ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ದೂರದ, ದೂರಲಾಗದ ಜೀವಿಗಳು ಇಲ್ಲಿವೆ, ಸಚಿವರೆ!

Last Updated 24 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ವ್ಯಾಪಕವಾಗಿ ದುರ್ಬಳಕೆಯಾಗುತ್ತಿರುವ ಗ್ಲೈಫೋಸೇಟ್‌ ವಿಷದ ‘ತೊಂದರೆಗಳ ಕುರಿತು ರೈತರಿಂದ ದೂರು ಬಂದಿಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸದನದಲ್ಲಿ ಹೇಳಿದ್ದಾರೆ. ತೊಂದರೆ ಉಂಟಾಗುತ್ತಿರುವುದು ದುಂಬಿ, ಜೇಡ, ಜೇನ್ನೊಣಗಳಿಗೆ ಮತ್ತು ಎರೆಹುಳುಗಳಿಗೆ; ಹಳ್ಳಕೊಳ್ಳಗಳ ಏಡಿ, ಕಪ್ಪೆ, ಮೀನುಗಳಿಗೆ. ಅವಂತೂ ದೂರು ಕೊಡಲಾರವು. ವಿಷವನ್ನು ಸಿಂಪಡಿಸುವ ಹಾಗೂ ಊಟಕ್ಕೆ ಏಡಿ-ಮೀನುಗಳನ್ನು ಬಳಸುವ ಶ್ರಮಿಕರು, ಅವರ ಮಕ್ಕಳು ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿದ್ದರೆ ಅವರು ವೈದ್ಯರ ಬಳಿ ಹೋಗುವ ಬದಲು ಕೃಷಿ ಇಲಾಖೆಗೆ ದೂರು ಕೊಡಬೇಕಿತ್ತೇ? ಈ ವಿಷದ ಅತಿಬಳಕೆಯ ವರದಿ (ಪ್ರ.ವಾ., ಮಾರ್ಚ್‌ 22) ಬಂದಾಕ್ಷಣ ಸಚಿವರು ತಮ್ಮದೇ ಸ್ಮಾರ್ಟ್‌ಫೋನಿನಲ್ಲಿ glyphosate ಎಂದು ಗೂಗಲಿಸಿದ್ದರೆ ಈ ವಿಷದ ದುಷ್ಪರಿಣಾಮಗಳ ಸಾವಿರಾರು ವರದಿಗಳು ಸಿಗುತ್ತಿದ್ದವು. ಮನುಷ್ಯರಲ್ಲೂ ಅದು ಕ್ಯಾನ್ಸರ್‌ಗೆ ಕಾರಣವಾಗಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದು ಗೊತ್ತಾಗುತ್ತಿತ್ತು. ಏಳು ವರ್ಷಗಳ ಹಿಂದೆ ಜರ್ಮನಿ ಇದನ್ನು ನಿಷೇಧಿಸಿದ ಬೆನ್ನಲ್ಲೇ, ನೆದರ್ಲೆಂಡ್ಸ್, ಫ್ರಾನ್ಸ್‌, ಶ್ರೀಲಂಕಾ, ಬ್ರೆಜಿಲ್, ಅರ್ಜೆಂಟೀನಾ, ಕೊಲಂಬಿಯಾ ಹೀಗೆ ಸಾಲು ಸಾಲು ದೇಶಗಳು ‘ರೌಂಡಪ್’ ಹೆಸರಿನ ಇದನ್ನು ಹೊರದಬ್ಬಿದ್ದು ಗೊತ್ತಾಗುತ್ತಿತ್ತು.

ಕರ್ನಾಟಕದಲ್ಲಿ ಯಾವ ಯಾವ ಕಂಪನಿಗಳು ಯಾವ ಯಾವ ಬ್ರ್ಯಾಂಡ್‌ ಹೆಸರಿನಲ್ಲಿ ಗ್ಲೈಫೋಸೇಟನ್ನು ಮಾರುತ್ತಿವೆ ಎಂಬ ಪಟ್ಟಿಯನ್ನು ಸಚಿವರು ಬಿಡುಗಡೆ ಮಾಡಬೇಕು. ರೈತರಿಗೆ ಆ ಪಟ್ಟಿ ತೀರಾ ಅಗತ್ಯವಿದೆ. ಇನ್ನು, ಇದಕ್ಕೆ ನಿಷೇಧ ಹಾಕಲಾಗದಷ್ಟು ಒತ್ತಡ ಸರ್ಕಾರದ ಮೇಲಿದ್ದರೆ ಹೋಗಲಿ, ಅದರ ಅತಿಬಳಕೆ, ಅನಗತ್ಯ ಬಳಕೆಯ ದುಷ್ಪರಿಣಾಮಗಳ ಬಗ್ಗೆ ವಿಷದ ಡಬ್ಬಿಗಳ ಮೇಲೆ ಕನ್ನಡದಲ್ಲಿ ಮಾಹಿತಿಯನ್ನು ನೀಡಬೇಕು. ಅದು ಕೇವಲ ‘ಕಳೆ’ನಾಶಕ ಅಲ್ಲ; ಜೀವನಾಶಕ ಎಂಬುದನ್ನು ಕಂಪನಿಗಳೇನೂ ಹೇಳುವುದಿಲ್ಲ. ಅವು ಬಚ್ಚಿಟ್ಟಿದ್ದನ್ನು ‘ರೈತಮಿತ್ರ’ ಸರ್ಕಾರ ಬಿಚ್ಚಿಡಬೇಕಲ್ಲವೇ?

-ನಾಗೇಶ ಹೆಗಡೆ, ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT