ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಹಾಯಕರ ನೇಮಕ ಯಾವಾಗ?

Last Updated 11 ನವೆಂಬರ್ 2018, 20:00 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರವು 2009ರ ಸೆಪ್ಟೆಂಬರ್‌ ತಿಂಗಳಲ್ಲಿ ನಡೆಸಿದ್ದ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕೃಷಿ ಸಹಾಯಕರನ್ನು ನೇಮಕ ಮಾಡುವ ಮೂಲಕ ಕೃಷಿ ಇಲಾಖೆಯ ಬಲವರ್ಧನೆ ಮಾಡಲು ನಿರ್ಧರಿಸಿತ್ತು.

ಎಸ್‌ಎಸ್‌ಎಲ್‌ಸಿ ಪಾಸಾದ, ಗ್ರಾಮೀಣ ಯುವಕ– ಯುವತಿಯರನ್ನು ಗಮನದಲ್ಲಿಟ್ಟು, ಕೃಷಿ ವಿಶ್ವವಿದ್ಯಾಲಯಗಳ ಮಾರ್ಗದರ್ಶನದಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಿ ಇದರಲ್ಲಿ ತೇರ್ಗಡೆಯಾದವರನ್ನು ಕೃಷಿ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿತ್ತು. ಅದರಂತೆ ರಾಜ್ಯದ 12 ಕೃಷಿ ಕಾಲೇಜುಗಳಲ್ಲಿ 2010-11ರಿಂದ ಡಿಪ್ಲೊಮಾ ಕೋರ್ಸ್‌ ಆರಂಭಿಸಿ ವಾರ್ಷಿಕ 800 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಯಿತು. ಆದರೆ ಇವರನ್ನು ಕೃಷಿ ಸಹಾಯಕರನ್ನಾಗಿ ನೇಮಕ ಮಾಡುವ ಕೆಲಸ ಈವರೆಗೆ ಆರಂಭವಾಗಿಲ್ಲ.

2016ರಲ್ಲಿ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಕುಸಿತ ಕಂಡವು. ಆಗ ಸರ್ಕಾರವು ಯೋಜನಾ ಮಂಡಳಿಯ ಶಿಫಾರಸಿನ ಮೇರೆಗೆ 6,500 ಗ್ರಾಮ ಪಂಚಾಯಿತಿಗಳಲ್ಲಿ ಕೃಷಿ ಸಹಾಯಕರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿತಾದರೂ ಅದನ್ನು ಕಾರ್ಯರೂಪಕ್ಕೆ ತರಲಿಲ್ಲ.

ಈ ಕೋರ್ಸ್‌ಗೆ ಗ್ರಾಮೀಣ ಭಾಗದ ರೈತರ ಮತ್ತು ಬಡವರ ಮಕ್ಕಳೇ ಹೆಚ್ಚಾಗಿ ಪ್ರವೇಶ ಪಡೆಯುತ್ತಿದ್ದಾರೆ. ಪ್ರಸಕ್ತ ಸುಮಾರು 4,800 ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ, ನಿರುದ್ಯೋಗಿಗಳಾಗಿದ್ದಾರೆ. ಈ ಡಿಪ್ಲೊಮಾವನ್ನು 10+2 ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಈ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವುದೂ ಕಷ್ಟವಾಗಿತ್ತು. 2013ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಕೃಷಿ ಪದವಿ ಕೋರ್ಸ್‌ಗೆ ಲ್ಯಾಟರಲ್ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿದ್ದರೂ, ಶೇ 5ರಷ್ಟು ಸೀಟುಗಳಿಗೆ ಇದು ಸೀಮಿತವಾಯಿತು. ಅಂದರೆ ವಾರ್ಷಿಕ 53 ಸೀಟುಗಳು ಮಾತ್ರ. ಸರ್ಕಾರದ ಶಿಕ್ಷಣದ ನೀತಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜೀವನಕ್ಕೆ ಹೇಗೆ ಮಾರಕವಾಗುತ್ತವೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?

ಕೃಷಿ ಡಿಪ್ಲೊಮಾ ಪಡೆದವರನ್ನು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಗ್ರಾಮ ಸೇವಕರೆಂದು, ತೆಲಂಗಾಣದಲ್ಲಿ ಕೃಷಿ ವಿಸ್ತರಣಾ ಅಧಿಕಾರಿಯಾಗಿ ಮತ್ತು ತಮಿಳುನಾಡಿನಲ್ಲಿ ಕೃಷಿ ಸಹಾಯಕ ಅಧಿಕಾರಿಯಾಗಿ ನೇಮಕ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಸರ್ಕಾರವು ಕೊಟ್ಟ ಮಾತಿನಂತೆ ಡಿಪ್ಲೊಮಾ ವಿದ್ಯಾರ್ಥಿಗಳನ್ನು‘ಕೃಷಿ ಸಹಾಯಕರಾಗಿ’ ನೇಮಕ ಮಾಡಲು, ವೃಂದ ಮತ್ತು ಹುದ್ದೆಗಳ ನಿಯಮಗಳಲ್ಲಿ ಶೀಘ್ರ ಅಗತ್ಯ ಬದಲಾವಣೆ ತರಬೇಕು.

–ಡಾ. ವಿ. ರಮೇಶ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT