ವಾಚಕರ ವಾಣಿ: ಪ್ರಯೋಗಶೀಲತೆ ಎಲ್ಲಾ ಕಾಲದ ಸತ್ಯ
ಹಳೆ ಕನ್ನಡ ಚಲನಚಿತ್ರಗಳು ಸದಭಿರುಚಿಯಿಂದ ಕೂಡಿದ್ದವಾಗಿದ್ದು ಈಗಿನವು ‘ಅರುಚಿ’ ಎಂದು ಡಾ. ದೊಡ್ಡರಂಗೇಗೌಡ (ಸಂಗತ, ಮೇ 28) ಮತ್ತು ‘ರಾಮ! ರಾಮ!’ ಎಂದು ಸಿ.ಪಿ.ಕೆ. (ಜೂನ್ 3) ಅಸಮಾಧಾನ ತೋರಿದ್ದಾರೆ. ಆದರೆ ಚಿತ್ರಗೀತೆಗಳ ಸಾಹಿತ್ಯ ಮತ್ತು ಸಂಗೀತ ಯುಗಧರ್ಮಕ್ಕನುಗುಣವಾಗಿ ಬಂದಿವೆ.
ಪಿ.ಬಿ.ಶ್ರೀನಿವಾಸ್, ಡಾ. ರಾಜ್‍ಕುಮಾರ್, ಬಾಲಸುಬ್ರಹ್ಮಣ್ಯಂ ಅವರ ಹಾಡುಗಾರಿಕೆ ಒಬ್ಬರಂತೆ ಇನ್ನೊಬ್ಬರದ್ದು ಇರಲಿಲ್ಲ. ಇವರೆಲ್ಲಾ ಸುಮಧುರ ಗೀತೆಗಳ ಜೊತೆಗೆ ಪ್ರಯೋಗಶೀಲ ಗೀತೆಗಳನ್ನೂ ಹಾಡಿದ್ದು, ಕನ್ನಡ ಚಿತ್ರರಸಿಕರು ಅವೆಲ್ಲವನ್ನೂ ಮುಕ್ತವಾಗಿ ಸ್ವೀಕರಿಸಿದ್ದಾರೆ. ಹಂಸಲೇಖ, ಹರಿಕೃಷ್ಣ, ಯೋಗರಾಜ್ ಭಟ್, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್‍ರಂತಹ ಪ್ರತಿಭಾವಂತರಿಂದಾಗಿ ಕನ್ನಡ ಚಿತ್ರಗಳು ಸಂಗೀತದಲ್ಲಿ ತಮ್ಮದೇ ಆದ ವೈಶಿಷ್ಟ್ಯವನ್ನು ಕಾಯ್ದುಕೊಂಡಿವೆ.
ಈಗಿನ ಚಿತ್ರಗೀತೆಗಳಲ್ಲಿ ಮತ್ತೆ ಮತ್ತೆ ಕೇಳಬಹುದಾದಂತಹ ಹಾಡುಗಳು ಇಲ್ಲವೆಂದೇನಲ್ಲ. ಉದಾ: ಮಧುವನ ಕರೆದರೆ (ಇಂತಿ ನಿನ್ನ ಪ್ರೀತಿಯ), ನಿನ್ನಿಂದಲೇ (ಮಿಲನ), ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ (ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ), ಹ್ಞೂಂನ ಉಹ್ಞೂಂನ (ಕೋಟಿಗೊಬ್ಬ 2), ಅಪ್ಪಾ ಐ ಲವ್ ಯು ಪಾ (ಚೌಕ) ಹೀಗೆ ಇನ್ನೂ ಬೇಕಾದಷ್ಟನ್ನು ಹೆಸರಿಸಬಹುದು. ಈ ಕಾಲದ ಇಂತಹ ಅನೇಕ ಹಾಡುಗಳು ಸಾಹಿತ್ಯ, ಸಂಗೀತ, ಹಾಡುಗಾರಿಕೆ, ದೃಶ್ಯವೈಭವ ಎಲ್ಲದರಲ್ಲೂ ಉತ್ಕೃಷ್ಟವಾಗಿವೆ. ಇವು ಕೋಟ್ಯಂತರ ಶ್ರೋತೃಗಳ ಮನಸೂರೆಗೊಂಡಿದ್ದು, ಕನ್ನಡ ಚಿತ್ರಗಳ ಗುಣಾತ್ಮಕತೆಯನ್ನು ಹೆಚ್ಚಿಸಿವೆ.
-ಇಳಾ ಕುಲಕರ್ಣಿ, ಹೆಗ್ಗೋಡು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.