ಶುಕ್ರವಾರ, ನವೆಂಬರ್ 27, 2020
18 °C

ಪ್ರಜಾವಾಣಿ 50 ವರ್ಷಗಳ ಹಿಂದೆ | ಶನಿವಾರ, 24–10–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆಯಲ್ಲಿ ಪ್ರಬಲ ರಾಷ್ಟ್ರಗಳ ಅಸಡ್ಡೆ: ಇಂದಿರಾ ಛೀಮಾರಿ

ವಿಶ್ವಸಂಸ್ಥೆ, ಅ. 23– ವಿಶ್ವಸಂಸ್ಥೆಯ ಚಟುವಟಿಕೆಗಳನ್ನು ನಿರ್ದೇಶಿಸಿ ನಿಯಂತ್ರಣ ದಲ್ಲಿಟ್ಟುಕೊಳ್ಳಲು ಅಥವಾ ಅದನ್ನು ತಮ್ಮ ರಾಷ್ಟ್ರೀಯ ಗುರಿಗಳಿಗಾಗಿ ಒಂದು ಸಾಧನವಾಗಿ ಬಳಸಿಕೊಳ್ಳಲು ಇನ್ನು ಸಾಧ್ಯವಿಲ್ಲವೆಂಬ ಕಾರಣಕ್ಕಾಗಿ ಮಾತ್ರವೇ ಅದನ್ನು ನಿಂದಿಸಿ ಉದಾಸೀನ ಮಾಡುತ್ತಿರುವುದಕ್ಕಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಪ್ರಬಲ ರಾಷ್ಟ್ರಗಳಿಗೆ ಇಂದು ಛೀಮಾರಿ ಹಾಕಿದರು.

ಸಂಸ್ಥೆಯ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀಮತಿ ಗಾಂಧಿಯವರು ಅದರ ಮಹಾಧಿವೇಶನದಲ್ಲಿ ಮಾತನಾಡಿ, ಲೀಗ್ ಆಫ್ ನೇಷನ್ಸ್ ಅನ್ನು ಚಿಂತಾಜನಕ ಪರಿಸ್ಥಿತಿಗೆ ತಂದ ಅದೇ ಹಳೆಯ ಶಕ್ತಿ ಸಮತೋಲನ ಮತ್ತು ಪ್ರಭಾವ ಬೀರಬಲ್ಲ ವಲಯಗಳೆಂಬ ಕಳಂಕಗ್ರಸ್ತ ನೀತಿಗಳನ್ನು ಆ ರಾಷ್ಟ್ರಗಳು ಅನುಸರಿಸುತ್ತಿವೆ ಎಂದು ದೂರಿದರು.

ಹೆಚ್ಚು ಆಸ್ತಿ ಹೊಂದಿದ್ದ ಎಚ್‌.ಎಂ.ಟಿ. ಡೆಪ‍್ಯುಟಿ ಮ್ಯಾನೇಜರ್‌ಗೆ ಶಿಕ್ಷೆ

ಬೆಂಗಳೂರು, ಅ. 23– ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆಪಾದನೆಗೆ ಗುರಿಯಾಗಿದ್ದ ನಗರದ ಎಚ್‌.ಎಂ.ಟಿ.ಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಶ್ರೀ ಪಾಪೇಗೌಡ ಅವರಿಗೆ ವಿಶೇಷ ಸೆಷನ್ಸ್ ನ್ಯಾಯಾಧೀಶ ಶ್ರೀ ಕೆ.ಚನ್ನಬಸಪ್ಪ ಅವರು ಇಂದು 14 ತಿಂಗಳು ಕಠಿಣ ಶಿಕ್ಷೆ ಹಾಗೂ ಒಂದು ಸಹಸ್ರ ರೂಪಾಯಿ ದಂಡ ವಿಧಿಸಿದರು.

ಆಪಾದಿತರು ತಮ್ಮ ಆದಾಯಕ್ಕಿಂತ ಹೆಚ್ಚು, ಅಂದರೆ 70 ಸಹಸ್ರ ರೂಪಾಯಿಗಿಂತಲೂ ಹೆಚ್ಚು ಆಸ್ತಿ ಹೊಂದಿದ್ದರೆಂದು ಸಿಬಿಐನ ವಿಶೇಷ ಪೊಲೀಸರು ಮೊಕದ್ದಮೆ ಹೂಡಿದ್ದರು.ಸೀನಿಯರ್ ಪಬ್ಲಿಕ್ ಪ್ರಾಸಿಕ್ಯೂಟರ್ ವೈ.ರಾಜು ಅವರು ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದರು.

ಸಹಕಾರಿ ಸಂಘಗಳ ಮಿತಿ ಮೀರಿದ ಹಣ ಬಾಕಿ– ಸಚಿವ ಅಹ್ಮದ್ ಆತಂಕ

ನವದೆಹಲಿ, ಅ. 23– ಭಾರಿ ಬಾಕಿಯ ‘ಉತ್ಕಟ ರೋಗವು’ ಸಹಕಾರಿ ಸಂಸ್ಥೆಯ ಅಂತಃಸತ್ವವನ್ನೇ ನಾಶಪಡಿಸುವಂಥ ‘ಸಾಂಕ್ರಾಮಿಕ ಸ್ವರೂಪ’ ತಳೆಯುವುದಕ್ಕೆ ಮುಂಚೆ ಅದರ ವಿರುದ್ಧ ಹೋರಾಡಲು ಸಂಘಟಿತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಆಹಾರ ಮಂತ್ರಿ ಶ್ರೀ ಫಕ್ರುದ್ದೀನ್ ಅಲಿ ಅಹ್ಮದ್‌ ಅವರು ಇಂದು ರಾಜ್ಯಗಳಿಗೆ ಮನವಿ ಮಾಡಿದರು.

ಇಲ್ಲಿನ ವಿಜ್ಞಾನ ಭವನದಲ್ಲಿ ರಾಜ್ಯಗಳ ಸಹಕಾರಿ ಖಾತೆ ಸಚಿವರ ಎರಡು ದಿನಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿದ ಅವರು ‘ರಾಷ್ಟ್ರದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರುವಂಥ ರಾಜ್ಯಗಳಲ್ಲೂ ಈ ‘ಹಣ ಬಾಕಿ’ ರೋಗ ಹರಡುತ್ತಿರುವುದು ತೀವ್ರ ಕಳವಳವನ್ನುಂಟು ಮಾಡಿದೆ’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು