ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಷ್ಠ್ಯಬ್ದಿ ಸಂಭ್ರಮ | ‘ನಿಜಗುಣ’ ಹೊಂದಿದ ವಿಚಾರವಾದಿ

ಬೈಲೂರು ನಿಷ್ಕಲ ಮಂಟಪದ ಶ್ರೀಗಳಿಗೆ ಈಗ ಷಷ್ಠ್ಯಬ್ದಿ ಸಂಭ್ರಮ
Published 24 ಫೆಬ್ರುವರಿ 2024, 4:27 IST
Last Updated 24 ಫೆಬ್ರುವರಿ 2024, 4:27 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ನಿಷ್ಟುರವಾಗಿ ಸತ್ಯ ಹೇಳುವುದು ಮತ್ತು ಸತ್ಯವನ್ನು ನಿಷ್ಟುರವಾಗಿ ಹೇಳುವುದು’ ಇದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವ್ಯಕ್ತಿತ್ವ. ಸತ್ಯ ಪ್ರತಿಪಾದಕ ಸ್ವಾಮೀಜಿಗೆ ಈಗ 60ರ ಸಂಭ್ರಮ. ಹೆಸರಿಗೆ ತಕ್ಕಂತೆಯೇ ಅವರದು ‘ನಿಜ–ಗುಣ’.

ಮೂರು ದಶಕದ ಹಿಂದೆ ಚನ್ನಮ್ಮನ ಕಿತ್ತೂರು ನಾಡಿಗೆ ಬಂದ ನಂತರ ಅವರು ಸಾಮಾಜಿಕ ಪರಿವರ್ತನೆಗೆ ಹೆಜ್ಜೆ ಇಟ್ಟರು. ಸಾಂಪ್ರದಾಯಿಕ, ಮೌಢ್ಯ ಆಚರಣೆಗಳಿಂದ ಸಮಾಜವನ್ನು ಹೊರತರಲು ಮುಂದಾದರು.

‘ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸುವ ಬಗ್ಗೆ ಅವರು ಮಾಡಿದ ಪ್ರಯತ್ನ ಈಗ ಫಲ ನೀಡಿದೆ. ಸಮಾನತೆಯ ಹರಿಕಾರ ಬಸವಣ್ಣನವರ ತತ್ವ– ಆದರ್ಶಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದು ಅವರ ಹಿರಿಮೆ. ನುಡಿದಂತೆ ನಡೆದಿದ್ದು ಅವರಿಗೆ ಸಂದ ಗರಿಮೆ. ಶ್ರೀಗಳ ಕೆಲಸಗಳನ್ನು ಇಂದು ಬೈಲೂರಿನಲ್ಲಿ ಕಾಣಬಹುದು.

ಅವರ ಪ್ರವಚನವೇ ಹಾಗೆ; ಬಂದೂಕಿನಿಂದ ತೂರಿಬಂದ ಗುಂಡಿನ ಹಾಗೆ. ಹೇಳಿಕೆಯಲ್ಲಿ ಯಾವುದೇ ಮುಲಾಜು ಇಟ್ಟುಕೊಳ್ಳುವುದಿಲ್ಲ. ಮೌಢ್ಯಾಚರಣೆಯನ್ನು ಅವರಂತೆ ಪ್ರಬಲವಾಗಿ ವಿರೋಧಿಸುವವರ ಸಂಖ್ಯೆ ಕಡಿಮೆ. ಹೀಗಾಗಿ ಅವರನ್ನು ಪ್ರೀತಿಸುವ, ಗೌರವಿಸುವ ಭಕ್ತರ ಸಂಖ್ಯೆ ಹೆಚ್ಚಿರುವಂತೆ ಅವರನ್ನು ವಿರೋಧಿಸುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಅವರಿಗೆ ಕೊಲೆ ಬೆದರಿಕೆಗಳು ಹೊಸದೇನಲ್ಲ. ಆದರೆ ಸಾತ್ವಿಕ ವಿಚಾರವನ್ನು ಇಂದೇ ಹೇಳಿ ಹೋಗಬೇಕು ಎಂಬ ಕಳಕಳಿ ಅವರಲ್ಲಿ ಹೆಚ್ಚು ಕಾಣುತ್ತದೆ.

ಕಾಣದ ದೇವರನ್ನು ಪ್ರೀತಿಸುವುದಕ್ಕಿಂತ ಕಾಣುವ ಮನುಷ್ಯರನ್ನು ಮೊದಲು ಪ್ರೀತಿಸಿ ಎಂಬುದು ಅವರ ನುಡಿ. ಪ್ರೀತಿಯಿಂದ ಬೆಳೆಸಿದ ತಂದೆ, ತಾಯಿ, ಗುರುಗಳನ್ನು ಪ್ರೀತಿಸಿ, ಪಾಲಕರನ್ನು ವೃದ್ಧಾಶ್ರಮಕ್ಕೆ ತಳ್ಳಬೇಡಿ ಎನ್ನುವುದು ಅವರ ನಿಲುವು.

ಆದರ್ಶ ಗ್ರಾಮವಾದ ಬೈಲೂರು: ‘ಬೈಲೂರಿಗೆ ಕಾಲಿಟ್ಟರೆ ಸಾಕು, ಅನೇಕ ಮಹಾತ್ಮರು, ದಾರ್ಶನಿಕರು, ಸಂತರು, ಕವಿಗಳ ಹೆಸರುಗಳನ್ನು ಬೀದಿಗಳಿಗೆ ನಾಮಕರಣ ಮಾಡಿದ್ದಾರೆ. ಆದರ್ಶ ಊರು ಹೇಗಿರಬೇಕೊ ಎನ್ನುವುದಕ್ಕೆ ಬೈಲೂರು ಸಾಕ್ಷಿಯಾಗಿದೆ. ಒಂದು ಪೀಳಿಗೆಯ ಯುವಜನರಲ್ಲಿ ವಿಚಾರಗಳ ನಾಟಿ ಮಾಡಿದ್ದಾರೆ. ಅವು ಈಗ ಫಲ ಕೊಡುತ್ತಿವೆ’ ಎನ್ನುತ್ತಾರೆ ಬೈಲೂರಿನ ಭಕ್ತರು.

‘ಜೀವನದಲ್ಲಿ ವಿಚಾರಗಳನ್ನು ಸಂತೋಷಕ್ಕಾಗಿ ಕೇಳುವುದಲ್ಲ. ಸಂಪೂರ್ಣವಾಗಿ ಅಲ್ಲದಿದ್ದರೂ, ಶೇಕಡವಾರು ಬದಲಾವಣೆ ಆದರೂ ಆಗಬೇಕು’ ಎಂಬುದು ಶ್ರೀಗಳ ನಿಲುವು. ‘ಕಾವಿ ಹಾಕಿದವರಿಂದ ದೇಶ ಉಳಿಯುತ್ತದೆ ಎಂಬ ನಂಬಿಕೆಯೂ ಬೇಡ. ಜಗತ್ತಿನಲ್ಲಿಯ ದೇವರುಗಳೇ ಮಾನವರ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದ್ದಾರೆ’ ಎನ್ನುವುದು ಅವರ ದೂರು.

‘ಬದುಕಲು ನಿಮಗೆ ಬಿಡಲಿಲ್ಲ. ನೀವು ದುಡಿದದ್ದನ್ನು ನಿಮಗೆ ಉಣ್ಣಲು ಬಿಡಲಿಲ್ಲ, ಧರ್ಮ ಎಂಬ ಅಸ್ತ್ರವನ್ನು ಮನುಷ್ಯನ ಮೇಲೆ ಪ್ರಯೋಗಿಸುತ್ತ, ಶೋಷಣೆ ಮಾಡುತ್ತ ಬದುಕುತ್ತಿರುವ ಮಠಾಧಿಪತಿಗಳಿಗೆ ಧಿಕ್ಕಾರ’ ಎನ್ನುವ ಅವರಿಗೆ, ಜ್ಯೋತಿಷಿಗಳ ವಿರುದ್ಧವಂತೂ ಜಮದಗ್ನಿ ಕೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT