ನವದೆಹಲಿ, ಆ 29– ಉದಕ ಮಂಡಲದಲ್ಲಿರುವ ತಮ್ಮ ಅರಮನೆಯನ್ನು ತಮ್ಮಿಷ್ಟ ಬಂದಂತೆ ವಿಲೇವಾರಿ ಮಾಡಲು ಮೈಸೂರಿನ ಮಾಜಿ ಮಹಾರಾಜರಿಗೆ ಅನುಮತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಕರ್ನಾಟಕ ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ಮತ್ತು ವೀರೇಂದ್ರ ಪಾಟೀಲ್ ಇಂದು ಸಂಸತ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದ ವಿಲೀನ ಕಾಲದಲ್ಲಿ ಮಾಜಿ ಮಹಾರಾಜರು ಮತ್ತು ಕೇಂದ್ರ ಸರ್ಕಾರದ ನಡುವೆ ಆಗಿರುವ ಒಪ್ಪಂದದ ಪ್ರಕಾರ ಬೆಂಗಳೂರು, ಮೈಸೂರು ಮತ್ತು ಉದಕ ಮಂಡಲಗಳಲ್ಲಿನ ಅರಮನೆಗಳನ್ನು ಪರಭಾರೆ ಮಾಡಲಾಗದೆಂದು ಕೆಂಗಲ್ ಮತ್ತು ವೀರೇಂದ್ರ ಪಾಟೀಲ್ ತಿಳಿಸಿದರು.
ನವದೆಹಲಿ, ಆ. 29– ಜಾತಿಯ ಆಧಾರದ ಮೇಲೆ ಹಿಂದುಳಿದ ವರ್ಗವನ್ನು ನಿರ್ಧರಿಸಬೇಕೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆಯಾದರೂ ಕೇಂದ್ರ ಸರ್ಕಾರ ಕೆಲವು ವರ್ಷಗಳ ಹಿಂದೆ ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ನಿಷ್ಕರ್ಶಿಸಬೇಕೆಂದು ಆದೇಶ ನೀಡಿದ್ದು, ಇದರಿಂದ ಅಸಂಖ್ಯಾತ ಭಾರತೀಯರಿಗೆ ತೀವ್ರ ಹಾನಿಯುಂಟಾಗಿದೆಯೆಂದು ಸುಮಾರು ಎಂಬತ್ತು ಮಂದಿ ಸಂಸತ್ ಸದಸ್ಯರು ತಿಳಿಸಿದ್ದಾರೆ.
ಹಿಂದುಳಿದಿರುವಿಕೆಯ ನಿಷ್ಕರ್ಶೆಗೆ ಆರ್ಥಿಕ ಸ್ಥಿತಿಯನ್ನೇ ಅಳತೆಗೋಲಾಗಿಸುವ ಸರ್ಕಾರದ ನಿರ್ಧಾರದಿಂದಾಗಿ ಇತರೆ ಹಿಂದುಳಿದ ಜನರಿಗೆ (ಅಂದರೆ ಹರಿಜನ, ಗಿರಿಜನರನ್ನು ಬಿಟ್ಟು ಉಳಿದವರು) ಆಘಾತವಾಗಿದೆ ಹಾಗೂ ತೀವ್ರ ನೋವುಂಟಾಗಿದೆಯೆಂದು ಇವರುಗಳು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರಿಗೆ ಸಲ್ಲಿಸಿದ ಮನವಿಪತ್ರದಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.