ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಪೂರಕ ಯೋಜನೆ ಇರಲಿ

Last Updated 28 ಜೂನ್ 2020, 19:30 IST
ಅಕ್ಷರ ಗಾತ್ರ

ಕಳೆದ ವರ್ಷದ ಅತಿವೃಷ್ಟಿಯಿಂದ ನೆಲೆ ಕಳೆದುಕೊಂಡ ರಾಜ್ಯದ ಸಾವಿರಾರು ಜನ ಇನ್ನೂ ಸರಿಯಾಗಿ ಪುನರ್ವಸತಿ ಕಾಣದೆ ಕಂಗಾಲಾಗಿದ್ದಾರೆ. ರಾಜ್ಯದ ಗಡಿಭಾಗ ಮತ್ತು ಮಲೆನಾಡಿನ ಕೆಲವೆಡೆ ಸರ್ಕಾರಿ ಶಾಲೆಗಳು ಮೇಲ್ಚಾವಣಿ ಇಲ್ಲದೆ ಬಟಾಬಯಲಾಗಿವೆ. ಕೊರೊನಾ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ, ಊಟ, ತಿಂಡಿ ಸಿಗದೆ ಹಿಂಸೆ ಅನುಭವಿಸುತ್ತಿರುವ ದೂರುಗಳಿವೆ. ಆರ್ಥಿಕ ಸಂಕಷ್ಟದಿಂದ ಇಡೀ ದೇಶವೇ ಚಿಂತೆಯಲ್ಲಿ ಮುಳುಗಿದೆ. ಲಾಕ್‌ಡೌನ್‌ನಿಂದ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಇಷ್ಟೆಲ್ಲಾ ಅವಾಂತರಗಳಿದ್ದರೂ ರಾಜ್ಯ ಸರ್ಕಾರ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದೆ.

ಎಸ್ಎಸ್ಎಲ್‌ಸಿ ಪರೀಕ್ಷೆ, ಶಾಲೆ- ಕಾಲೇಜು, ಆನ್‌ಲೈನ್ ಶಿಕ್ಷಣ, ಲಾಕ್‌ಡೌನ್ ಸಡಿಲಿಕೆ ಇತ್ಯಾದಿ ವಿಷಯಗಳಲ್ಲಿ ಸಾರ್ವಜನಿಕರ ಅಭಿಪ್ರಾಯ ಕೇಳುವ ಸರ್ಕಾರ, ಯಾವುದೇ ಪ್ರತಿಮೆ ನಿರ್ಮಿಸುವ ವಿಷಯದಲ್ಲಿ ಜನಾಭಿಪ್ರಾಯ ಏಕೆ ಕೇಳುವುದಿಲ್ಲ? ಕೆಂಪೇಗೌಡರಿಗೆ ಗೌರವ ಸೂಚಿಸಲೇಬೇಕೆಂದರೆ ಅವರ ಹೆಸರಿನಲ್ಲಿ ಆಸ್ಪತ್ರೆಯನ್ನೋ ಶಾಲಾ– ಕಾಲೇಜು ಅಥವಾ ಹಾಸ್ಟೆಲ್ಲನ್ನೋ ಸ್ಥಾಪಿಸಿ, ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ, ಶಿಕ್ಷಣ ಕೊಡುವಂಥ ಕೆಲಸ ಮಾಡಲಿ.

‘ನಾಡಪ್ರಭು ಕೆಂಪೇಗೌಡರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ, ಅವರ ಹಾದಿಯಲ್ಲಿ ಸಾಗೋಣ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಾಗೆಂದರೆ ಏನರ್ಥ? ಕೆಂಪೇಗೌಡರು, ಒಳಚರಂಡಿ ವ್ಯವಸ್ಥೆ, ರಾಜಕಾಲುವೆ, ಕೆರೆಗಳ ನಿರ್ಮಾಣ, ಅಗಲವಾದ ರಸ್ತೆ, ನದಿಗಳ ಪುನಃಶ್ಚೇತನದಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ನಾಡಿನ ಅಭಿವೃದ್ಧಿಯತ್ತ ದೃಷ್ಟಿಹರಿಸಿದ್ದರು. ಸರ್ಕಾರ ಇಂತಹ ಕೆಲಸಗಳನ್ನು ಮುಂದುವರಿಸಿ, ಅವರ ಹಾದಿಯಲ್ಲಿ ಸಾಗಬೇಕೇ ಹೊರತು ಅವರ ಪ್ರತಿಮೆ ನಿರ್ಮಿಸುವುದಲ್ಲ. ಅಭಿವೃದ್ಧಿ ಹೊಂದಿದ ದೇಶ, ರಾಜ್ಯಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲು ಇನ್ನೇನೂ ಬಾಕಿ ಉಳಿದಿಲ್ಲ ಎಂದಾಗ ಇಂತಹ ಪ್ರತಿಮೆ, ಉದ್ಯಾನವನದಂಥ ಕೆಲಸ ಕೈಗೊಳ್ಳುತ್ತಾರೆ. ಆದರೆ ನಮ್ಮದು ಅಭಿವೃದ್ಧಿ ಹೊಂದುತ್ತಿರುವ ರಾಜ್ಯ. ಇಲ್ಲಿನ ಅಭಿವೃದ್ಧಿಗೆ ಪೂರಕವಾದ ಮತ್ತು ಮುಂದೆ ಪ್ರಕೃತಿ ವಿಕೋಪಗಳೇನಾದರೂ ಆದಲ್ಲಿ ಅದನ್ನು ಸಮರ್ಥವಾಗಿ ಎದುರಿಸುವಂಥ ಯೋಜನೆಗಳನ್ನು ಕೈಗೊಳ್ಳಲಿ.

–ಜಿ.ಎಸ್.ಗೋಪಾಲ ನಾಯ್ಕ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT