ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಬಲ್‌ ಮಾಫಿಯಾ: ಗಾಳಿಯಲ್ಲೇ ತೇಲಿಹೋಗುವ ದೂರು!

Last Updated 25 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಕೇಬಲ್ ಮಾಫಿಯಾದ ಕಪಿಮುಷ್ಟಿಯ ಬಗ್ಗೆ ಮುಳ್ಳೂರು ಪ್ರಕಾಶ್ ದೂರಿದ್ದಾರೆ (ವಾ.ವಾ., ನ. 23). ಈ ಮೊದಲು ಕೇಬಲ್‌ ಸಂಪರ್ಕದಲ್ಲಿ ಲಭ್ಯವಿದ್ದ ಯಾವುದೇ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದ್ದು, ಈಗ ಪ್ರತ್ಯೇಕ ಪೇ ಚಾನೆಲ್‌ ಕಾರಣದಿಂದ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವನ್ನು ನೇರವಾಗಿ ವೀಕ್ಷಿಸಲು ತಮಗೆ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಅವರ ಮಾತನ್ನು ನಾನೂ ಅನುಮೋದಿಸುತ್ತೇನಾದರೂ ಸ್ವಲ್ಪ ಬದಲಾವಣೆ ತರಲು ಬಯಸುತ್ತೇನೆ. ಇಂದು ಇಡೀ ಕೇಬಲ್ ಜಾಲವು ಉತ್ತರ ಭಾರತದ ಮಲ್ಟಿ ಸಿಸ್ಟಮ್ ಆಪರೇಟರ್‌ಗಳ (ಎಂಎಸ್‌ಒ) ಬಳಿ ಇದೆ ಹಾಗೂ ಚಾನೆಲ್‌ಗಳನ್ನು ಇವರೇ ನಿಯಂತ್ರಿಸುತ್ತಾರೆ ಅಥವಾ ಸ್ವತಃ ಮಾಲೀಕರಾಗಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕ್ರೀಡಾ ಪಂದ್ಯಗಳ ಆಯೋಜಕರು ನೇರ ಪ್ರಸಾರಕ್ಕಾಗಿ ಹರಾಜು ಕೂಗುತ್ತಾರೆ. ಈ ಪದ್ಧತಿಯನ್ನು ಕ್ರಿಕೆಟ್ ಸೇರಿದಂತೆ ಎಲ್ಲಾ ಬಲಾಢ್ಯ ಶ್ರೀಮಂತ ಆಟಗಳಲ್ಲಿ ಕಾಣಬಹುದಾಗಿದ್ದು ಇದರಲ್ಲಿ ಆಟಗಾರರೂ ಹರಾಜಿನ
ಭಾಗವಾಗಿರುತ್ತಾರೆ.

ಬಹುತೇಕ ಚಾನೆಲ್‌ಗಳ ಮಾಲೀಕರು ರಾಜಕಾರಣಿಗಳೇ ಆಗಿದ್ದು, ಸಾರ್ವಜನಿಕರು ನೀಡುವ ದೂರು ಸಂಬಂಧಿತ ವ್ಯಕ್ತಿಗಳಿಗೆ ತಲುಪದೆ ಗಾಳಿಯಲ್ಲೇ ತೇಲಿಹೋಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ಕೇಬಲ್ ಪ್ರಸಾರದ ಮೇಲೆ ಇಂದು ಯಾವುದೇ ನಿಯಂತ್ರಣ ಇರುವುದಿಲ್ಲ. ಮೊದಲಿದ್ದ ಚಲನಚಿತ್ರ ಆಯ್ಕೆ, ನಮ್ಮೂರಿನ ಸುದ್ದಿ, ಜಾತ್ರೆ, ಜನ್ಮದಿನಾಚರಣೆ ಯಾವುದರ ಪ್ರಸಾರವೂ ಈಗ ಅವರ ಕೈಯಲ್ಲಿಲ್ಲ. ಒಟ್ಟಾರೆ ಕೇಬಲ್ ಆಪರೇಟರ್‌ಗಳನ್ನು ದೂರಿ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ‘ಟ್ರಾಯ್’ಹಲ್ಲು ಕಿತ್ತ ಹಾವಿನಂತಾಗಿದ್ದು, ಮಲ್ಟಿ ಸಿಸ್ಟಮ್ ಆಪರೇಟರ್‌ಗಳನ್ನು ಹದ್ದುಬಸ್ತಿನಲ್ಲಿ ಇಡಲು ವಿಫಲವಾಗಿದೆ ಎನ್ನಬಹುದು.

ಚಿ.ಉಮಾಶಂಕರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT