ಸೋಮವಾರ, ನವೆಂಬರ್ 30, 2020
27 °C

ವಾಚಕರ ವಾಣಿ: ಮನಸ್ಸಿನ ಮಸಿ ತೊಳೆಯಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ಇದರಿಂದಾಗಿ ಇಂಗ್ಲಿಷ್‌ ಭಾಷೆಯ ನಾಮಫಲಕಗಳಿಗೆ ಕನ್ನಡಪರ ಹೋರಾಟಗಾರರು ಮಸಿ ಬಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ನ. 9).

ಇದು, ಅವರ ನೋವಿನ ಮಾತೇ ವಿನಾ, ಇಂಗ್ಲಿಷ್‌ ಭಾಷೆಯ ನಾಮಫಲಕಗಳಿಗೆ ಬಸಿ ಬಳಿಯಲು ಕೊಟ್ಟ ಕರೆಯಲ್ಲ. ಈ ಹಿಂದೆ ಇಂಗ್ಲಿಷ್‌ ಭಾಷೆಯ ನಾಮಫಲಕಗಳಿಗೆ ಡಾಂಬರು ಬಳಿಯುವ ಯೋಜನೆಯನ್ನು ಕನ್ನಡಪರ ಹೋರಾಟಗಾರರು ಹಮ್ಮಿಕೊಂಡಿದ್ದರು. ಅದಕ್ಕೆ ಬಹಳಷ್ಟು ಟೀಕೆಗಳು ಎದುರಾಗಿದ್ದರಿಂದ ಆ ಯೋಜನೆ ಮುಂದುವರಿಯಲಿಲ್ಲ. ಒಂದು ವೇಳೆ ಮುಂದುವರಿದಿದ್ದರೂ ಕನ್ನಡದ ನಾಮಫಲಕಗಳು ರಾರಾಜಿಸುವ ಭರವಸೆ ಇರಲಿಲ್ಲ.

ಎಲ್ಲಿಯವರೆಗೆ ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲೆ ಅಭಿಮಾನ, ಪ್ರೀತಿ, ಗೌರವ, ಕಾಳಜಿ ಇರುವುದಿಲ್ಲವೋ ಅಲ್ಲಿಯವರೆಗೆ ಇಂಗ್ಲಿಷ್‌ ನಾಮಫಲಕಗಳೇ ಕಂಗೊಳಿಸುತ್ತಿರುತ್ತವೆ. ಇನ್ನೊಂದು ನೋವಿನ ಸಂಗತಿ ಎಂದರೆ, ಮನೆ ಬಾಡಿಗೆ ಕೊಡಲು ಉದ್ದೇಶಿಸಿದ ಮನೆ ಮಾಲೀಕರು ಹಾಕುವುದು ‘ಟು-ಲೆಟ್’ ಎಂಬ ಇಂಗ್ಲಿಷ್ ಬೋರ್ಡನ್ನೇ ವಿನಾ ‘ಮನೆ ಬಾಡಿಗೆಗಿದೆ’ ಎಂಬ ಬೋರ್ಡನ್ನಲ್ಲ. ಇಂಗ್ಲಿಷ್‌ ನಾಮಫಲಕಗಳಿಗೆ ಮಸಿ ಬಳಿಯುವುದಕ್ಕೆ ಬದಲು ಕನ್ನಡಿಗರ ಮನಸ್ಸಿನಲ್ಲಿರುವ ಇಂತಹ ಮಸಿಯನ್ನು ಮೊದಲು ತೊಳೆಯಬೇಕಿದೆ.

–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು