ಗುರುವಾರ , ಆಗಸ್ಟ್ 18, 2022
27 °C

ಭಾವೈಕ್ಯವಿದ್ದಲ್ಲಿ... ಮಧುರ ಮೈತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಮ್ಮ ಧರ್ಮ ದೊಡ್ಡದು, ನಿಮ್ಮ ಧರ್ಮ ಸಂಕುಚಿತವಾದದ್ದು’ ಎಂದು ಅವರು ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳುತ್ತಾರೆ. ‘ಇಲ್ಲ, ಇಲ್ಲ. ಅದೆಲ್ಲಾ ಸುಳ್ಳು. ನಮ್ಮ ಧರ್ಮ ಹಿರಿದು; ನಿಮ್ಮ ಧರ್ಮ ಕಿರಿದು’ ಎಂದು ಇವರು ಟೀಕಿಸುತ್ತಾರೆ. ಯಾವ ಧರ್ಮವೂ ತನ್ನಷ್ಟಕ್ಕೆ ತಾನೇ ಶ್ರೇಷ್ಠವಲ್ಲ, ಯಾವ ಧರ್ಮವೂ ಕೀಳಲ್ಲ! ಇದು ಪರಸ್ಪರ ದೋಷಾರೋಪಣೆ, ನಂಜಿನ ನಾಲಗೆ ಆಡುವ ಮಾತು. ಎಲುಬಿಲ್ಲದ ನಾಲಗೆ ಏನನ್ನಾದರೂ ಹೇಳುತ್ತದೆ!

ಅವನನ್ನು ಇರಿ, ಇವನನ್ನು ಕೊಚ್ಚು, ಕೊಲ್ಲು, ಇವನನ್ನು ಬೆಂಡೆತ್ತು, ಮೂಳೆ ಮುರಿ, ಸಾಯಿಬಡಿ– ಇಂಥಾವೆಲ್ಲಾ ಎಷ್ಟು ಸರಿ? ಹಿಂದೆ ಚರಿತ್ರೆಯಲ್ಲಿ ಆಗಿಹೋಗಿದ್ದು ಆಗಿಹೋಗಿದೆ. ಘಟಿಸಿದೆ, ಗತಿಸಿದೆ. ನೀನಲ್ಲದಿದ್ದರೆ ನಿಮ್ಮಪ್ಪನೋ, ನಿಮ್ಮಜ್ಜನೋ ಹೀಗೆ ಮಾಡಿದ್ದಾನೆಂದು ಈಗ ಪ್ರತೀಕಾರ ತೀರಿಸಿಕೊಳ್ಳಲು ಹೊರಟರೆ ರಣರಂಗವಾಗುತ್ತದೆ ನಮ್ಮ ಬದುಕು. ಅದರಿಂದ ಯಾರಿಗೂ ಲಾಭವಿಲ್ಲ. ಯಾವ ಮತಕ್ಕೂ ಏಳಿಗೆಯಿಲ್ಲ. ತನ್ಮೂಲಕ ಯಾವ ಧರ್ಮವೂ ಶ್ರೇಷ್ಠ ಆಗುವುದಿಲ್ಲ. ಇದು ಖಂಡಿತ. ಅದರಿಂದ ಎರಡೂ ಕಡೆ ಪರಸ್ಪರ ಸಂಘರ್ಷವಾಗಿ ನೆಮ್ಮದಿಯ ಬಾಳು ಹಾಳಾಗುತ್ತದೆ.

ಐದು ಸಾವಿರ ವರ್ಷಗಳ ಅಖಂಡ ಹಿರಿಮೆ ಹೊಂದಿದ ಭಾರತ ಮಲಿನವಾಗುವುದೇನು ಚೆಂದ? ರಾಮ, ರಹೀಮಾ ಎಲ್ಲಾ ಒಂದೇ. ಅದೇ ಮೈತ್ರಿ ಬಂಧ! ಸರಿದು ಹೋಗುವ ಕಾಲ ಎಲ್ಲಕ್ಕೂ ಸಾಕ್ಷೀಭೂತ
ಸತ್ಯವಾಗಿದೆ. ಜಾಗೃತಿ ಎಲ್ಲ ಧರ್ಮಗಳಲ್ಲೂ ನಿತ್ಯವಾಗಿದೆ. ಹೀಗಿರುವಾಗ ಹೊಡೆದಾಟವೇಕೆ?
ನಮಗೆ ಬಡಿದಾಟವೇಕೆ?

-ದೊಡ್ಡರಂಗೇಗೌಡ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.