ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸಿ ಅನುಕಂಪದ ಅಗತ್ಯ ಅಡ್ವಾಣಿಗಿಲ್ಲ

Last Updated 29 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಅಡ್ವಾಣಿಯವರನ್ನು ಕುರಿತ ದಿನೇಶ್‌ ಅಮಿನ್‌ ಮಟ್ಟು ಅವರ ಬರಹ (ಪ್ರ.ವಾ., ಮಾರ್ಚ್ 27) ‘ಗಾಣಿಗಿತ್ತಿ ಅಯ್ಯೋ ಎಂದರೆ ಮಗುವಿನ ನೆತ್ತಿ ತಣ್ಣಗಾದೀತೇ’ ಎಂಬ, ಹುಸಿ ಅನುಕಂಪವನ್ನು ಲೇವಡಿ ಮಾಡುವ ಗಾದೆ ಮಾತನ್ನು ನೆನಪಿಸುತ್ತದೆ.

‘ಬೆವರಿನ ಗಳಿಕೆ, ಮಾಡಿದ ಕೆಲಸಕ್ಕೆ ಕೂಲಿ ನ್ಯಾಯಬದ್ಧವಾಗಿ ಅವರಿಗೆ ಸಿಗಬೇಕಿತ್ತು’ ಎಂಬ ಅವರ ತೋರಿಕೆಯ ಕಾಳಜಿ ಮತ್ತು ಅನುಕಂಪದ ಉದ್ಗಾರ ಅವರನ್ನು ಪರೋಕ್ಷವಾಗಿ ಹಂಗಿಸುವ ಹುನ್ನಾರವೂ ಹೌದು. ಇಲ್ಲಿ ಅನುಕಂಪಕ್ಕಿಂತ ಹೆಚ್ಚಾಗಿ ತಮ್ಮ ಪಕ್ಷವನ್ನು ಅಧಿಕಾರದ ಪೀಠಕ್ಕೆ ಕೊಂಡೊಯ್ದ ಮನುಷ್ಯನ ವಿಷಯಕ್ಕೆ ಈಗ ಅಧಿಕಾರದ ತುತ್ತ ತುದಿಯಲ್ಲಿರುವ ಮನುಷ್ಯ ತೋರುತ್ತಿರುವ ಕಠೋರ ಮತ್ತು ಕೃತಘ್ನ ನಡೆಯನ್ನು ಎತ್ತಿ ತೋರುವುದೇ ಆಗಿದೆ. ಅಡ್ವಾಣಿಯವರಿಗೆ ಈಗಿನ ಹತಾಶೆಯ ಸ್ಥಿತಿ ಒದಗಿರುವುದನ್ನು ‘ಕೋಮುವಾದದ ಅಗ್ನಿಕುಂಡಕ್ಕೆ ತಳ್ಳಿದ ಪಾಪಕ್ಕೆ ಪ್ರಕೃತಿ ನೀಡಿದ ನ್ಯಾಯ’ ಎಂದು ವ್ಯಾಖ್ಯಾನಿಸಿರುವುದಂತೂ ತಮಾಷೆಯೇ ಸರಿ.

ಕೋಮುವಾದದ ಅಗ್ನಿಕುಂಡಕ್ಕೆ ಈ ದೇಶವನ್ನು ತಳ್ಳುವ ಕಸರತ್ತು ಪ್ರಾರಂಭವಾದದ್ದೇ ಕೋಮು ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿದ ದಿನ. ಆನಂತರದಲ್ಲಿ ಅರ್ಧಶತಮಾನಕ್ಕೂ ಹೆಚ್ಚುಕಾಲ ದೇಶವನ್ನು ಮುನ್ನಡೆಸಿದ ಅಧಿಕಾರಸ್ಥರು ವೋಟಿಗಾಗಿ ಓಲೈಕೆ ರಾಜಕಾರಣದ ಮೂಲಕ ಆ ಅಗ್ನಿಕುಂಡವನ್ನು ಇನ್ನಷ್ಟು ಪ್ರಜ್ವಲಗೊಳಿಸುತ್ತಾ ಹೋದರು. ಅದು ಹೀಗೆ ಎಲ್ಲರನ್ನೂ ಬಲಿ ತೆಗೆದುಕೊಳ್ಳುವ ಮಟ್ಟಕ್ಕೆ ಪ್ರಜ್ವಲಿಸಲು ಕಾರಣವಾದ ನೆರೆಯ ರಾಷ್ಟ್ರ ಪಾಕಿಸ್ತಾನ, ತನ್ನ ನೆಲದಿಂದಲೇ ಕಾಶ್ಮೀರಿ ಪಂಡಿತರು ಕಣ್ಣೀರು ಸುರಿಸುತ್ತ ಕಾಲ್ತೆಗೆದು ಹೋಗುವಂತೆ ಮಾಡಿದ ಪರಿ, ಆನಂತರದಲ್ಲಿ ಭಾರತವನ್ನೇ ಗುರಿಯಾಗಿಸಿಕೊಂಡು ಉಗ್ರರನ್ನು ಪೋಷಿಸುತ್ತಿರುವ ರೀತಿ ಇದಾವುದನ್ನೂ ಪ್ರಸ್ತಾಪಿಸದೆ, ಬರೀ ಅಡ್ವಾಣಿಯವರನ್ನು ಅದಕ್ಕೆ ಕಾರಣರೆಂಬಂತೆ ಬಲಿಪಶು ಮಾಡಿರುವುದು ಸರಿಯಲ್ಲ.

ಆರ್.ಲಕ್ಷ್ಮೀನಾರಾಯಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT