ವಾಷಿಂಗ್ಟನ್, ನ. 9– ಆರು ಅಂಶಗಳ ಕದನವಿರಾಮ ಒಪ್ಪಂದವನ್ನು ಇಸ್ರೇಲ್ ಮತ್ತು ಈಜಿಪ್ಟ್‌ಗಳೆರಡೂ ಒಪ್ಪಿವೆ ಎಂದು ಅಮೆರಿಕ ಸರ್ಕಾರ ಇಂದು ಪ್ರಕಟಿಸಿತು.
ಪಶ್ಚಿಮ ಏಷ್ಯಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಮಾತುಕತೆಗೆ ಹಾದಿ ಸುಗಮಗೊಳಿಸಲು ಉದ್ದೇಶಿಸಲಾಗಿದೆ. ಈ ವರ್ಷದ ಅಂತ್ಯದ ಹೊತ್ತಿಗೆ ಪಶ್ಚಿಮ ಏಷ್ಯಾ ಸಮಸ್ಯೆ ಇತ್ಯರ್ಥದ ಬಗ್ಗೆ ಶಾಂತಿ ಮಾತುಕತೆಗೆ ಇದು ನೆರವಾಗಲಿದೆ.
ಈ ಒಪ್ಪಂದವು ಬಿಕ್ಕಟ್ಟನ್ನು ಸಡಿಲಗೊಳಿಸುತ್ತದೆ. ಯುದ್ಧ ಬಂದಿಗಳ ವಿನಿಮಯಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಸೌದಿ ಅರೇಬಿಯಾದ ರಿಯಾಥ್‌ನಲ್ಲಿ ಅಮೆರಿಕದ ಅಧಿಕಾರಿಗಳು ಇಂದು ತಿಳಿಸಿದರು.
ಮಿತ್ರ ರಾಷ್ಟ್ರ ಭಾರತಕ್ಕೆ ತೈಲ ಸರಬರಾಜು ಕಡಿತ ಆಗದು: ಸೌದಿ ಭರವಸೆ
ನವದೆಹಲಿ, ನ. 9– ಭಾರತಕ್ಕೆ ಪೆಟ್ರೋಲಿಯಂ ಎಣ್ಣೆ ಸರಬರಾಜನ್ನು ಕಡಿಮೆ ಮಾಡುವುದಿಲ್ಲ; ಅದು ಹಿಂದಿನಂತೆಯೇ ಮುಂದುವರಿಯುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಸೌದಿ ಅರೇಬಿಯಾ ತಿಳಿಸಿದೆ.
ತಮ್ಮ ಸರ್ಕಾರ ಕಳುಹಿಸಿದ ಈ ಸ್ವಾಗತಾರ್ಹ ಸುದ್ದಿಯನ್ನು ದೆಹಲಿಯಲ್ಲಿರುವ ಸೌದಿ ಅರೇಬಿಯಾ ಪ್ರತಿನಿಧಿ ಸೂಲೇಮಾನ್ ಅಲ್‌ನಾಸರ್ ಅವರು ಇಂದು ಮಧ್ಯಾಹ್ನ ವಿದೇಶಾಂಗ ವ್ಯವಹಾರ ಖಾತೆಯ ಅಧಿಕಾರಿಗಳಿಗೆ ತಿಳಿಸಿದರು.
‘ಭಾರತಕ್ಕೆ ತೈಲ ಸಬರಾಜು ಖೋತಾ ಮಾಡಲಾಗುವುದೆಂಬ ವರದಿಗಳ ಫಲವಾಗಿ ನಾನು ನಮ್ಮ ಸರ್ಕಾರದ ಜತೆ ಸಂಪರ್ಕ ಬೆಳೆಸಿದೆ. ಭಾರತದ ಮಟ್ಟಿಗೆ ತೈಲ ಸರಬರಾಜು ಹಿಂದಿನಂತೆಯೇ ಮುಂದುವರಿಯುತ್ತದೆಂದು ನಾನು ಈಗ ಹೇಳುವ ಸ್ಥಿತಿಯಲ್ಲಿದ್ದೇನೆ’ ಎಂದು ಸೂಲೇಮಾನ್ ಪತ್ರಕರ್ತರಿಗೆ ತಿಳಿಸಿದರು.