ಶುಕ್ರವಾರ, ಜೂನ್ 18, 2021
24 °C

ಕಿವಿ ಪಾವನಗೊಳಿಸುವ ಸಚಿವರ ನುಡಿಮುತ್ತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜಗವೆಲ್ಲ ನಗುತಿರಬೇಕು, ಆಗ ನಾ ನಗಬೇಕು’– ಯಾವ ಪುಣ್ಯಾತ್ಮನೋ ಆಡಿದ ಈ ನುಡಿಯು ಸಚಿವ ಉಮೇಶ ಕತ್ತಿ ಅವರು ರಬಕವಿ/ ಬನಹಟ್ಟಿಯಲ್ಲಿ ಖಾಸಗಿ ವೈದ್ಯರ ಸಭೆಯಲ್ಲಿ ಈಗ ಉದುರಿಸಿರುವ ನುಡಿಮುತ್ತುಗಳನ್ನು ಓದಿದಾಗ (ಪ್ರ.ವಾ. ಮೇ 9) ನೆನಪಿಗೆ ಬರುತ್ತಿದೆ. ಆಮ್ಲಜನಕ ಸಾಂದ್ರಕ ಯಂತ್ರವನ್ನು ಸರ್ಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವುದನ್ನು ಪ್ರಸ್ತಾಪಿಸಿ ಸ್ಥಳೀಯ ವೈದ್ಯ ರವಿ ಜಮಖಂಡಿ ಅವರು, ‘ಇಂತಹ ಇನ್ನಷ್ಟು ಯಂತ್ರಗಳನ್ನು ಸರ್ಕಾರವು ತಾಲ್ಲೂಕಿಗೆ ನೀಡಿದರೆ ಈ ಭಾಗದ ರೋಗಿಗಳಿಗೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದ್ದರು. ಇದಕ್ಕೆ ನಮ್ಮ ಸಚಿವರು ‘ಕೋವಿಡ್‌ ಮೂರನೆಯ ಅಲೆ ಬಂದಾಗ ನೋಡೋಣ’ ಎಂದು ತಣ್ಣನೆ ಪ್ರತಿಕ್ರಿಯಿಸಿದರು.‌

ಎರಡನೇ ಅಲೆಯ ಹೊಡೆತವನ್ನು ತಡೆಯಲು ಸರ್ಕಾರ ಎಷ್ಟು ವಿಚಕ್ಷಣೆಯಿಂದ ಸಿದ್ಧತೆ ಮಾಡಿಕೊಂಡಿತ್ತು ಎನ್ನುವುದಕ್ಕೆ ರಾಜ್ಯದಲ್ಲಿ ಜನರನ್ನು ದಿಕ್ಕೆಡಿಸುತ್ತ ಏರುತ್ತಿರುವ ಕೋವಿಡ್ ಪೀಡಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಗಳೇ ವಿಶ್ವಾಸಾರ್ಹ ಮಾಪಕಗಳಾಗಿವೆ. ಮೂರನೆಯ ಅಲೆ ಅಪ್ಪಳಿಸುವುದೂ ನಿಶ್ಚಿತವೆಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಹೀಗಿರುವಾಗ, ಮುಂಜಾಗ್ರತಾ ಕ್ರಮವಾಗಿ ಇನ್ನಷ್ಟು ಯಂತ್ರಗಳ ಸಂಗ್ರಹದ ಅಗತ್ಯವನ್ನು ವೈದ್ಯರೊಬ್ಬರು ಹೇಳಿದಾಗ, ಸಚಿವರ ನಿಷ್ಕಾಳಜಿ ಖಂಡನಾರ್ಹ. ಇಷ್ಟೇ ಸಾಲದೆಂಬಂತೆ ಸಚಿವರ ಮಾತನ್ನು ಕೇಳಿ ಡಾಕ್ಟರ್ ರವಿ, ‘ಆಗ ನಾವು ಉಳಿದಿರುತ್ತೇವೋ ಇಲ್ಲವೋ’ ಎಂದು ಉದ್ಗರಿಸಿದ್ದಕ್ಕೆ ಸಚಿವ ಕತ್ತಿ, ‘ನೀವು ಉಳಿಯುವಿರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು’ ಎಂದು ವಿವೇಕವಿಲ್ಲದ ಉದ್ಧಟತನದ ಮಾತನ್ನಾಡಿದ್ದಾರೆ. ಇಂತಹ ಸ್ವಾರ್ಥಿಗಳು ನಮ್ಮ ನಾಯಕರಾಗಿ ಬಂದಾಗ, ಜನರು ದುರ್ಗತಿಯನ್ನಲ್ಲದೆ ಇನ್ನೇನನ್ನು ಅನುಭವಿಸಿಯಾರು?

–ಸಾಮಗ ದತ್ತಾತ್ರಿ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು