ಭಾನುವಾರ, ಜನವರಿ 17, 2021
27 °C

ವಾಚಕರ ವಾಣಿ: ಕೊರೊನಾ ಲಸಿಕೆ; ರಾಜಕೀಯ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಿಜೆಪಿ ವಿತರಿಸುವ ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ನನಗೆ ಅವರು ಕೊಡುವ ಲಸಿಕೆಯ ಮೇಲೆ ನಂಬಿಕೆ ಇಲ್ಲ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೇ ಪಕ್ಷದ ಶಾಸಕ ಅಶುತೋಷ್‌ ಸಿನ್ಹಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಈ ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ’ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸಂಸದ ಶಶಿ ತರೂರ್, ಕಾಂಗ್ರೆಸ್‍ನ ಹಿರಿಯ ನಾಯಕ ಜೈರಾಂ ರಮೇಶ್‌ ಹಾಗೂ ಸಿಪಿಎಂನ ಸೀತಾರಾಂ ಯೆಚೂರಿ ಕೂಡಾ ಇನ್ನೂ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯನ್ನೇ ನಡೆಸದೆ ಕೋ-ವ್ಯಾಕ್ಸಿನ್ ಲಸಿಕೆ ನೀಡಲು ಅನುಮೋದನೆ ಕೊಟ್ಟಿರುವುದು ಅಪಾಯಕಾರಿ, ಅಕಾಲಿಕ ಹಾಗೂ ಅವಸರದ ಕ್ರಮ ಎಂದು ಆಕ್ಷೇಪಿಸಿದ್ದಾರೆ.

ವಿರೋಧ ಪಕ್ಷಗಳ ಕೆಲವು ನಾಯಕರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುವ ಯತ್ನ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ ಪಕ್ಷಾತೀತವಾಗಿ ಲಸಿಕೆ ವಿತರಿಸಬೇಕಾಗುತ್ತದೆ ಎಂಬ ಅರಿವು ಇವರಿಗೆ ಇದ್ದಂತಿಲ್ಲ. ಈಗಾಗಲೇ ಒಂದು ಕೋಟಿಗೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದು ಲಕ್ಷಕ್ಕೂ ಹೆಚ್ಚು ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದರಿಂದ, ಲಸಿಕೆಯ ರೋಗ ನಿರೋಧಕತೆ, ಆಗಬಹುದಾದ ಪರಿಣಾಮ ಮುಂತಾದವುಗಳನ್ನು ಪರಿಗಣಿಸಿ ಭಾರತೀಯ ಔಷಧ ಮಹಾನಿಯಂತ್ರಕರು (ಡಿ.ಸಿ.ಜಿ.ಐ.) ಸಾರ್ವಜನಿಕ ಹಿತದೃಷ್ಟಿಯಿಂದ ತುರ್ತು ಬಳಕೆಗೆ ಅನುಮತಿ ನೀಡಿದ್ದಾರೆ. ಸರ್ಕಾರ ಆದ್ಯತೆ ಮೇರೆಗೆ ಜನರಿಗೆ ಲಸಿಕೆ ವಿತರಿಸಲು ವ್ಯವಸ್ಥಿತ ರೀತಿಯಲ್ಲಿ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಕೆಲವರು ಜನರಲ್ಲಿ ಆತಂಕ ಮೂಡಿಸಲು ಹೊರಟಿರುವುದು ಸರಿಯಲ್ಲ.

ಸ್ವದೇಶಿಯಾಗಿ ನಿರ್ಮಾಣಗೊಂಡ ಲಸಿಕೆಯ ಬಗ್ಗೆ ನಾವು ಹೆಮ್ಮೆಪಡಬೇಕು. ರಾಕ್ಷಸಿ ರೂಪದಲ್ಲಿ ಕಾಡುತ್ತಿರುವ ಕೊರೊನಾ ಸಾಂಕ್ರಾಮಿಕದಿಂದ ದೇಶ ಮುಕ್ತವಾಗಬೇಕು. ಇಂತಹ ಸನ್ನಿವೇಶದಲ್ಲಿ ರಾಜಕೀಯಪ್ರೇರಿತ ಹೇಳಿಕೆಗಳಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ.

-ಪಂಪಾಪತಿ ಹಿರೇಮಠ, ಧಾರವಾಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು