ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಎಲ್ಲಾ ಪುರಗಳ ಸಮಸ್ಯೆ

Last Updated 3 ಡಿಸೆಂಬರ್ 2020, 19:00 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರದ 1969ರ ಆದೇಶದಂತೆ ಮಂಜೂರಾಗಿ ಸಾಗುವಳಿ ಮಾಡುತ್ತಿರುವ ರೈತಾಪಿ ಜನರಿಗೆ ಖಾತೆ ಮಾಡಿಕೊಡಲು ಯಲ್ಲಾಪುರದ ತಹಶೀಲ್ದಾರರು ಉತ್ಸಾಹ ತೋರಿರುವುದು ಶ್ಲಾಘನೀಯ. ಸರ್ಕಾರಿ ದಾಖಲೆಗಳು ಹೇಳುವಂತೆ, ಉತ್ತರ ಕನ್ನಡ ಜಿಲ್ಲೆಯ ಬಹುಪಾಲು ಜಮೀನು ಅರಣ್ಯ ಪ್ರದೇಶವಾಗಿದೆ. ಅಂದಿನ ಬ್ರಿಟಿಷ್ ಸರ್ಕಾರವು ಭಾರತದ ಭೂಪ್ರದೇಶವನ್ನು ಸರ್ವೆ ಮಾಡಿದಾಗ, ಅಂದಿನ ಸ್ಥಿತಿಗತಿಗೆ ಅನುಗುಣವಾಗಿ ಊರಿನ ಜಾಗ, ಗದ್ದೆ, ಬ್ಯಾಣ, ಗೋಮಾಳ, ಹಳ್ಳ, ಕಾನು, ಬೆಟ್ಟ ಎಂದೆಲ್ಲ ವರ್ಗೀಕರಿಸಿ, ಅದರಂತೆ ಸರ್ವೆ ನಂಬರ್ ಗುರುತಿಸಲಾಗಿತ್ತು. ಅದು ಕೆಲವೆಡೆ ಹಾಗೆಯೇ ಮುಂದುವರಿದಿದೆ. ಆದರೆ ಆ ಪ್ರದೇಶಗಳು ಹಾಗೆಯೇ ಉಳಿದಿಲ್ಲ. ಅರಣ್ಯ ಎಂದು ವರ್ಗೀಕರಿಸಿದ ಪ್ರದೇಶದಲ್ಲಿ ಶಾಲೆ, ದೇವಸ್ಥಾನ, ಮನೆಗಳು, ಸರ್ಕಾರಿ ಕಚೇರಿಗಳೂ ತಲೆ ಎತ್ತಿದವು. ಇದನ್ನು ಮನಗಂಡು ಸುಮಾರು ನಾಲ್ಕು ದಶಕಗಳ ನಂತರ ಜನಸಂಖ್ಯೆಗೆ ಅನುಗುಣವಾಗಿ ಮತ್ತು ಜನರ ಜೀವನಾವಶ್ಯಕತೆಗೆ ತಕ್ಕಂತೆ ರೈತರು ಉಳುಮೆ ಮಾಡುತ್ತಿರುವ ಅರಣ್ಯ ಭೂಮಿಯನ್ನು 1969ರ ಆದೇಶದಂತೆ ಮಂಜೂರು ಮಾಡಿದ್ದು ಜನೋಪಕಾರಿ ಕೆಲಸ. ಆದರೆ ಅದು ಯಥಾವತ್ತಾಗಿ ಜಾರಿಯಾಗಿ ರೈತರ ಹೆಸರಿಗೆ ಖಾತೆ ಆಗಲಿಲ್ಲ. ಈಗ ರೈತರಲ್ಲಿ ಮಂಜೂರಿ ಆದೇಶವಿದೆ, ಆದರೆ ಪಹಣಿ ಪತ್ರಿಕೆಯಲ್ಲಿ ಅರಣ್ಯ ಎಂದು ತೋರಿಸುತ್ತದೆ.

ಈ ಗೊಂದಲದ ಲಾಭ ಪಡೆದ ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸುವ ಬೆದರಿಕೆ ಬೆತ್ತವನ್ನು ರೈತರ ಮೇಲೆ ಆಗಾಗ ಬೀಸುತ್ತಿದ್ದಾರೆ. ಇದು ಕೇವಲ ಯಲ್ಲಾಪುರ ತಾಲ್ಲೂಕಿನ ಸಮಸ್ಯೆಯಲ್ಲ, ಮಲೆನಾಡಿನ ಬಹುತೇಕ ತಾಲ್ಲೂಕುಗಳ ಸಮಸ್ಯೆ. ಇಂತಹ ಜಟಿಲ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿರುವ ತಹಶೀಲ್ದಾರರ ಕ್ರಮ ಮರಳುಗಾಡಿನಲ್ಲಿ ಓಯಸಿಸ್‌ನಂತೆ ಭಾಸವಾಗುತ್ತಿದೆ.

ಗಣಪತಿ ನಾಯ್ಕ, ಕಾನಗೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT