ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಾ ಬದುಕು ಬದಲಿಸಿದ ದುರಂತ!

Published 4 ಫೆಬ್ರುವರಿ 2024, 0:03 IST
Last Updated 4 ಫೆಬ್ರುವರಿ 2024, 0:03 IST
ಅಕ್ಷರ ಗಾತ್ರ

ಅದು ತಮಿಳುನಾಡಿನ ವೆಲ್ಲೂರಿನಲ್ಲಿರುವ ಸಿಎಂಸಿ ಆಸ್ಪತ್ರೆ. ಅದರ ವಾರ್ಡ್‌ವೊಂದರಲ್ಲಿ ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಪುಟ್ಟ ಮಗಳು ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಇತ್ತ ಮೂಲೆಯಲ್ಲಿ ಕುಳಿತ ತಾಯಿ ‘ಮಗಳಿಗೆ ಮರುಜೀವ ಸಿಕ್ಕರೆ, ಅವಳನ್ನು ಇದೇ ಆಸ್ಪತ್ರೆಯಲ್ಲಿ ವೈದ್ಯೆಯನ್ನಾಗಿಸುತ್ತೇನೆ, ಸುಟ್ಟಗಾಯಗಳ ಚಿಕಿತ್ಸಕಿಯಾಗಿ ಮಾಡುತ್ತೇನೆ’ ಎಂದು ಮನಸ್ಸಿನಲ್ಲೇ ಗಟ್ಟಿ ಸಂಕಲ್ಪ ಮಾಡುತ್ತಾರೆ. ಆನಂತರ ನಡೆದಿದ್ದು ತಾಯಿ, ಮಗಳ ಹೋರಾಟಗಾಥೆಯೂ ಹೌದು, ಯಶೋಗಾಥೆಯೂ ಕೂಡ.

ಸುಮಾರು ಎಂಟು ವರ್ಷ ಚಿಕಿತ್ಸೆ ಪಡೆವ ಆ ಬಾಲಕಿ, ಬಳಿಕ ಅದೇ ಆಸ್ಪತ್ರೆಯಲ್ಲಿ ವೈದ್ಯೆ ಆಗಿ 30 ವರ್ಷ ಸೇವೆ ಸಲ್ಲಿಸುತ್ತಾರೆ. ಅಲ್ಲದೇ, ಸುಟ್ಟಗಾಯಗಳ ಚಿಕಿತ್ಸಾ ವಿಭಾಗದ ಮುಖ್ಯಸ್ಥೆಯೂ ಆಗುತ್ತಾರೆ.

ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ 2024ನೇ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಬೆಂಗಳೂರಿನ ವೈದ್ಯೆ ಪ್ರೇಮಾ ಧನರಾಜ್‌ ಅವರ ಬದುಕಿನ ಕಥೆ ಇದು. 2002ರಲ್ಲಿ ‘ಅಗ್ನಿ ರಕ್ಷಾ’ ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿದ ಅವರು, ಸುಟ್ಟಗಾಯದ 25 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. ಅವರಲ್ಲಿ ಅನೇಕರಿಗೆ ಪುನರ್ವಸತಿಯನ್ನೂ ಕಲ್ಪಿಸಿದ್ದಾರೆ. 

ವೆಲ್ಲೂರಿನ ಆಸ್ಪತ್ರೆಯಿಂದ ನಿವೃತ್ತಿಯಾದ ಬಳಿಕ, ಬೆಂಗಳೂರಿಗೆ ಮರಳಿ, ಇಲ್ಲಿಯೇ ತಮ್ಮ ಸೇವೆ ಮುಂದುವರೆಸಿದ್ದಾರೆ ಅವರು.

ದುರಂತ ಕೊಟ್ಟ ತಿರುವು

ಗಾಯಕಿಯಾಗುವ ಕನಸು ಕಂಡಿದ್ದ ಪ್ರೇಮಾ ಅವರು ಎಂಟನೇ ವಯಸ್ಸಿನಲ್ಲೇ ಭಾರೀ ದುರಂತಕ್ಕೆ ಒಳಗಾಗುತ್ತಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆಎಣ್ಣೆ ಸ್ಟೌನಲ್ಲಿ ಕಾಫಿ ಮಾಡುವಾಗ ಅವಘಡ ಸಂಭವಿಸುತ್ತದೆ. ಸ್ಟೌ ಉರಿಯುತ್ತಿರುವಾಗಲೇ ಅವರು ಅದಕ್ಕೆ ಸೀಮೆಎಣ್ಣೆ ಹಾಕುತ್ತಾರೆ. ಸ್ಟೌ ಸ್ಫೋಟಗೊಳ್ಳುತ್ತದೆ. ಅವರ ದೇಹ ಶೇಕಡ 50 ರಷ್ಟು ಸುಟ್ಟುಹೋಗುತ್ತದೆ.

ಸುಟ್ಟಗಾಯಗಳಿಗೆ ಸರಿಯಾದ ಚಿಕಿತ್ಸೆ ಇಲ್ಲದ ಸಮಯ ಅದು. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅವರು ಒಂದು ತಿಂಗಳು ಚಿಕಿತ್ಸೆ ಪಡೆಯುತ್ತಾರೆ. ಆದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಅವರ ತುಟಿ ಎದೆಗೆ ಅಂಟಿ ಕತ್ತು ಕೂಡಾ ಬಾಗುತ್ತದೆ. ಮಗಳನ್ನು ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ನಿರ್ಧರಿಸುತ್ತಾರೆ. ಅಲ್ಲಿ ಹಲವು ತಿಂಗಳು ಚಿಕಿತ್ಸೆ ಪಡೆದ ಬಳಿಕ ಪ್ರೇಮಾ ಅವರ ಆರೋಗ್ಯ ಸುಧಾರಿಸುತ್ತದೆ. ಬಳಿಕ ಸುಮಾರು ಎಂಟು ವರ್ಷ ಅವರಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತದೆ. ಪ್ರೇಮಾ ಅವರು ಒಟ್ಟು 28 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುತ್ತಾರೆ!

‘ಸುಟ್ಟಗಾಯದ ಸಂತ್ರಸ್ತರಿಗೆ ಪ್ರಪಂಚ ಅಸಹನೀಯ ಎನ್ನುವುದು ಚಿಕ್ಕ ವಯಸ್ಸಿನಲ್ಲೇ ನನ್ನ ಅನುಭವಕ್ಕೆ ಬಂತು. ಸರೀಕರ ಅಪಹಾಸ್ಯ, ಸಾರ್ವಜನಿಕ ಸ್ಥಳಗಳಲ್ಲಿ ಎವೆಯಿಕ್ಕದೇ ನೋಡುವ ಕಣ್ಣುಗಳು, ದೂರ ಸರಿದು ನಿಲ್ಲುವ ಸಹಪಾಠಿಗಳು–ಇವೇ ನನ್ನ ಬಾಲ್ಯವಾಗಿತ್ತು’ ಎಂದು ಡಾ.ಪ್ರೇಮಾ ನೆನಪಿಸಿಕೊಳ್ಳುತ್ತಾರೆ. 

ತಾಯಿಯೇ ಶಕ್ತಿ

ತಮ್ಮ ಬದುಕಿನಲ್ಲಿ ತಾಯಿಯ ಪಾತ್ರ ತುಂಬಾ ದೊಡ್ಡದು ಎನ್ನುತ್ತಾರೆ ಅವರು. ಹೊರಗಿನ ಪ್ರಪಂಚವನ್ನು ಎದುರಿಸುವ ಧೈರ್ಯವಿಲ್ಲದೆ ಇನ್ನು ಮುಂದೆ ಶಾಲೆಗೆ ಹೋಗುವುದಿಲ್ಲ ಎಂದು ಹಟಹಿಡಿದು ಕುಳಿತಿದ್ದ ಮಗಳನ್ನು ‘ನಿನ್ನಿಂದ ಮಹತ್ತರ ಸಾಧನೆ ಆಗುವುದಿದೆ. ಅದಕ್ಕಾಗಿ ಈ ಅವಘಡಕ್ಕೆ ದೇವರು ನಿನ್ನನ್ನು ಆರಿಸಿದ್ದಾನೆ. ನೀನಿರುವಂತೆ ನಿನ್ನನ್ನು ಒಪ್ಪಿಕೊಂಡು ಸಾಧನೆಯ ಕಡೆ ಗಮನಹರಿಸು’ ಎಂದು ಹುರಿದುಂಬಿಸಿದ್ದು ಗಟ್ಟಿಗಿತ್ತಿ ತಾಯಿ. 

ಚಿಕಿತ್ಸೆಗಾಗಿ ಆಗಾಗ ವೆಲ್ಲೂರಿಗೆ ಹೋಗಬೇಕಾದ್ದರಿಂದ ಪ್ರೇಮಾ ಅವರಿಗೆ ಶಾಲೆಗೆ ಹೋಗಲಾಗಲಿಲ್ಲ. ಅದಕ್ಕಾಗಿ ನೇರವಾಗಿ 10ನೇ ತರಗತಿ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಪಿಯುಸಿಗೆ ಬಿಎಂಎಸ್‌ ಕಾಲೇಜಿಗೆ ಸೇರುತ್ತಾರೆ. ಅವರಿಗೆ ಯಾವುದೋ ಚರ್ಮರೋಗವಿದೆ ಎಂದು ಅನುಮಾನಿಸುವ ಸಹಪಾಠಿಗಳು ಅವರಿಂದ ದೂರ ಕುಳಿತುಕೊಳ್ಳುತ್ತಾರೆ. ಗುರಿಯತ್ತ ಗಮನ ನೆಟ್ಟಾಗ ಈ ಅವಮಾನಗಳಿಗೆ ಅಂಜಬೇಕೇ? ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ. ಅಲ್ಲಿಂದ ಆಚೆಗೆ ಅವರು ಎಂದೂ ತಮಗಾದ ಸ್ಥಿತಿ ಬಗ್ಗೆ ನೋಯಿವುದಿಲ್ಲ, ಬೇಯುವುದಿಲ್ಲ, ಬೇಸರಿಸುವುದೂ ಇಲ್ಲ.

ಬಿಎಸ್‌ಸಿಯಲ್ಲಿ ವಿಶ್ವವಿದ್ಯಾಯಲಕ್ಕೇ ಮೊದಲಿಗರಾದ ಪ್ರೇಮಾ ಅವರಿಗೆ ಹುಬ್ಬಳ್ಳಿಯಲ್ಲಿ ಎಂಬಿಬಿಎಸ್‌ಗೆ ಪ್ರವೇಶಾತಿಯೂ ದೊರೆಯುತ್ತದೆ. ಬಳಿಕ ಚಿಕಿತ್ಸೆ ಪಡೆದ ವೆಲ್ಲೂರು ಕಾಲೇಜಿನಲ್ಲೇ ಎಂಎಸ್‌ (ಜನರಲ್‌ ಸರ್ಜರಿ) ವ್ಯಾಸಂಗ ಮಾಡುತ್ತಾರೆ. ನಂತರ ಲುಧಿಯಾನದಲ್ಲಿ ಪ್ಲಾಸ್ಟಿಕ್‌ ಸರ್ಜರಿಯಲ್ಲಿ ಪದವಿ ಪೂರೈಸುತ್ತಾರೆ. ಈಗಲೂ ಪ್ರೇಮಾ ಅವರು ದೇಶದ ಅತ್ಯಂತ ಜನಪ್ರಿಯ ಪ್ಲಾಸ್ಟಿಕ್‌ ಸರ್ಜನ್‌ಗಳಲ್ಲಿ ಒಬ್ಬರು. ದೇಶದ ಪ್ಲಾಸ್ಟಿಕ್‌ ಸರ್ಜರಿ, ಕಾಸ್ಮೆಟಾಲಜಿ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅನನ್ಯ.

ಅಮೆರಿಕ ಮತ್ತಿತರ ದೇಶಗಳಿಗೆ ತೆರಳಿ ಪ್ಲಾಸ್ಟಿಕ್ ಸರ್ಜರಿ, ಕಾಸ್ಮೆಟಾಲಜಿ ಕುರಿತು ಹಲವು ಪದವಿ ಪಡೆದಿದ್ದಾರೆ. ವಿದೇಶಗಳಲ್ಲಿ ಕಲಿತ ವಿದ್ಯೆಯನ್ನು ದೇಶದ ಪ್ಲಾಸ್ಟಿಕ್‌ ಸರ್ಜರಿ ಕ್ಷೇತ್ರದ ಬೆಳವಣಿಗೆಗೆ ವಿನಿಯೋಗಿಸಿದ್ದಾರೆ. ವಿವಿಧ ವೈದ್ಯಕೀಯ ಜರ್ನಲ್‌ಗಳಲ್ಲಿ 130 ಪ್ರಕಟಣೆಗಳು, 5 ಪುಸ್ತಕಗಳನ್ನು ಅವರು ಬರೆದಿದ್ದಾರೆ. 60 ಸಂಶೋಧನೆಗಳನ್ನು ಮಾಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ದೇಶ ವಿದೇಶಗಳ 10 ಪದವಿಗಳನ್ನು ಅವರು ಗಳಿಸಿದ್ದಾರೆ. 

ಇಷ್ಟೆಲ್ಲಾ ಸಾಧನೆ ಮಾಡಿರುವ ಅವರನ್ನು ಅರಸಿಬಂದ ಅವಕಾಶಗಳೇನೂ ಕಡಿಮೆಯಿಲ್ಲ. ಆದರೆ ತಾಯಿಯ ಆಸೆಯಂತೆ ಅವರು ವೆಲ್ಲೂರಿನ ಸಿಎಂಸಿ ಆಸ್ಪತ್ರೆಯಲ್ಲೇ ಉಳಿಯುತ್ತಾರೆ. ಬಡಜನರ ಸೇವೆ ಮಾಡುತ್ತಾರೆ.

‘ವೃತ್ತಿ ಆರಂಭಿಸಿದಾಗ ₹300 ಸಂಬಳ ಪಡೆಯುತ್ತಿದ್ದೆ. ನಿವೃತ್ತಳಾಗುವಾಗ ₹60,000 ಸಂಬಳ ಪಡೆಯುತ್ತಿದ್ದೆ. ಎಂದಿಗೂ ಅದ್ದೂರಿಯಾಗಿ ಬದುಕಬೇಕು ಎಂದಾಗಲೀ, ಇನ್ನೂ ಹೆಚ್ಚು ಹಣ ಗಳಿಸಬೇಕು ಎಂದನಿಸಲೇ ಇಲ್ಲ. ಈಗಲೂ ನನಗೆ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಲು ಬರುವುದಿಲ್ಲ’ ಎನ್ನುತ್ತಾರೆ ಪ್ರೇಮಾ.  

ಸ್ವತಃ ಸುಟ್ಟುಗಾಯದ ಚಿಕಿತ್ಸೆಗೆ ಒಳಗಾದ ಅವರು, ತಾವು ಉತ್ತಮ ವೈದ್ಯೆಯಾಗಲು ಅನುಭವಗಳೇ ಕಾರಣ ಎನ್ನುತ್ತಾರೆ. ಸುಟ್ಟುಕೊಂಡವರಿಗೆ ನಾಜೂಕಾಗಿ ಶುಶ್ರೂಷೆ ಮಾಡಬೇಕಾಗುತ್ತದೆ. ಡ್ರೆಸ್ಸಿಂಗ್‌ ಮಾಡುವಾಗ ಜೋರಾಗಿ ಎಳೆಯುವುದು, ಕೀಳುವುದು ಮಾಡಬಾರದು. ಚಿಕಿತ್ಸೆ ಪಡೆಯುವಾಗ ತಾವು ಅನುಭವವಿಸಿದ ನೋವನ್ನು ತನ್ನ ರೋಗಿಗಳು ಅನುಭವಿಸಬಾರದು ಎಂಬ ಕಾಳಜಿಯಿಂದ ಅವರು ಚಿಕಿತ್ಸೆ ನೀಡುತ್ತಾರೆ. ಬೆಂಕಿ ಅನಾಹುತಕ್ಕೀಡಾದ ಹಲವಾರು ಮಕ್ಕಳಿಗೆ ಪ್ರೇಮಾ ಅವರೇ ಸ್ಫೂರ್ತಿ.

ಅಗ್ನಿ ರಕ್ಷಾ

ಬಡವರೇ ಹೆಚ್ಚಾಗಿ ಅಗ್ನಿ ಅವಘಡಗಳಿಗೆ ಒಳಗಾಗುತ್ತಾರೆ ಎಂಬುದು ತಮ್ಮ ವೃತ್ತಿಜೀವನದಲ್ಲಿ ಪ್ರೇಮಾ ಕಂಡುಕೊಂಡ ಸತ್ಯ. ಬಡವರು ಉತ್ತಮ ಚಿಕಿತ್ಸೆ ಪಡೆದುಕೊಳ್ಳುವುದು ದುಸ್ತರವೇ. ಅಂಥವರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ಅವರು ‘ಅಗ್ನಿ ರಕ್ಷಾ’ ಸಂಸ್ಥೆ ಆರಂಭಿಸಿದ್ದಾರೆ. ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಿ, ಆಪ್ತಸಮಾಲೋಚನೆ ನೀಡುವುದಲ್ಲದೇ, ಸಂತ್ರಸ್ತರು ಸ್ವಾವಲಂಬಿಯಾಗಿ ಬದುಕುವಂತೆ ಮಾಡಲು ಹಲವಾರು ರೀತಿಯ ವೃತ್ತಿಪರ ತರಬೇತಿಗಳನ್ನು ನೀಡುತ್ತಾರೆ. ಸಂತ್ರಸ್ತರಲ್ಲಿ ಮದ್ಯವ್ಯಸನಿಗಳಿದ್ದರೆ ಅಥವಾ ಸಂತ್ರಸ್ತೆ ಗಂಡ ಮದ್ಯವ್ಯಸನಿ ಆಗಿದ್ದರೆ ಅವರನ್ನು ವ್ಯಸನಮುಕ್ತರನ್ನಾಗಿ ಮಾಡುವ ಕೆಲಸವನ್ನೂ ಈ ಸಂಸ್ಥೆ ಮಾಡುತ್ತಿದೆ. ಸಂಸ್ಥೆಯ ಉದ್ಯೋಗಿಗಳಲ್ಲಿ ಶೇಕಡ 90 ಮಂದಿ ಸುಟ್ಟುಗಾಯದ ಸಂತ್ರಸ್ತರೇ. ಅವಘಡಕ್ಕೆ ಒಳಗಾದವರ ದೈಹಿಕ, ಮಾನಸಿಕ ವೇದನೆ ಏನೆಂಬುದು ಅರಿತು ಅವರು ಸೇವೆ ಒದಗಿಸುತ್ತಿದ್ದಾರೆ. ಸಂತ್ರಸ್ತರಿಗೆ ಅಗತ್ಯವಿರುವ ಕಾನೂನಾತ್ಮಕ ನೆರವನ್ನೂ ಸಂಸ್ಥೆ ಒದಗಿಸುತ್ತಿದೆ.

‘ದುರಂತವೊಂದನ್ನು ನಾನು ಎದುರಾಗದಿದ್ದರೆ ಕೇವಲ ಸುಂದರ ಮಹಿಳೆಯಾಗಷ್ಟೇ ಇರುತ್ತಿದ್ದೆನೇ ಹೊರತು, ಇಷ್ಟೆಲ್ಲ ಸಾಧನೆ ನನ್ನಿಂದ ಆಗುತ್ತಿರಲಿಲ್ಲ. ನಾವು ನಮ್ಮ ಗುರಿಯತ್ತ ಸಾಗುತ್ತಿದ್ದಾಗ ಬಾಹ್ಯ ಸೌಂದರ್ಯ ಮುಖ್ಯವಾಗುವುದಿಲ್ಲ. ನಾನು ಜೀವನವನ್ನು ತುಂಬಾ ಪ್ರೀತಿಸುತ್ತೇನೆ’ ಎಂದು ಅದಮ್ಯ ಉತ್ಸಾಹದಿಂದ ಹೇಳುತ್ತಾರೆ ಎಪ್ಪತ್ತೆರಡು ವರ್ಷದ ಪ್ರೇಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT