ಪಾಕಿಸ್ತಾನಕ್ಕೆ ಚೀನದ ಕ್ಷಿಪಣಿ ಸಜ್ಜಿತ ನೌಕೆಗಳು
ನವದೆಹಲಿ, ಮಾರ್ಚ್ 29– ಚೀನವು ಪಾಕಿಸ್ತಾನಕ್ಕೆ ಕ್ಷಿಪಣಿಗಳನ್ನು ಜೋಡಿಸಿರುವ ಮಿಲಿಟರಿ ನೌಕೆಗಳನ್ನು ಒದಗಿಸುವುದಾಗಿ ತಿಳಿದು ಬಂದಿದೆಯೆಂದು ವಿದೇಶಾಂಗ ಖಾತೆ ಸಚಿವ ಸ್ವರಣಾಸಿಂಗ್ ಅವರು ಇಂದು ಲೋಕಸಭೆಯಲ್ಲಿ ಹೇಳಿದರು.
ಅಂಥ ಎಷ್ಟು ನೌಕೆಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ ಎಂಬುದು ಖಚಿತವಾಗಿ ಗೊತ್ತಿಲ್ಲ.
ಜನಸಂಘದ ಅಟಲಬಿಹಾರಿ ವಾಜಪೇಯಿ ಮತ್ತಿತರ ನಾಲ್ವರು ಸದಸ್ಯರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡುತ್ತಿದ್ದ ಅವರು ‘ಕೊಮರ್’ ಕ್ಷಿಪಣಿಗಳನ್ನು ಜೋಡಿಸಿದ ನೌಕೆಗಳನ್ನು ರಷ್ಯವು ಪಾಕಿಸ್ತಾನಕ್ಕೆ ಒದಗಿಸಿದೆಯೆಂಬುದನ್ನು ಸ್ಪಷ್ಟವಾಗಿ ನಿರಾಕರಿಸಿದರು.
ರಷ್ಯಾ ನೌಕೆಗಳನ್ನು ಒದಗಿಸಿರುವುದೆಂಬ ಸುದ್ದಿಗೆ ಆಧಾರ ಇಲ್ಲವೆಂದು ತಿಳಿಸಿದ ವಿದೇಶಾಂಗ ಸಚಿವರು ಆ ಬಗ್ಗೆ ರಷ್ಯದ ರಾಯಭಾರ ಕಚೇರಿಯಲ್ಲಿ ಈಗಾಗಲೇ ವಿಚಾರಿಸಲಾಗಿದೆ ಎಂದರು.
ಭಾರತದ ಜತೆ ಬಾಂಧವ್ಯ ಸುಧಾರಣೆ, ಬಾಂಗ್ಲಾದೇಶ ಮಾನ್ಯತೆಗೆ ಭುಟ್ಟೋ ಬಯಕೆ
ನವದೆಹಲಿ, ಮಾರ್ಚ್ 29– ಭಾರತ– ಪಾಕಿಸ್ತಾನ ಬಾಂಧವ್ಯದಲ್ಲಿನ ಬಿಕ್ಕಟ್ಟನ್ನು ‘ಮುರಿಯಬೇಕು’ ಎಂದು ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರು ಇಂದು ರಾತ್ರಿ ಹೇಳಿದರು.
ತಮ್ಮ ರಾಷ್ಟ್ರವನ್ನು ಉದ್ದೇಶಿಸಿ ಪ್ರಸಾರಭಾಷಣ ಮಾಡಿದ ಭುಟ್ಟೋ ಅವರು ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯವನ್ನು ಕಾಡುತ್ತಿರುವ ತೊಂದರೆಗಳನ್ನು ‘ದಾಟಲಾಗುತ್ತದೆ’ ಎಂದು ತಾವು ನಂಬಿರುವುದಾಗಿ ತಿಳಿಸಿದರು.
‘ಪಾಕಿಸ್ತಾನದ ಹಿತದೃಷ್ಟಿಯಿಂದ ಪಾಕಿಸ್ತಾನದ ಹೆಸರಿನಲ್ಲಿ ಅವುಗಳನ್ನು ದಾಟಬೇಕು’ ಎಂದರವರು.
ಬಾಂಗ್ಲಾದೇಶವನ್ನು ಅವರು ಪ್ರಸ್ತಾಪಿಸಿ ಸ್ವತಃ ತಾವು ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಲು ಇಚ್ಛಿಸುತ್ತಿದ್ದುದಾಗಿ ಅವರು ಹೇಳಿ, ‘ಆದರೆ ಬಾಂಗ್ಲಾದೇಶಕ್ಕೆ ಮಾನ್ಯತೆ ಕೂಡದು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ’ ಎಂದರು.
ಆಕ್ಟ್ರಾಯಿ ರದ್ದಿಗೆ ಆಗ್ರಹ
ಬೆಂಗಳೂರು, ಮಾರ್ಚ್ 29– ಆಕ್ಟ್ರಾಯಿ ಸುಂಕ ಕಂದಾಚಾರದ ಪದ್ಧತಿಯಾಗಿದ್ದು ಅದರಿಂದ ಸೋರಿಹೋಗುವ ವರಮಾನವೇ ಹೆಚ್ಚಾಗಿದೆಯೆಂದು ಇಂದು ವಿಧಾನಸಭೆಯಲ್ಲಿ ಸದಸ್ಯರು ಟೀಕಿಸಿ ಅದನ್ನು ತತ್‌ಕ್ಷಣ ರದ್ದು ಮಾಡಲು ಆಗ್ರಹಪಡಿಸಿದರು.
ಪೌರಾಡಳಿತ ಬಾಬಿನ ಬೇಡಿಕೆಗಳ ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸದಸ್ಯ ಶ್ರೀ ಕೆ.ಪುಟ್ಟಸ್ವಾಮಿ ಅವರು
ಪುರಸಭೆಗಳನ್ನು ರದ್ದು ಮಾಡಿ ಆಡಳಿತಾಧಿಕಾರಿಗಳನ್ನು ನೇಮಿಸುವುದು ಜನತಂತ್ರ ವಿರೋಧಿ ಕ್ರಮ ಎಂದು ಕಟುವಾಗಿ ಟೀಕಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.