿ ಕುಡಿವ ನೀರು ಪೂರೈಸಲು ಒತ್ತಾಯಿಸಿ ಮಹಿಳೆಯರೂ ಸೇರಿದಂತೆ ನಾಗರಿಕರು ಕೆಲಕಾಲ ರಸ್ತೆ ತಡೆ ನಡೆಸಿದರು.
ನಕಲಿ ಮತ ಪತ್ರ ವಿವಾದ: ಸಚಿವ ಜಾರ್ಜ್‌ಗೆ ಛೀಮಾರಿ
ನವದೆಹಲಿ, ಸೆ. 20 (ಯುಎನ್‌ಐ, ಪಿಟಿಐ)– ಬಿಹಾರದಲ್ಲಿ ನಕಲಿ ಮತಪತ್ರಗಳನ್ನು ಮುದ್ರಿಸಲಾಗಿದೆ ಎಂಬ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಚುನಾವಣಾ ಆಯೋಗ ‘ಇದು ಕೆಟ್ಟ ರಾಜಕೀಯ’ ಎಂದು ಛೀಮಾರಿ ಹಾಕಿದೆ.
ಇಂಥ ಆರೋಪಗಳನ್ನು ಮಾಡಲು ಸಚಿವರು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆಯೋಗ ಉಗ್ರವಾಗಿ ಟೀಕಿಸಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಎಂ.ಎಸ್. ಗಿಲ್ ಮತ್ತು ಸದಸ್ಯರಾದ ಜಿ.ವಿ.ಜಿ ಕೃಷ್ಣಮೂರ್ತಿ ಮತ್ತು ಜೆ.ಎಂ. ಲಿಂಗ್ಡೊ ಮೂವರೂ ಉಪಸ್ಥಿತರಿದ್ದರು.
ನಳಂದ ಮತ್ತು ಬಾರ್ಹ್ ಕ್ಷೇತ್ರಗಳಲ್ಲಿ ಆಯೋಗ ಅಗತ್ಯಕ್ಕಿಂತ ಹೆಚ್ಚು ಮತಪತ್ರಗಳನ್ನು ಮುದ್ರಿಸಿದೆ ಎಂದು ಜಾರ್ಜ್ ಫರ್ನಾಂಡಿಸ್ ಆರೋಪಿಸಿದ್ದರು. ‘ಬೇಹುಗಾರಿಕೆ ವಿಭಾಗದ ಮುಖ್ಯಸ್ಥರು ಖುದ್ದಾಗಿ ತಮಗೆ ಇದನ್ನು ತಿಳಿಸಿದ್ದಾರೆ’ ಎಂದು ಅವರು ಸಮರ್ಥಿಸಿಕೊಂಡಿದ್ದರು.