ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಪುಸ್ತಕಗಳ ನಂಟು; ಮಾನವೀಯತೆಯೇ ‘ಗಂಟು’

ಶ್ಯಾಮಲಾ ಮಾಧವ, ಮುಂಬೈ
Published 20 ಫೆಬ್ರುವರಿ 2024, 4:19 IST
Last Updated 20 ಫೆಬ್ರುವರಿ 2024, 4:19 IST
ಅಕ್ಷರ ಗಾತ್ರ

ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಮತ್ತು ವೈಚಾರಿಕವಾಗಿ ವಿಶಿಷ್ಟರಾಗಿದ್ದರು ಕೆ.ಟಿ.ಗಟ್ಟಿ ಅವರು. ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳುವುದರಲ್ಲೂ ಅವರ ಕಾಳಜಿ ಅನನ್ಯವಾಗಿತ್ತು. ದೇವರು, ದಿಂಡರು, ಪೂಜೆ ಪುನಸ್ಕಾರದ ಹಂಗು ಅವರಿಗಿರಲಿಲ್ಲ. ಮಾನವೀಯ ಸಂಬಂಧಗಳು ಮತ್ತು ಪುಸ್ತಕಗಳ ನಂಟೇ ಅವರಿಗೆ ಸಾಕಾಗಿತ್ತು.

‘ಸುಧಾ’ ವಾರ ಪತ್ರಿಕೆಯಲ್ಲಿ ಪ್ರಕಟವಾದ ‘ಶಬ್ದಗಳು’ ಕೃತಿಯ ಮೂಲಕ ಓದುಗರಲ್ಲಿ ಸಂಚಲನ ಮೂಡಿಸಿದ ಅವರು ದೂರದ ಇಥಿಯೋಪಿಯಾದಲ್ಲಿದ್ದಾಗಲೂ ಸಾಹಿತ್ಯದ ಒಡನಾಟ ಬಿಡಲಿಲ್ಲ. ಆದ್ದರಿಂದಲೇ ‘ಕರ್ಮಣ್ಯೇ ವಾಧಿಕಾರಸ್ತೇ’, ‘ಅಬ್ರಾಹ್ಮಣ’, ‘ಯುಗಾಂತರ’, ‘ಯುದ್ಧ’, ಕಾದಂಬರಿಗಳು ಮೂಡಿಬಂದವು.

ತಾಯ್ನಾಡಿಗೆ ಮರಳಿದ ಬಳಿಕ ‘ರಾಗಲಹರಿ’, ‘ಪರುಷ’, ‌‘ಸ್ವರ್ಣಮೃಗ’, ‘ನಿರಂತರ’, ‘ಕೆಂಪು ಕಳವೆ’ ಇತ್ಯಾದಿ ಕಾದಂಬರಿಗಳು ಮೂಡಿಬಂದವು. ಶಿಕ್ಷಣ ಸಂಬಂಧಿ ಕೃತಿಗಳೂ ವೈಚಾರಿಕತೆಯನ್ನು ಉದ್ದೀಪನಗೊಳಿಸುವ ಉತ್ಕೃಷ್ಟ ಸಾಹಿತ್ಯವೂ ಓದುಗರನ್ನು ಚಿಂತನೆಗೆ ಹಚ್ಚಿದವು. ಕವನ ಸಂಕಲನ, ಅನುವಾದ, ಮಕ್ಕಳ ನಾಟಕಗಳನ್ನು ಬರೆದ ಅವರು ತುಳು ಭಾಷೆಯಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಅನುವಾದದ ಮೂಲಕ  ಇಂಗ್ಲಿಷ್‌ ಸಾಹಿತ್ಯದ ಸವಿಯನ್ನೂ ಉಣಿಸಿದ್ದಾರೆ.

‘ಶಬ್ದಗಳು’ ಕಾದಂಬರಿಯ ಕಥಾನಾಯಕನ ಅದ್ಭುತ ಬುದ್ಧಿ–ಭಾವ ಸಂಘರ್ಷಕ್ಕೆ ಬೆರಗಾಗದವರು ವಿರಳ. ಅಧ್ಯಾಪನವನ್ನು ವೃತ್ತಿಯಾಗಿಸಿಕೊಂಡಿದ್ದ ಅವರು ತಾನೇ ಒಂದು ವಿಶ್ವವಿದ್ಯಾಲಯ ಎನ್ನುವಂತೆ ಬೆಳೆದರು. ಹೀಗಾಗಿ ಅವರ ಕೃತಿಗಳೂ ಪಾಂಡಿತ್ಯಪೂರ್ಣವಾಗಿದ್ದವು. ‘ಶಬ್ದಗಳು’ ಕೃತಿಯನ್ನು ಓದಿದರೆ ಅದನ್ನು ಬರೆದವರು ಭೌತವಿಜ್ಞಾನಿ ಆಗಿರಬೇಕೆಂದುಕೊಂಡರೆ ಅಚ್ಚರಿ ಇಲ್ಲ. ಭಾಷಾ ವಿಜ್ಞಾನದ ವಿಯಷದಲ್ಲಿ ಅವರ ಪಾಂಡಿತ್ಯ ಅಪಾರ.

ಇದೆಲ್ಲದರ ನಡುವೆ ಅವರ ಜೀವನಪ್ರೀತಿ ಮತ್ತು ಪರರ ಕುರಿತು ಕಾಳಜಿ ವಹಿಸುವ ರೀತಿ ಅನನ್ಯವಾಗಿತ್ತು. ‘ಯುಗಾಂತರ’ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕೆಲವು ಪ್ರಶ್ನೆಗಳನ್ನು ಮುಂದಿಟ್ಟು ಬರೆದ ಪತ್ರ ಓದಿ ನಮ್ಮ ಮನೆ ಮುಂದೆ ‘ಪ್ರತ್ಯಕ್ಷ’ರಾದ ಗಳಿಗೆಯನ್ನು ಮರೆಯಲು ಸಾಧ್ಯವಿಲ್ಲ. ನನ್ನ ಕಂದನ ಕೊನೆಯ ದಿನಗಳಲ್ಲಿ ಪ್ರತಿ ದಿನ ಮೂರು–ನಾಲ್ಕು ಬಾರಿ ಕರೆ ಮಾಡಿ ವಿಚಾರಿಸುತ್ತಿದ್ದ ಅವರ ಸ್ನೇಹಾನುಬಂಧವನ್ನು ಅಳೆಯುವುದು ಹೇಗೆ?

ಕೊನೆಯ ಉಸಿರು ಇರುವ ವರೆಗೂ ಅವರ ಲೇಖನಿ ನಿಲ್ಲದಿರಲಿ ಎಂಬುದು ಅವರ ಸಾಹಿತ್ಯದ ಗಂಧವನ್ನು ಉಂಡವರ ಆಶಯವಾಗಿತ್ತು. ಆದರೆ ಆ ಆಶಯ ಈಡೇರಲಿಲಿಲ್ಲ. ‘ಇನ್ನು ಬರೆಯುವುದು ಏನೂ ಇಲ್ಲ, ಬರೆದು ಮುಗಿದಿದೆ’ ಎಂಬ ಮಾತು ಈಚೆಗೆ ನಾಲ್ಕು ವರ್ಷಗಳ ಹಿಂದೆ ಅವರಿಂದ ಕೇಳಿದಾಗ ಅವರ ಆತ್ಮೀಯತೆಯಿಂದ ಧನ್ಯಳಾಗಿದ್ದ ನನ್ನ ಹೃದಯವೂ ನೊಂದಿತ್ತು.

ಇಥಿಯೋಪಿಯಾದಿಂದ ಮರಳಿ ಉಜಿರೆಯ ‘ವನಸಿರಿ’ಯಲ್ಲಿ ನೆಲೆಸಿದ್ದಾಗ ಸಾಹಿತ್ಯ ಕೃಷಿ, ತೋಟದ ಕೆಲಸದಲ್ಲಿ ಖುಷಿ ಕಾಣುತ್ತಿದ್ದ ಅವರು ವೈಜ್ಞಾನಿಕ ವಿಷಯಗಳ ಬಗ್ಗೆ ಹೊಂದಿದ್ದ ಒಲವು ಬೆರಗು ಮೂಡಿಸುವಂತಿತ್ತು. ‘ಕಂಪ್ಯೂಟರ್ ಬಳಕೆಗೆ ಅವರು ಪ್ರೇರಣೆಯಾಗುತ್ತಿದ್ದರು. ಅರ್ಧ ತಾಸಿನಲ್ಲಿ ಕಂಪ್ಯೂಟರ್‌ ಮೇಲೆ ಆಧಿಪತ್ಯ ಸ್ಥಾಪಿಸಬಹುದು ಎಂದು ಭರವಸೆಯಿಂದ ನುಡಿಯುತ್ತಿದ್ದರು. ಕೊರೊನಾ ಕಾಲದ ನಿರ್ಬಂಧ ಅವರನ್ನು ಅನೇಕ ರೀತಿಯಲ್ಲಿ ಕಾಡಿತ್ತು.

ಭಾಷಾವಿಜ್ಞಾನದ ಮೇಲೆ ಹಿಡಿತವಿದ್ದ ಅವರು ಇಂಗ್ಲಿಷ್ ಉಚ್ಚಾರದ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದರು. ಕಾದಂಬರಿಗಳಲ್ಲಿ ಜನರ ಹೆಸರಾಗಲೀ, ಸ್ಥಳನಾಮಗಳಾಗಲೀ ಪುನರಾವರ್ತನೆ ಆಗದೇ ಇರುವುದು ಗಮನಾರ್ಹ. ಬಡತನದ ಹಿನ್ನೆಲೆಯಿಂದ ಬಂದ ಅವರ ಬೌದ್ಧಿಕ ಶ್ರೀಮಂತಿಕೆ ಅಪಾರ. ಅವರನ್ನು ಕನ್ನಡ ನಾಡು ಹೇಗೆ ಕಂಡಿತು ಎಂಬ ಬಗ್ಗೆ ಮಾತು ಅನಗತ್ಯ. ಅವರು ಅಂತಹ ವಿಚಾರಗಳ ಬಗ್ಗೆ ಚಿಂತಿಸುತ್ತಿರಲಿಲ್ಲ. ಸಾಹಿತ್ಯ ವನ್ನಷ್ಟೇ ಉಸಿರಾಡುತ್ತಿದ್ದುದರಿಂದ ಇತರ ವಿಷಯಗಳು ಅವರಿಗೆ ವರ್ಜ್ಯವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT