ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಚಿಕಿತ್ಸೆಗೆ ಅನುಮತಿ: ವ್ಯಾಪಕ ಚರ್ಚೆ ನಡೆಯಲಿ

Last Updated 23 ನವೆಂಬರ್ 2020, 19:45 IST
ಅಕ್ಷರ ಗಾತ್ರ

ನೀಟ್ ಯುಜಿ ನಂತರದ ಆಯ್ಕೆಗಳ ಬಗ್ಗೆ ಚರ್ಚಿಸಲು ವಿದ್ಯಾರ್ಥಿಯ ಪೋಷಕರೊಬ್ಬರು ಕಳೆದ ವಾರ ನನ್ನ ಬಳಿ ಬಂದಿದ್ದರು. ಅವರ ಮಗನಿಗೆ ಎಂಬಿಬಿಎಸ್‌ ಸೀಟ್ ಸಿಗುವ ಬಗ್ಗೆ ಅನುಮಾನ ಇದ್ದುದರಿಂದ, ಆಯುರ್ವೇದ ಕೋರ್ಸಿಗೆ ಸೇರಿಸುವ ಕುರಿತು ಸಲಹೆ ಕೇಳಿದರು. ಅವರ ಗ್ರಹಿಕೆ ಮತ್ತು ಉದ್ದೇಶ ಬೇರೆ ಇತ್ತು. ಕಡಿಮೆ ಶುಲ್ಕ ಇರುವುದರಿಂದ ಮತ್ತು ಸುಲಭವಾಗಿ ಸಿಗುವುದರಿಂದ ಆಯುರ್ವೇದ ಕೋರ್ಸ್ ಮಾಡಿಸಿ ನಂತರ ಅಲೋಪಥಿ ಪದ್ಧತಿಯ ವೈದ್ಯ ವೃತ್ತಿ ನಡೆಸುವುದು ಅವರ ಆಲೋಚನೆಯಾಗಿತ್ತು.

ಅನೇಕರು ಈ ರೀತಿ ಮಾಡುತ್ತಿದ್ದಾರೆಂದು ಅವರ ನಂಬಿಕೆಯಾಗಿತ್ತು. ನಾನು ಅವರಿಗೆ ಬಿಡಿಸಿ ಹೇಳಿದೆ. ಈ ರೀತಿ ಮಾಡಲು ಕಾನೂನಿನ ಮಾನ್ಯತೆ ಇಲ್ಲ. ಅನೇಕರು ಆಯುರ್ವೇದ ಪದ್ಧತಿಯಲ್ಲೂ ಒಳ್ಳೆಯ ಹೆಸರು ಮಾಡಿದ್ದಾರೆ. ನಿಮಗೆ ನಿಜವಾಗಿಯೂ ಆಯುರ್ವೇದ ಪದ್ಧತಿಯ ಬಗ್ಗೆ ನಂಬಿಕೆ ಮತ್ತು ಗೌರವ ಇದ್ದು, ಅದರಲ್ಲಿಯೇ ವೃತ್ತಿಜೀವನ ರೂಪಿಸುವ ಗುರಿ ಇದ್ದರೆ ಮಾತ್ರ ಆಯುರ್ವೇದ ಕೋರ್ಸಿಗೆ ಸೇರಿಸಿ ಎಂದು ಸಲಹೆ ನೀಡಿ ಕಳಿಸಿದೆ.

ಈಗ ಕೇಂದ್ರ ಸರ್ಕಾರವು ಸ್ನಾತಕೋತ್ತರ ಪದವಿ ಪಡೆದ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವುದು ಎಷ್ಟರಮಟ್ಟಿಗೆ ಕಾರ್ಯಸಾಧ್ಯವಾದ ನಿರ್ಧಾರ ಎಂಬುದು ಚರ್ಚಾರ್ಹ. ನಾವು ಎಂಬಿಬಿಎಸ್‌ ಮಾಡುವಾಗಲೇ ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಓದಿರುತ್ತೇವೆ ಮತ್ತು ನೋಡಿರುತ್ತೇವೆ. ಸ್ನಾತಕೋತ್ತರ ಪದವಿಯಾದ ಎಂ.ಎಸ್‌ ಮಾಡುವಾಗ ಇವುಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ತರಬೇತಿಯನ್ನೂ ಪಡೆದಿರುತ್ತೇವೆ. ಇಷ್ಟಾದರೂ ಎಂಎಸ್‌ ಮುಗಿದ ಮೇಲೆ ನೈಪುಣ್ಯ ಸಾಧಿಸಲು ನುರಿತ ವೈದ್ಯರ ಕೆಳಗೆ ಕೆಲಸ ಮಾಡಿ ದೃಢತೆಯನ್ನು ಗಳಿಸುತ್ತೇವೆ.

ಇಷ್ಟೆಲ್ಲಾ ಏಕೆ ಮಾಡುತ್ತೇವೆ ಎಂದರೆ, ನಾವು ಸ್ವತಂತ್ರವಾಗಿ ವೃತ್ತಿ ಆರಂಭಿಸಿದಾಗ ರೋಗಿಗಳನ್ನು ಪ್ರಯೋಗಪಶುಗಳನ್ನಾಗಿ ಮಾಡಬಾರದು ಮತ್ತು ನಮ್ಮನ್ನು ನಂಬಿ ಬರುವ ರೋಗಿಗಳಿಗೆ ಅತ್ಯುತ್ತಮವಾದ ಸೇವೆಯನ್ನೇ ನೀಡಬೇಕೆಂಬ ಧ್ಯೇಯದಿಂದ ಮಾತ್ರ. ಆದರೆ ಇದರ ಬಗ್ಗೆ ಹೆಚ್ಚೇನೂ ಓದದ ಆಯರ್ವೇದ ವೈದ್ಯರಿಗೆ ಕೇವಲ ತರಬೇತಿ ನೀಡಿಶಸ್ತ್ರಚಿಕಿತ್ಸೆ ನಡೆಸಲು ಅನುಮತಿ ನೀಡುವುದರಿಂದ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಗುರಿ ಈಡೇರುತ್ತದೆಯೇ?

ಆಯುರ್ವೇದದಲ್ಲಿ ಆಧುನಿಕ ಅರಿವಳಿಕೆ ಪದ್ಧತಿ ಇಲ್ಲದೇ ಇರುವುದರಿಂದ, ಆಯುರ್ವೇದ ವೈದ್ಯರು ಈ ಶಸ್ತ್ರಚಿಕಿತ್ಸೆಗಳನ್ನು ಮಾಡುವಾಗ ಅರಿವಳಿಕೆ ನೀಡುವವರು ಯಾರು? ದುಡ್ಡಿದ್ದವರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗುತ್ತಾರೆ. ಈ ರೀತಿಯ ಅರೆಪರಿಣತಿ ಪಡೆದ ವೈದ್ಯರ ಬಳಿ ಕೆಳವರ್ಗದ ಜನರೇ ಹೋಗುವುದರಿಂದ ಬಡವರು ಬಲಿಪಶುಗಳಾಗುತ್ತಾರೆ ಅಷ್ಟೆ. ಈ ರೀತಿಯ ನಿರ್ಧಾರಗಳನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಇದಕ್ಕೆ ವೈಜ್ಞಾನಿಕ ಕಾರಣಗಳಿವೆ.

ಇಂದಿಗೂ ಅನೇಕ ಆಯುರ್ವೇದ ತಜ್ಞರು ಅಲೋಪಥಿ ಪದ್ಧತಿ ಬಳಸಲು ವಿರೋಧ ವ್ಯಕ್ತಪಡಿಸುತ್ತಾರೆ. ಇವರು ಆಯುರ್ವೇದದಲ್ಲಿ ಎಲ್ಲಾ ಕಾಯಿಲೆಗಳಿಗೂ ಪರಿಹಾರವಿದೆ ಎಂದು ನಂಬಿರುವ ಖಂಡಿತವಾದಿಗಳು. ಸರ್ಕಾರದ ನಿರ್ಧಾರ ಉತ್ತಮವಾದುದಲ್ಲ. ಎರಡೂ ಪದ್ಧತಿಗಳ ತಜ್ಞರ ಬಳಿ ವ್ಯಾಪಕ ಚರ್ಚೆ ನಡೆಸಿ, ವಿಸ್ತೃತ ವರದಿ ಪಡೆದು ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
-ಡಾ. ಕೆ.ಎಸ್.ಗಂಗಾಧರ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT