ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

New Year Resolution| ಮನುಷ್ಯ ಪ್ರೀತಿಯೊಂದೇ ಶಾಶ್ವತ: ಕವಿ ಮೆಹಬೂಬ್‌ ಮುಲ್ತಾನಿ

Last Updated 31 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ವರ್ಷಗಳು ಉರುಳಿದಂತೆ ನಾವು ಪ್ರಗತಿಯತ್ತ ಸಾಗುತ್ತಿದ್ದೇವೆ ಎನ್ನುವ ಸೋಗಿನಡಿ ನಾಟಕದ ಪಾತ್ರಧಾರಿಗಳಾಗಿ ನಿಂತಂತೆ ಭಾಸವಾಗುತ್ತಿದೆ. ಕ್ಷಣ ಕ್ಷಣಕ್ಕೂ ನಮ್ಮ ಭದ್ರತೆಯ ಕೋಟೆ ಒಡೆದು ಹೋಳಾಗುತ್ತಿರುವುದನ್ನು ನೋಡುತ್ತ ನಿಲ್ಲುವ ಸರದಿ ನಮ್ಮದಾಗುತ್ತಿದೆ. ಕನ್ನಡಿ ಮುಂದೆ ನಿಂತು ನೋಡಿದರೆ ನಮ್ಮ ಕ್ರೌರ್ಯ ನಮಗೆ ಕಾಣಿಸುವಂತಾಗಿದೆ. ಪ್ರೀತಿ, ಮಮತೆ ತುಂಬಿದ ತಾಯಿ ನಮ್ಮನ್ನು ಪೊರೆದರೂ, ಜಾತಿ, ಧರ್ಮ ಮತ್ತು ರಾಜಕೀಯ ಡೊಂಬರಾಟಗಳು ನಮ್ಮನ್ನು ಮನುಷ್ಯ ಪ್ರೀತಿಯಿಂದ ದೂರಮಾಡುತ್ತಿವೆ. ನಂದನವನಗಳಾಗಿದ್ದ ಯಾವ ಸ್ಥಳಗಳೂ ಇಂದು ಮೊದಲಿನಂತಿಲ್ಲ.

ನಾವು ಮನುಷ್ಯರು ಎನ್ನುವುದನ್ನು ಮರೆತು ಮೃಗಗಳಂತೆ ವರ್ತಿಸುತ್ತಿದ್ದೇವೆ. ನಮ್ಮಲ್ಲಿ ಇರುವ ಮೃಗತ್ವ ಕಡಿಮೆಯಾಗುವಲ್ಲಿ ಸಾಹಿತ್ಯ ಮತ್ತು ಓದಿನ ಪಾತ್ರ ಬಹಳಷ್ಟಿದೆ. ಉತ್ತಮ ಸಮಾಜ ಮತ್ತು ಮನುಷ್ಯನನ್ನು ನಿರ್ಮಿಸುವಲ್ಲಿ ಓದು ಸಹಾಯಕವಾಗಬಹುದೆಂಬ ಭಾವ ನನ್ನದು. ಮನುಷ್ಯನೊಬ್ಬ ಓದನ್ನು ರೂಢಿಸಿಕೊಂಡಾಗ ಸರಿ ತಪ್ಪುಗಳ ಅರಿವು ಮೂಡುವುದು. ಮನುಷ್ಯ ಪ್ರೀತಿಯ ಮಹತ್ವವನ್ನು ಸಾಹಿತ್ಯ ತಿಳಿಸಿಕೊಡುವುದು. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವುದಷ್ಟೇ ಸತ್ಯವೆಂದು ನಂಬಿದ ಯುವ ಜನಾಂಗ ಮರಳಿ ಓದಿನ ಮಾರ್ಗದಲ್ಲಿ ಸಾಗಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಇತಿಹಾಸವನ್ನೆ ಬದಲಿಸುವ ಈ ಕಾಲದಲ್ಲಿ ಯಾವುದು ಸತ್ಯ, ಯಾವುದು ನಿಖರವೆಂದು ತಿಳಿಯುವ ಮತ್ತು ಅದನ್ನು ಜಾಡಿ ಹಿಡಿಯುವ ಜಾಣ್ಮೆ ಕೇವಲ ಓದಿನಿಂದ ಸಾಧ್ಯ. ಸಾಹಿತ್ಯ ಮನುಷ್ಯತ್ವ ಗುಣ ಬೆಳೆಸುವಲ್ಲಿ ಸಹಾಯ ಮಾಡಿದರೆ ಓದು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಈ ವರ್ಷ ನನ್ನನ್ನೂ ಒಳಗೊಂಡು ನಮ್ಮ ಗೆಳೆಯರ ಬಳಗ ಓದಿನ ವಿಸ್ತಾರ ಹೆಚ್ಚಿಸುವ ಮತ್ತು ಮನುಷ್ಯ ಪ್ರೀತಿ ಬೆಳೆಸುವ ಕಾರ್ಯಗಳನ್ನು ಮಾಡುವ ಕನಸು ಹೊಂದಿದೆ. ಒಂದಿಲ್ಲ ಒಂದು ದಿನ ಈ ಮನುಷ್ಯ ಪ್ರೀತಿಯೇ ನಮ್ಮನ್ನು ಉಳಿಸುತ್ತದೆ ಎನ್ನುವ ಆಶಾಭಾವದೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT