ಶನಿವಾರ, ಮೇ 21, 2022
25 °C

ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲ ಧರ್ಮಗಳೂ ಮಾನವೀಯ ಮೌಲ್ಯಗಳನ್ನೇ ಪ್ರತಿನಿಧಿಸುತ್ತವೆ. ಅಮಾನುಷತೆ, ದೌರ್ಜನ್ಯಕ್ಕೆ ಕಾರಣರಾಗುವುದು ಆಯಾ ಧರ್ಮಗಳ ಆರಾಧಕರು ಮತ್ತು ಪಾಲಕರೇ ವಿನಾ ತಾತ್ವಿಕ ಚೌಕಟ್ಟಿನ ಧರ್ಮವಲ್ಲ. ಹೀಗಾಗಿ, ನಿಜಾರ್ಥದಲ್ಲಿ ದೂಷಣೆಗೆ ಒಳಗಾಗಬೇಕಿರುವುದು ಮನುಷ್ಯನ ಸ್ವಾರ್ಥ, ಸಂಕುಚಿತ ಮನೋವೈಕಲ್ಯಗಳೇ ಹೊರತು ಧರ್ಮಗಳ ಸಾರಗಳಲ್ಲ.

ಲೇಖಕ ಕೆ.ಎಸ್‌.ಭಗವಾನ್‌ ಅವರ ಮೇಲೆ ವಕೀಲೆಯೊಬ್ಬರು ಮಸಿ ಬಳಿದ ಪ್ರಕರಣದಲ್ಲೂ ನಾವು ವಿವೇಚಿಸ
ಬೇಕಾಗಿರುವುದು ಮೇಲಿನ ಮಾತುಗಳನ್ನೇ. ಭಗವಾನ್‌ ಅವರ ವಿವಾದಯುತ ಮಾತುಗಳು ಎಂಥವರಲ್ಲೂ ತುಸು ಅಸಹನೆ ತರಿಸುತ್ತವೆ. ಅವರು ತಮ್ಮ ನಿಲುವನ್ನು ವ್ಯಕ್ತಪಡಿಸುವ ವಿಧಾನ  ಖಂಡನಾರ್ಹ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಗಳೇ ಮೂಲ ಶಕ್ತಿಯಾಗಿರುವ ದೇಶದಲ್ಲಿ, ಒಮ್ಮೆಲೇ ವೈಚಾರಿಕ ಪ್ರಜ್ಞೆ ಮೂಡಿಸಬೇಕು ಎಂಬ ಹುಂಬತನದಿಂದ ಬಾಯಿಗೆ ಬಂದಂತೆ ನಿರಂತರವಾಗಿ ಧರ್ಮದ ಕುರಿತು ಅವಹೇಳನ ಮಾಡಿದರೆ, ಅವು ಉದ್ಧಟತನದ ಹೇಳಿಕೆಗಳಂತೆಯೇ ಕಾಣುತ್ತವೆ. ಸಂವಿಧಾನದ ಪರ ಎಂದು ಹೇಳುವವರು ಈ ರೀತಿ ಒಂದು ಧರ್ಮದ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ಮಾತನಾಡಿದರೆ ಅವರು ಹೇಗೆ ತಾನೇ ಸಂವಿಧಾನದ ಪಾಲಕರಾಗುತ್ತಾರೆ?

ಇನ್ನು ಮಸಿ ಬಳಿದ ವಕೀಲೆ ಒಬ್ಬ ಸಾಮಾನ್ಯ ಮಹಿಳೆಯಾಗಿದ್ದರೆ, ಭಾವೋದ್ರೇಕಕ್ಕೆ ಒಳಗಾಗಿ ಇಂತಹ ಕೃತ್ಯ ಎಸಗಿದ್ದಾರೆ ಎಂದುಕೊಳ್ಳಬಹುದಿತ್ತು. ಆದರೆ ಒಬ್ಬ ನ್ಯಾಯವಾದಿಯಾಗಿ, ಅದರಲ್ಲೂ ಕಪ್ಪು ಕೋಟನ್ನು ಧರಿಸಿ ನ್ಯಾಯಾಲಯದ ಆವರಣದಲ್ಲಿಯೇ ಇಂತಹ ಕೃತ್ಯ ಎಸಗಿದ್ದು ಅವರ ವೃತ್ತಿ ಮತ್ತು ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನ. ಅವರ ವಿರುದ್ಧ ಹೈಕೋರ್ಟ್‌ ಸೂಕ್ತ ಕ್ರಮ ಕೈಗೊಂಡು ಸಾಂವಿಧಾನಿಕ ಘನತೆಯನ್ನು ಕಾಪಾಡಬೇಕು. ಒಟ್ಟಿನಲ್ಲಿ ಧರ್ಮಗಳ ವಿಷಯಕ್ಕೆ ಬಡಿದಾಡಿಕೊಳ್ಳುವುದಕ್ಕಿಂತ, ನಮ್ಮೊಳಗಿನ ಅಧರ್ಮದ ವಿರುದ್ಧ ಹೋರಾಡಿದರೆ ಅದಕ್ಕೊಂದು ಸಾರ್ಥಕತೆ ಸಿಗುತ್ತದೆ. ಮನುಷ್ಯನಿಗೆ ಮನುಷ್ಯತ್ವಕ್ಕಿಂತ ದೊಡ್ಡದಾದದ್ದು ಬೇರೇನೂ ಇಲ್ಲ.

ಕೆ‌.ಜೆ.ಕೊಟ್ರಗೌಡ, ತೂಲಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು