ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಸಲೆ ಸಿದ್ದಪ್ಪ: ದಲಿತ ಸಾಹಿತ್ಯದ ಪೂರ್ವಸೂರಿ

Last Updated 21 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಸೋಸಲೆ ಸಿದ್ದಪ್ಪ ಅವರು ಹೊಸಗನ್ನಡ ಅರುಣೋದಯ ಕಾಲಘಟ್ಟದ ಬಹುಮುಖ್ಯ ಕವಿ. ಗದ್ಯದ ವಿವಿಧ ಪ್ರಕಾರಗಳಲ್ಲಿಯೂ ಸಾಹಿತ್ಯಕೃಷಿ ಮಾಡಿರುವ ಇವರು, ಹಿರಿಯ ತಲೆಮಾರಿನ ಲೇಖಕರಾಗಿದ್ದಾರೆ. ಬಹುಮುಖ ಪ್ರತಿಭೆಯ ಇವರು; ತಂಬೂರಿ, ಪಿಟೀಲು, ಹಾರ್ಮೋನಿಯಂ ತಾಳಮೇಳ ಮತ್ತು ಚಿಟುಕುದಾಳಗಳ ಬಗ್ಗೆ ಆಸಕ್ತಿ ಇದ್ದ ಸಂಗೀತಪ್ರಿಯರೂ ಆಗಿದ್ದರು. ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಬಗ್ಗೆ ಒಳ್ಳೆಯ ಜ್ಞಾನವಿದ್ದ ಸಿದ್ದಪ್ಪ ಅವರು, ರಾಮಾಯಣ, ಮಹಾಭಾರತಗಳನ್ನು ಕರಗತ ಮಾಡಿಕೊಂಡಿದ್ದರು. ಗಾಂಧಿಮಾರ್ಗಿಗಳಾಗಿದ್ದ ಅವರು, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿಮಾನಿಯಾಗಿದ್ದರು. ಸಾಂಸ್ಕೃತಿಕ, ಚಾರಿತ್ರಿಕ, ಸಾಮಾಜಿಕ, ಧಾರ್ಮಿಕ, ಪೌರಾಣಿಕ, ಆಧ್ಯಾತ್ಮಿಕ ಮುಂತಾದ ವಿಚಾರಗಳ ನೆಲೆಯಲ್ಲಿ ಸಾಹಿತ್ಯ ಕೃಷಿ ಮಾಡಿರುವುದು ಅವರ ಸೃಜನಶೀಲ ಪ್ರತಿಭೆಗೆ ಸಾಕ್ಷಿಯಂತಿದೆ.

ಸಿದ್ದಪ್ಪ ಅವರು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕು ಸೋಸಲೆ ಗ್ರಾಮದವರು. ಸಿದ್ದಪ್ಪಾಜಿ ಒಕ್ಕಲು. ತಂದೆ ಜವರಯ್ಯನ ಸಿದ್ಧಮಲ್ಲಯ್ಯ. ತಾಯಿ ಮಾದಮ್ಮ. ಈ ದಂಪತಿಗೆ 1892ರ ಆಗಸ್ಟ್‌ 18ರಂದು ಜನಿಸಿದರು. ಚಾರಿತ್ರಿಕ ವೈಶಿಷ್ಟ್ಯದ ಸೋಸಲೆ ಗ್ರಾಮದ ದಲಿತ ಸಮುದಾಯ 19ನೇ ಶತಮಾನದಲ್ಲಿಯೇ ಶಿಕ್ಷಣವನ್ನು ಪಡೆದಿದೆ. 1918ರಲ್ಲಿ ಜನಿಸಿದ ಎಸ್.ಎಂ.ಸಿದ್ದಯ್ಯ ಬಿ.ಎಸ್ಸಿ.,ಎಲ್.ಎಲ್.ಬಿ ಪದವಿ ಪಡೆದು ವಕೀಲರಾಗಿ, ಮೈಸೂರು–ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯರಾಗಿಯೂ ಆಯ್ಕೆಯಾದವರು. ಸೋಸಲೆ ಬಿ.ರಾಚಪ್ಪ ಅವರು ಮೈಸೂರು ಪ್ರಾಂತ್ಯದಲ್ಲಿ ಬಿ.ಎ ಪದವಿ ಪಡೆದು ಕಮಿಷನರ್ ಆದ ನಿಮ್ನವರ್ಗದ ಮೊದಲ ವ್ಯಕ್ತಿ. ಸೋಸಲೆಯ ಡಾ. ಬರಕುಚೇಲ ಎಂಬುವರು ಎಂ.ಬಿ.ಬಿ.ಎಸ್. ಎಂ.ಡಿ ಮಾಡಿ, ಅಮೆರಿಕದಲ್ಲಿ ನೆಲೆಸಿ, ಪ್ರಸಿದ್ಧ ಯೂರಾಲಜಿಸ್ಟ್ ಆಗಿ ಹೆಸರಾದವರು. ಇಂತಹ ತುಂಬ ಅಪರೂಪದ ಸಾಂಸ್ಕೃತಿಕ ವಾತಾವರಣದ ಈ ಸಾಧನೆಗಳಿಗೆ ದಲಿತ ಸಮುದಾಯದಿಂದ ಮೊತ್ತಮೊದಲು ಒಂಟಿಸಲಗದಂತೆ ಅಕ್ಷರಲೋಕವನ್ನು ಪ್ರವೇಶಿಸಿರುವ, ಹೊಸಗನ್ನಡ ಅರುಣೋದಯ ಕಾಲದ ಮೊದಲ ತಲೆಮಾರಿನ ದಲಿತ ಕವಿ, ಲೇಖಕ, ಶಿಕ್ಷಕ ಆಗಿರುವ ಸೋಸಲೆ ಸಿದ್ದಪ್ಪ ಅವರು ಇದಕ್ಕೆಲ್ಲ ಬಹುಮುಖ್ಯ ಪ್ರೇರಣೆ.

ಸಿದ್ದಪ್ಪನವರು ಬಾಲ್ಯದಿಂದಲೂ ಸ್ವಭಾವತಃ ಗಂಭೀರ ಸ್ವಭಾವದವರು. ತಂದೆ-ತಾಯಿಗಳ ಪ್ರಬಲ ಇಚ್ಛೆಯಂತೆ ಊರ ಪಕ್ಕದ ಕಾವೇರಿ ನದಿದಂಡೆಯ ಮರಳ ಮೇಲೆ ಅಕ್ಷರ ಅಭ್ಯಾಸ ಮಾಡಿದವರು. ಈ ತಲೆಮಾರು ದಾಸ ಪರಂಪರೆಯ ಅಧ್ವೈರ್ಯುಗಳಾದ ಪುರಂದರದಾಸರು ಹಾಗೂ ಕನಕದಾಸರ ಗುರುಗಳಾಗಿದ್ದ, ಬನ್ನೂರು ಮೂಲದ ವ್ಯಾಸರಾಯರು ಸ್ಥಾಪಿಸಿದ ಸೋಸಲೆ ಮಠದಲ್ಲಿ ನಡೆಯುತ್ತಿದ್ದ ಪೂಜೆ ಪುನಸ್ಕಾರ, ಮಡಿಮೈಲಿಗೆ, ಆಚಾರ ವಿಚಾರಗಳ ಪ್ರಭಾವಕ್ಕೆ ಒಳಗಾಗಿದೆ. ಸಿದ್ಧಮಲ್ಲಯ್ಯ, ಮಗ ಸಿದ್ದಪ್ಪ ಅವರಿಗೆ ಶಿಕ್ಷಣದ ಅಭಿರುಚಿ ಹುಟ್ಟಿಸಿ ಅಕ್ಷರಮೋಹವನ್ನು ಬೆಳೆಸಿದರು. ಬ್ರಾಹ್ಮಣ ಅಗ್ರಹಾರವೆಂದೇ ಹೆಸರಾಗಿದ್ದ ಸೋಸಲೆಯಲ್ಲಿ ರಾಮಾಯಣ, ಮಹಾಭಾರತ ಕತೆಗಳನ್ನು ಪಠಿಸುವ ಅಭ್ಯಾಸ ಮಾಡಿಸಿದರು. ಕಟ್ಟಾ ದೈವಭಕ್ತ ಮನೆತನವಾಗಿದ್ದ ಸಿದ್ದಪ್ಪ ಅವರ ಮನೆಯಲ್ಲಿ ನಿತ್ಯವೂ ಧರ್ಮಗ್ರಂಥಗಳ ಪಠಣ ನಡೆಯುತ್ತಿತ್ತು. ಓದಿನಲ್ಲಿ ತುಂಬು ಆಸಕ್ತಿ ಇದ್ದ ಸಿದ್ದಪ್ಪ ಅವರು, ಬಾಲ್ಯದಲ್ಲಿದ್ದಾಗಲೇ ಕಾವೇರಿ ನದಿತೀರದ ಪ್ರಕೃತಿ ಸೊಬಗು ಕಂಡು ಹಿಗ್ಗುತ್ತಿದ್ದರಂತೆ.

ಪ್ರಾಥಮಿಕ ಶಿಕ್ಷಣವನ್ನು ಸೋಸಲೆಯಲ್ಲಿಯೆ ಮುಗಿಸಿದ ಸಿದ್ದಪ್ಪ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನಲ್ಲಿ ಅಸ್ಪೃಶ್ಯ ಮಕ್ಕಳಿಗಾಗಿ ತೆರೆದಿದ್ದ ವಸತಿಶಿಕ್ಷಣ ಶಾಲೆಗಳಲ್ಲಿ ಶಿಕ್ಷಣ ಪಡೆದರು. ತಲಕಾಡು ರಂಗೇಗೌಡ, ವರದರಾಜ ಅಯ್ಯಂಗಾರ್ ಅವರಂಥ ಶಿಕ್ಷಕರು ಸಿದ್ದಪ್ಪ ಅವರ ಪ್ರತಿಭೆಯನ್ನು ಮೆಚ್ಚಿ ಪ್ರೋತ್ಸಾಹಿಸಿದರು. 1910ರಲ್ಲಿಯೇ ಸಿದ್ದಪ್ಪ ಅವರು ಮೈಸೂರು ಪ್ರಾಂತ್ಯದಲ್ಲಿ ದಲಿತರಲ್ಲಿ ಮೊದಲಿಗರಾಗಿ ಲೋಯರ್ ಸೆಕೆಂಡರಿ (ಕೆ.ಎಲ್), ಆನಂತರ ಯು.ಎಸ್. ಕೋರ್ಸನ್ನು ಮುಗಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಸಿದ್ದಪ್ಪ ಅವರು ಸಾಹಿತ್ಯವನ್ನು ಗಾಢವಾಗಿ ಅಧ್ಯಯನ ಮಾಡುವ, ಬರೆಯುವ ಹವ್ಯಾಸದವರಾಗಿದ್ದರು. ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯನ್ನು ಗಾಢವಾಗಿ ಅಧ್ಯಯನ ಮಾಡಿದ್ದರು.

ಸಾಹಿತ್ಯ, ಸಂಗೀತ, ಕಲೆ ಶಾಸ್ತ್ರೀಯತೆಯ ಅಪಾರ ಜ್ಞಾನಸಂಪತ್ತನ್ನು ಗಳಿಸಿದ್ದ ಸಿದ್ದಪ್ಪ, 1915ರಲ್ಲಿಯೆ ಟಿ.ನರಸೀಪುರ ತಾಲ್ಲೂಕು
ಬನ್ನೂರಿನ ಪಂಚಮ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡಿದ್ದರು. ನವೋದಯ ಸಾಹಿತ್ಯ ದಿಗ್ಗಜರು ಬರವಣಿಗೆ ಪ್ರಾರಂಭಿಸುವ ಮುನ್ನವೇ ಸಿದ್ದಪ್ಪ ಅವರು ತಮ್ಮ ಶಿಕ್ಷಕ ವೃತ್ತಿಯ ಜೊತೆಜೊತೆಗೆ ಸಾಹಿತ್ಯ ರಚಿಸುವ ಹಾದಿಯಲ್ಲಿದ್ದರು. 1917ರಲ್ಲಿ ‘ಶ್ರೀ ಚಾಂಗದೇವನ ಚರಿತ್ರೆ’, 1922ರಲ್ಲಿ ‘ಇಂಗ್ಲೆಂಡ್‌ ಚರಿತ್ರೆ’, 1928ರಲ್ಲಿ ‘ಆಳುವ ಮಹಾಸ್ವಾಮಿಯವರಾದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್‌ ಅವರ ದಿವ್ಯಚರಿತ್ರೆ’ ಎಂಬ ವಿಶಿಷ್ಟ ಕೃತಿಗಳನ್ನು ಬರೆದಿದ್ದಾರೆ.

1926ರಲ್ಲಿ ಬಂದ ಬಿ.ಎಂ.ಶ್ರೀ ಅವರ ‘ಇಂಗ್ಲಿಷ್‌ ಗೀತೆಗಳು’ ಕೃತಿ ಬರುವ ಮುಂಚೆಯೇ ಇವರು ಎರಡು ಕೃತಿಗಳನ್ನು ಬರೆದಿದ್ದರು. ಕನ್ನಡ ನವೋದಯ ಕಾವ್ಯ ಚಿಗುರೊಡೆಯುವ ಮುನ್ನವೇ ಕಾವ್ಯಕೃಷಿ ಮಾಡಿರುವ ಸಿದ್ದಪ್ಪ, 1931ರಲ್ಲಿ ಭಾಮಿನಿಷಟ್ಪದಿಯಲ್ಲಿ ಬರೆದಿರುವ ‘ಗೋವುಗಳ ಗೋಳಾಟ’ ಖಂಡಕಾವ್ಯ ಪ್ರಕಟವಾಗಿತ್ತು. ಅಂದಿನ ವಿಮರ್ಶಕರು ಸಿದ್ದಪ್ಪ ಅವರ ಸಾಹಿತ್ಯ ಕೃಷಿಯನ್ನು ಗುರುತಿಸದೆ ಹೋಗಿರುವುದರಿಂದ ಅವರ ಇತರೆ ಕೃತಿಗಳಿಗೆ ಪ್ರೋತ್ಸಾಹ ಸಿಗದೆ ಹಸ್ತಪ್ರತಿಯಲ್ಲೇ ಉಳಿದಿರುವುದು ವಿಷಾದದ ಸಂಗತಿ.

ಸಿದ್ದಪ್ಪ ಅವರದು ಒಂದರ್ಥದಲ್ಲಿ ಗಜಗಂಭೀರವಾದ ವ್ಯಕ್ತಿತ್ವ. ಸುಮಾರು ಆರುಅಡಿ ಎತ್ತರದ ಗಟ್ಟಿಮುಟ್ಟಾದಾಳು. ಎತ್ತರದ ವ್ಯಕ್ತಿತ್ವ, ಕಟ್ಟುನಿಟ್ಟಿನ ಶಿಸ್ತು, ಶಿಕ್ಷಕ ವೃತ್ತಿಯನ್ನು ಪಾವಿತ್ರ್ಯವೆಂದು ಭಾವಿಸಿದ್ದವರು. ಸದಾ ಖಾದಿ ಬಿಳಿ ನಿಲುವಂಗಿ. ಅದರ ಮೇಲೆ ಖಾದಿಕೋಟು, ಬಿಳಿಯ ಕಚ್ಚೆಪಂಚೆ ತೊಡುತ್ತಿದ್ದರು. ತಲೆಗೆ ಮೈಸೂರು ರುಮಾಲುಪೇಟ. ಸ್ವಚ್ಛತೆಗೆ ಮೊದಲು ಆದ್ಯತೆ ನೀಡುತ್ತಿದ್ದರಂತೆ. ಕೈಯಲ್ಲೊಂದು ಚರ್ಮದಬ್ಯಾಗನ್ನು ಹಿಡಿದುಕೊಂಡು, ಅದರೊಳಗೆ ತಮ್ಮ ಬರಹಗಳನ್ನು ತುಂಬಿಕೊಂಡು ಶಿಸ್ತಿನ ಸಿಪಾಯಿಯಂತೆ ಶಿಕ್ಷಕವೃತ್ತಿಯನ್ನು ಮಾಡಿರುವ ಹೆಗ್ಗಳಿಕೆ ಇವರದು.

1915ರಲ್ಲಿ ಬನ್ನೂರಿನ ಪಂಚಮಶಾಲೆಯಲ್ಲಿ ಶಿಕ್ಷಕವೃತ್ತಿ ಆರಂಭಿಸಿದರು. ಬಳಿಕ ಮೈಸೂರು ಜಲಪುರಿಗೆ ವರ್ಗಾವಣೆಗೊಂಡರು. ಮುಂದೆ ಇಟ್ಟಿಗೆಗೂಡಿನ ಶಾಲೆಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದರು. ಹೀಗೆ ಅಗಾಧಪ್ರೀತಿಯಿಂದ ಶಿಕ್ಷಣ ಭೀಷ್ಮನಂತೆ ಮಕ್ಕಳಿಗೆ ಅಕ್ಷರ ಕಲಿಸುವ ಕಾಯಕ ಮಾಡುತ್ತ 1942ರಲ್ಲಿ ನಿವೃತ್ತಿ ಹೊಂದಿದರು. ಬೋಧಿಸುವುದನ್ನು ಒಂದು ಕಲೆ ಎಂದು ನಂಬಿದ್ದ ಸಿದ್ದಪ್ಪ, ತಮ್ಮ ಅಪಾರವಾದ ಬೋಧನಾನುಭವದ ಸಾರದಂತೆ ‘ಬಾಲಬೋಧೆ’ ಕೃತಿಯನ್ನು ಬರೆದಿದ್ದಾರೆ. ಶಿಕ್ಷಕವೃತ್ತಿಯಿಂದ ನಿವೃತ್ತರಾದ ಸಿದ್ದಪ್ಪ ಆನಂತರ 1954ರಲ್ಲಿ ನಿಧನರಾಗುವವರೆಗೂ ತಮ್ಮನ್ನು ತಾವು ಸಾಹಿತ್ಯಸೃಷ್ಟಿಗೆ ತೊಡಗಿಸಿಕೊಂಡರು.

ಸಿದ್ದಪ್ಪ ಅಪ್ಪಟ ಕಾವ್ಯಪ್ರತಿಭೆ. ಛಂದಸ್ಸು-ಅಲಂಕಾರಗಳಂತಹ ಶಾಸ್ತ್ರೀಯ ಶಿಷ್ಟಪರಂಪರೆಯ ಕವಿ. ‘ಗೋವುಗಳ ಗೋಳಾಟ’ ಕಾವ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದಾರೆ.

‘ಸಣ್ಣಕುಲದವ ದೊಡ್ಡಕುಲದವ

ನೆನ್ನುವಂತಹ ಭಾವನೆಯ ನೀ

ವಿನ್ನು ಮನದೊಳು ತಂದುಕೊಳ್ಳದೆ ಮನ್ನಿಸುವುದೆನ್ನ

ಸಣ್ಣಮಳಲೊಗಿಪ್ಪ ವಜ್ರವು

ತನ್ನ ಪ್ರಭೆಯನು ತೋರದಿರುವುದೆ

ಸಣ್ಣದೊಡ್ಡವನೆಂಬ ಭಾವನೆ ಸಣ್ಣವಗೆ ಮಾತ್ರ’ ಎಂಬ ಚಿತ್ರಣ ಚಿಂತನಶೀಲವಾಗಿದೆ.

1931ರಲ್ಲಿ ಮೈಸೂರು ಡಿಸ್ಟ್ರಿಕ್ಟ್‌ ಆ್ಯಂಡ್‌ ಸೆಷನ್ಸ್‌ ಜಡ್ಜ್‌ ಆಗಿದ್ದ ಕೆ.ನಾರಾಯಣರಾವ್ ಅವರು, 1939ರಲ್ಲಿ ‘ಗಿರಿಜಾ ಕಲ್ಯಾಣವೆಂಬ ಹರಿಕಥೆ ಪುಸ್ತಕವು’, 1942ರಲ್ಲಿ ‘ಚಂದ್ರಹಾಸನ ಬಾಲ್ಯ ಎಂಬ ಹರಿಕಥೆ ಪುಸ್ತಕವು’, ‘ಬೇಡರಕಣ್ಣಪ್ಪನ ಕತೆ’ ಕಾವ್ಯಕೃತಿಗಳಲ್ಲಿ ಸಿದ್ದಪ್ಪ ಅವರು ಲಯ, ಬಿಹಾಸ್, ಬೇಗಡೆ, ಕಂದ, ರೂಪಕತಾಳ, ಕಾಪಿನಾರಾಯಣಿ, ಆದಿತಾಳ, ಅಟ್ಟತಾಳ, ಶಂಕರಾಭರಣ, ಬಿಲಹರಿ ಮುಂತಾದ ಸಂಗೀತಲಯವನ್ನು ಪ್ರಯೋಗ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಿದ್ದಪ್ಪ ಅವರಿಗೆ ‘ನವಕವಿ’ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.

ಸಿದ್ದಪ್ಪನವರ ಗದ್ಯ ಕೂಡ ವಿಶಿಷ್ಟವಾಗಿದೆ. ವ್ಯಾಸರಾಯ ಮಠದ ಗಾಢ ಪ್ರಭಾವವಿದ್ದ ಇವರು ತಮ್ಮ ಕೃತಿಗಳನ್ನು ಪ್ರಾರಂಭಿಸುವ ಮುನ್ನ ‘ಓಂ ಶ್ರೀ ಗುರು ಪರಬ್ರಹ್ಮಾಯ ನಮಃ’ ಈ ರೀತಿಯ ಶಾಸ್ತ್ರೀಯ ಮನೋಧರ್ಮದಿಂದಲೇ ಪ್ರಾರಂಭ ಮಾಡುವ ಪ್ರವೃತ್ತಿ ಹೊಂದಿದ್ದರು. ಇವರ ಹದಿಮೂರು ಗದ್ಯಕೃತಿಗಳು ಕಾವ್ಯಾತ್ಮಕವಾದ ಶಿಷ್ಟಭಾಷೆಯಲ್ಲಿವೆ. ಕೆಲವು ಗದ್ಯ ಪದ್ಯಗಳೆರಡರ ಚಂಪೂಮಾರ್ಗದಲ್ಲಿಯೂ ಇವೆ. ಚಾರಿತ್ರಿಕ ನೆಲೆಯ, ಪೌರಾಣಿಕ ನೆಲೆಯ ಆಧ್ಯಾತ್ಮಿಕ ನೆಲೆಯ, ಮಾನವೀಯ ನೆಲೆಯ ನೀತಿಪ್ರಧಾನವೇ ಇವರ ಗದ್ಯಕೃತಿಯ ತಿರುಳಾಗಿದೆ.

‘ಕಲ್ಯಾಣಪುರುಷನ ಸುಗುಣಗ್ರಂಥ’ ಕೃತಿಯಲ್ಲಿ ‘ಪ್ರಿಯೆಕೇಳು’, ‘ಪ್ರಿಯೆ ಆಲಿಸುವಂತಳಾಗು’ ಎಂಬ ಶೈಲಿ ಇದ್ದು ಕವಿಮುದ್ದಣನ ಮುದ್ದಣ ಮನೋರಮೆಯರ ಸಲ್ಲಾಪದ ಓದಿನ ನೆನಪು ತರುವಂತಿದೆ. 1917ರಲ್ಲಿ ಬರೆದಿರುವ ‘ಶ್ರೀಚಾಂಗದೇವಚರಿತ್ರೆ’, 1922ರಲ್ಲಿ ಬರೆದಿರುವ ‘ಇಂಗ್ಲೆಂಡ್‌ ಚರಿತ್ರೆ’ ಬ್ರಿಟಿಷ್ ಆಳ್ವಿಕೆಯ ಚಾರಿತ್ರಿಕತೆಯನ್ನು ಕಟ್ಟಿಕೊಡುತ್ತವೆ. 1928ರಲ್ಲಿ ಬರೆದಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಚರಿತ್ರೆ ಅವರ ಸಾಂಸ್ಕೃತಿಕ, ಸಾಮಾಜಿಕ ಸುಧಾರಣಾ ಕೆಲಸಗಳ ಮೇಲೆ ಹೊಸಬೆಳಕನ್ನು ಚೆಲ್ಲುವಂತಿದೆ. ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಸ್ನಾನಮಾಡಿ, ಪೂಜೆ ಮುಗಿಸಿ, ಬರವಣಿಗೆ ಕೆಲಸ ಮಾಡುವ ಪ್ರವೃತ್ತಿಯು ಇವರದಾಗಿತ್ತು. ಎಳೆಯಮಕ್ಕಳಿಗೆ ಮಮಕಾರದಿಂದ ಬೋಧಿಸುವ ಬಗ್ಗೆ ‘ಹೊಸಗನ್ನಡ ಬಾಲಬೋಧೆ’ ಕೃತಿಯನ್ನು ಬರೆದಿದ್ದಾರೆ. 1954ರಲ್ಲಿ ಬರೆದಿರುವ ಭಾಷಣರೂಪದ ಪುಸ್ತಕದಲ್ಲಿ ‘ನಂಜನಗೂಡಿಗೆ ನಾವು ದೇವರದರ್ಶನಕ್ಕಾಗಿ ಹೋಗುವುದೇನೊ ನಿಜ. ಆದರೆ ನಂಜುಂಡೇಶ್ವರನ ದರ್ಶನ ನಮಗಿಲ್ಲ. ನಮ್ಮ ದರ್ಶನ ನಂಜುಂಡೇಶ್ವರನಿಗಿಲ್ಲ’ ಎಂಬ ಸಿದ್ದಪ್ಪ ಅವರ ವಿಷಾದನೀಯ ಮಾತುಗಳು ಅಂದಿನ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುತ್ತವೆ.

ದಲಿತರು ಎಂದರೆ ಅಯ್ಯೋ ಕಡುಕಷ್ಟದಲ್ಲಿರುವವರು, ಅವರ ಬದುಕು ದುರ್ಗಮಯ, ಅಸ್ಪೃಶ್ಯರು ಎಂಬ ಸಾಂಪ್ರದಾಯಿಕ ಅಭಿಪ್ರಾಯಗಳಿಗಿಂತ ಭಿನ್ನವಾಗಿ ದಲಿತ ಸಮುದಾಯ ಬದುಕಿದೆ. ಸಾಂಸ್ಕೃತಿಕಲೋಕ, ಸಾಮಾಜಿಕ ಲೋಕ, ಆಧ್ಯಾತ್ಮಿಕಲೋಕ, ಸಾಹಿತ್ಯ ಸಂಗೀತಲೋಕ, ಶೈಕ್ಷಣಿಕ ಲೋಕದಲ್ಲಿ ಅವರದೇ ಆದ ಕಾರ್ಯಸಾಧನೆ ಮಾಡಿದವರು ಇದ್ದಾರೆ ಎಂಬುದನ್ನು ಸಿದ್ದಪ್ಪ ಅವರಂಥ ಸಾಧಕರ ಮೂಲಕ ನೋಡುವ ಅವಶ್ಯಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT