ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಮಧೇಯ ಆದಾಯ ಅಕ್ರಮ ಸಂಪಾದನೆಯಲ್ಲವೇ?

Last Updated 9 ಸೆಪ್ಟೆಂಬರ್ 2021, 23:54 IST
ಅಕ್ಷರ ಗಾತ್ರ

‘ರಾಜಕೀಯ ಪಕ್ಷಗಳ ಆದಾಯ ಅನಾಮಧೇಯ’ ಸುದ್ದಿ (ಪ್ರ.ವಾ., ಸೆ. 7) ಓದಿ ಆಘಾತವಾಯಿತು. ರಾಜಕೀಯ ಪಕ್ಷಗಳು ಯಾವ ಘನ ಸಾಧನೆಗಾಗಿ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸುತ್ತವೆ? ನೂರಾರು ಕೋಟಿ ದೇಣಿಗೆ ನೀಡುವವರು ಯಾರ ಹಿತಕ್ಕಾಗಿ ನೀಡುತ್ತಾರೆ? ಜನಸಾಮಾನ್ಯರಂತೂ ಹೀಗೆ ಕೊಡುವುದು ಸಾಧ್ಯವಿಲ್ಲ. ಉದ್ದಿಮೆದಾರರು ಒಳ ಹಿತಾಸಕ್ತಿ ಇಲ್ಲದೆ ತಾವೂ ಕೊಡಲಾರರು. ಹೀಗೆ ಕೊಡುವವರು ಸರ್ಕಾರದಿಂದ ಪಡೆಯುವ ಪ್ರತಿಫಲ ಯಾವ ಬಗೆಯದು? ಈ ಕ್ರಿಯೆ ಅನಧಿಕೃತ ಅಕ್ರಮಗಳಿಗೆ ಎಡೆ ಮಾಡಿಕೊಟ್ಟಿಲ್ಲ ಎಂಬುದಕ್ಕೆ ವಿವರಣೆ ಎಲ್ಲಿದೆ? ಚುನಾವಣಾ ಅಕ್ರಮಗಳಿಗೂ ಈ ದೇಣಿಗೆ ಬಳಕೆಯಾಗದಿರದೇ? ಕಪ್ಪುಹಣವನ್ನು ಬಿಳಿಯದಾಗಿಸಿಕೊಳ್ಳುವ ತಂತ್ರವೂ ಇಲ್ಲಿ ಇರಲಾರದೇ?

ನೋಟು ರದ್ದತಿಯ ಸಂದರ್ಭದಲ್ಲಿ ಅನೇಕರ ಅಕ್ರಮ ಸಂಪತ್ತು ದೇಣಿಗೆಯಾಗಿ ಆಡಳಿತ ಪಕ್ಷದ
ಬೊಕ್ಕಸಕ್ಕೆ ಹರಿದಿದ್ದರೆ ಅಚ್ಚರಿ ಏನಿರಲಾರದಲ್ಲವೇ? ಈ ದೇಣಿಗೆಯ ಮೂಲವನ್ನು ಬಹಿರಂಗಪಡಿಸುವ
ಅಗತ್ಯವಿಲ್ಲ ಎಂಬ ಕಾನೂನು ಮಾನ್ಯವೇ? ಇದು ಮತ್ತಷ್ಟು ಅಪವಿತ್ರ ಕಾರ್ಯಗಳಿಗೆ ಕುಮ್ಮಕ್ಕು
ಕೊಡುತ್ತದೆಯಲ್ಲವೇ? ಯಾರಾದರೂ ವ್ಯಕ್ತಿಗಳು ಪಕ್ಷದ ಹೆಸರಲ್ಲಿ ಹೀಗೆ ಸಂಗ್ರಹವಾದ ದೇಣಿಗೆಯನ್ನು ಸಮಾಜವಿದ್ರೋಹಿ ಕೆಲಸಗಳಿಗೆ ಬಳಸದಿರಲಾರರೇ? ದೇಶದ ಯಾವುದೇ ವ್ಯಕ್ತಿ ತನ್ನ ಆದಾಯಕ್ಕೆ ತಕ್ಕ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯ. ಸಂದರ್ಭ ಬಂದಾಗ ಆದಾಯದ ಮೂಲವನ್ನು ಖಚಿತವಾಗಿ ಬಹಿರಂಗಪಡಿಸದಿದ್ದರೆ ಅದು ಅಕ್ರಮ ಸಂಪಾದನೆ ಎಂದಾಗುತ್ತದೆ ಹಾಗೂ ಜೈಲು ಶಿಕ್ಷೆಯೂ ಆಗುತ್ತದೆ. ಜನಸಾಮಾನ್ಯರಿಗೆ ಇಂಥ ಕಾನೂನು ಮಾಡುವ ಪಕ್ಷಗಳು ತಾವೂ ನ್ಯಾಯಯುತವಾಗಿ ಬದುಕಬೇಕಲ್ಲವೇ? ವಿದೇಶದಲ್ಲಿನ ಕಪ್ಪುಹಣದ ಬಗ್ಗೆ ಮಾತಾಡುವವರು ತಮ್ಮಲ್ಲೇ ರಾಶಿ ಬಿದ್ದ ಅಕ್ರಮ ಸಂಪಾದನೆಯ ಬಗ್ಗೆ ಉಸಿರೆತ್ತದಿರುವುದು ಸಮಾಜ ವಿರೋಧಿಯಾಗದೇ?

ಕೊಳಕು ತೊಳೆಯುವ ಪೊರಕೆ ಮೊದಲು ತಾನು ಸ್ವಚ್ಛವಾಗಿರಬೇಕು. ಪ್ರಜ್ಞಾವಂತರು ಈ ಸ್ವಚ್ಛತೆಗೆ ಇನ್ನಾದರೂ ಮುಂದಾಗಬೇಕು. ಘನ ನ್ಯಾಯಾಲಯಗಳು ಇದನ್ನೇ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆ ಎಂದು ಮಾನ್ಯ ಮಾಡಿ ಕೂಡಲೇ ಸರ್ಕಾರಕ್ಕೆ ನೋಟಿಸ್ ನೀಡುವಂತಾದರೆ ಹೆಚ್ಚು ಸುಧಾರಣೆಯಾದೀತು.

- ಡಾ. ಟಿ.ಗೋವಿಂದರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT