ಮಂಗಳವಾರ, ಮೇ 11, 2021
26 °C

ಹೀಗಾದರೆ ಉಳಿಗಾಲವಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೀಗಾದರೆ ಉಳಿಗಾಲವಿಲ್ಲ!

‘ಸೂಕ್ಷ್ಮ ಪರಿಸರ ಮತ್ತು ಜೀವ ವೈವಿಧ್ಯಗಳ ತಾಣವಾದ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ. ಕಸ್ತೂರಿ ರಂಗನ್ ಸಮಿತಿಯ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆ, ಕರ್ನಾಟಕದ ವಿರೋಧದಿಂದಾಗಿ ಮತ್ತೊಮ್ಮೆ ರದ್ದಾಗಿದೆ’ ಎಂದು ವರದಿಯಾಗಿದೆ (ಪ್ರ.ವಾ., ಆ. 27).

ಪಶ್ಚಿಮ ಘಟ್ಟಗಳು ದಕ್ಷಿಣದ ರಾಜ್ಯಗಳಿಗೆ ಜೀವದುಸಿರನ್ನೂ, ಜೀವ ಜಲವನ್ನೂ ನೀಡಿ ಕಾಪಾಡುತ್ತಿವೆ. ಮನುಷ್ಯ ಕೇಂದ್ರಿತ ಅಭಿವೃದ್ಧಿಗೆಂದು ನಾವು ಸತತವಾಗಿ ಅವುಗಳಿಗೆ ಹಾನಿಮಾಡುತ್ತಾ ಬಂದಿದ್ದೇವೆ. ಅದರ ಪರಿಣಾಮ ಕೇರಳ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಬಾರಿ ಕಾಣಿಸಿಕೊಂಡಿದೆ.

ಇನ್ನಾದರೂ ಯಾವ ಕಾರಣಕ್ಕೂ ಈ ಘಟ್ಟಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಮುಂಬರುವ ಅಧಿವೇಶನದಲ್ಲಿ ದಕ್ಷಿಣ ರಾಜ್ಯಗಳ ಜನಪ್ರತಿನಿಧಿಗಳಾದ ಶಾಸಕರೂ, ಸಂಸದರೂ ಪಕ್ಷಭೇದವಿಲ್ಲದೆ
ಕಸ್ತೂರಿ ರಂಗನ್ ವರದಿಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸುವ ಮೂಲಕ ತಮ್ಮ ‘ರಾಜಧರ್ಮ’ ವನ್ನು ಮೆರೆಯಬೇಕು. ಇಲ್ಲವಾದರೆ ಪಶ್ಚಿಮ ಘಟ್ಟಗಳಿಗೂ, ನಮಗೂ ಉಳಿಗಾಲವಿಲ್ಲ. ಮುಂದಿನ ಪೀಳಿಗೆಗೆ ಕುಡಿಯಲು ನೀರೂ ಉಸಿರಾ
ಡಲು ಗಾಳಿಯೂ ಇಲ್ಲವಾದೀತು.

-ಪ್ರೊ. ಶಿವರಾಮಯ್ಯ, ಬೆಂಗಳೂರು

ರಾಜಕೀಯ ಬೇಕಿತ್ತೇ?

ಕೊಡಗಿನಲ್ಲಿ ಕಂಡು ಕೇಳರಿಯದ ಭೀಕರ ಮಳೆ ಮತ್ತು ಭೂಕುಸಿತಗಳಿಂದಾಗಿ ಜನರು ಕಂಗಾಲಾಗಿದ್ದಾರೆ. ನೆರೆಸಂತ್ರಸ್ತರ ಸಂಕಷ್ಟ ಅರಿಯಲು ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಗಿಗೆ ಬಂದ ಸಂದರ್ಭದಲ್ಲಿ, ರಾಜ್ಯದ ಸಚಿವ ಸಾ.ರಾ. ಮಹೇಶ್‌ ಅವರೊಂದಿಗೆ ಉಂಟಾದ ಒಂದು ಸಣ್ಣ ವಿವಾದವನ್ನು ನಾಡಿನ ಮೂರು ಪ್ರಮುಖ ಪಕ್ಷಗಳು ಅನಗತ್ಯವಾಗಿ ಲಂಬಿಸಿವೆ. ಸ್ಥಳೀಯರು ತಮ್ಮ ಬದುಕು ಬವಣೆಗಳ ಬಗ್ಗೆ ಚಿಂತೆಯಲ್ಲಿರುವಾಗಲೂ ಇಂಥವರು ಪ್ರತಿಷ್ಠೆಗೆ ಬಿದ್ದು ವಾಗ್ಯುದ್ಧ ಆರಂಭಿಸಿರುವುದು ಹೇಯ ಸಂಗತಿ.

ಜನರ ಕಣ್ಣೀರು ಒರೆಸಬೇಕಾದ ಜನನಾಯಕರೇ ಹೀಗೆ ಪರಸ್ಪರ ಬಡಿದಾಡಿಕೊಂಡರೆ ಜನಸಾಮಾನ್ಯರ ಗತಿಯೇನು?

-ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ಸಂಸ್ಕೃತವನ್ನೂ ಸೇರಿಸಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹಲವು ಕೋರ್ಸ್‌ಗಳಿಗೆ ಯುಜಿಸಿ ಮತ್ತೆ ಮಾನ್ಯತೆ ನೀಡಿರುವುದು ಸ್ವಾಗತಾರ್ಹ.

ಒಟ್ಟು 17 ಕೋರ್ಸ್‌ಗಳನ್ನು ಪುನಃ ಆರಂಭಿಸಲು ಅನುಮತಿ ನೀಡಿದೆ ಎಂದು ವರದಿಯಾಗಿದೆ. ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ, ಹಿಂದಿ, ಉರ್ದು ಭಾಷಾ ಕೋರ್ಸ್‌ಗಳು ಇವೆ. ಆದರೆ ಸಂಸ್ಕೃತ ಭಾಷೆಯನ್ನು ಕೈಬಿಟ್ಟಿದ್ದೇಕೆ?

ವಿದೇಶಗಳಲ್ಲೂ ಈಗ ಸಂಸ್ಕೃತ ಕಲಿಯುವ ಪ್ರಯತ್ನಗಳು ನಡೆಯುತ್ತಿವೆ. ಸಂಸ್ಕೃತದ ಕಲಿಕೆಯಿಂದ ವೇದಶಾಸ್ತ್ರಗಳ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಮುಕ್ತ ವಿಶ್ವವಿದ್ಯಾಲಯದವರು ಸಂಸ್ಕೃತ ಕೋರ್ಸ್‌ಗಳನ್ನೂ ಆರಂಭಿಸಲು ಯುಜಿಸಿಯಿಂದ ಅನುಮತಿ ಪಡೆಯಬೇಕು.

-ಟಿ.ಆರ್‌. ಗಾಯತ್ರಿ, ಬೆಂಗಳೂರು

ಸಮ್ಮೇಳನ ಬೇಕೇ?

ನಿಗದಿಯಂತೆ, ಬರುವ ನವೆಂಬರ್‌ ತಿಂಗಳಲ್ಲಿ 84ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು. ಆದರೆ ಕೊಡಗು ಜಿಲ್ಲೆಯ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿರುವಾಗ ಸಮ್ಮೇಳನ ನಡೆಸುವುದು ಯೋಗ್ಯವೇ?
ಇತ್ತ ಉತ್ತರ ಕರ್ನಾಟಕವೂ ಮೂರು ವರ್ಷಗಳಿಂದ ಬರ ಎದುರಿಸುತ್ತಿದೆ. ಅಲ್ಲಿಯ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಇಂಥ ಪರಿಸ್ಥಿತಿ ಇರುವಾಗ ಸಾಹಿತ್ಯ ಸಮ್ಮೇಳನ ನಡೆಸುವುದು ಎಷ್ಟು ಸರಿ?

2015ರಲ್ಲಿ ಇಂಥದ್ದೇ ಸ್ಥಿತಿ ಬಂದಿದ್ದ ಕಾರಣಕ್ಕೆ ರಾಯಚೂರಿನಲ್ಲಿ ನಡೆಸಲು ನಿಗದಿಯಾಗಿದ್ದ ಸಮ್ಮೇಳನವನ್ನು ಸ್ವಲ್ಪ ಕಾಲ ಮುಂದೂಡಲಾಗಿತ್ತು. ಈಗಲೂ ಅಂಥ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

-ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರ

ಕ್ಷೇತ್ರಾಭಿವೃದ್ಧಿ ನಿಧಿ ಬಳಸಿ

ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಸದಸ್ಯರು ಹಾಗೂ ವಿಧಾನಪರಿಷತ್ತಿನ ಸದಸ್ಯರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯನ್ನು ರಾಜ್ಯದ ಯಾವ ಭಾಗದ ಅಭಿವೃದ್ಧಿ ಕೆಲಸಗಳಿಗಾದರೂ ಬಳಸಿಕೊಳ್ಳಬಹುದು. ವಿಧಾನಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾದವರಿಗೆ ಮಾತ್ರ ಈ ನಿಧಿಯ ಬಳಕೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳಿವೆ. ಕೆಳಮನೆಯಿಂದ ಮೇಲ್ಮನೆಗೆ ಆಯ್ಕೆಯಾದ ಉಳಿದ ಸದಸ್ಯರು ಮತ್ತು ರಾಜ್ಯಪಾಲರಿಂದ ನಾಮನಿರ್ದೇಶನಗೊಂಡವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಯಾವ ಜಿಲ್ಲೆಗೆ ಬೇಕಾದರೂ ಕೊಡಬಹುದು.

ಆದ್ದರಿಂದ ಮೇಲ್ಮನೆಗಳಿಗೆ ಆಯ್ಕೆಯಾಗಿರುವ ಎಲ್ಲ ಸದಸ್ಯರು ಈ ವರ್ಷ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಸಂಪೂರ್ಣವಾಗಿ ಕೊಡಗು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೊಡಬಹುದಲ್ಲವೇ? ಆ ಹಣವನ್ನು ಕೊಡಗಿನ ಅಭಿವೃದ್ಧಿಗೆ ಬಳಸಿಕೊಂಡರೆ ಸಂತ್ರಸ್ತ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೆ ತೆರಿಗೆದಾರರ ಹಣದ ಸದುಪಯೋಗವೂ ಆಗುತ್ತದೆ. ಜನಪ್ರತಿನಿಧಿಗಳು ಸ್ಪಂದಿಸುವರೇ?

-ಕೆ.ಎಸ್. ನಾಗರಾಜ್, ಬೆಂಗಳೂರು

ಮಂತ್ರಿಯ ಮಾದರಿ!

ಎಚ್.ಡಿ. ರೇವಣ್ಣ ಅವರು ಸಮ್ಮಿಶ್ರ ಸರ್ಕಾರ ರಚನೆಯಾದ ಕೂಡಲೇ ಖಾತೆಯ ಬಗೆಗೆ ಕ್ಯಾತೆ ತೆಗೆದು ಸುದ್ದಿ ಮಾಡಿದ್ದರು. ಲೋಕೋಪಯೋಗಿ ಖಾತೆಯ ಮಂತ್ರಿಯಾದ ಮೇಲೆ, ಬೇರೆ ಬೇರೆ ಮಂತ್ರಿಗಳ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಮತ್ತೆ ಸುದ್ದಿಯಾದರು! ಸದಾ ‘ವಿವಾದ’ಗಳನ್ನು ಹುಟ್ಟು ಹಾಕುತ್ತಿರುವ ರೇವಣ್ಣ, ಇತ್ತೀಚೆಗೆ ಕೊಡಗಿನ ಪ್ರವಾಹ ಪೀಡಿತರಿಗೆ ಬಿಸ್ಕೆಟ್‌ ಪ್ಯಾಕೆಟ್‌ಗಳನ್ನು ನಾಯಿಗೆ ಎಸೆಯುವಂತೆ ಬಿಸಾಡಿ ಸುದ್ದಿ ಮಾಡಿದ್ದು ದುರಂತ.

-ಪ್ರೊ. ಆರ್.ವಿ. ಹೊರಡಿ, ಧಾರವಾಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು