ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೂ ಕಿರುಕುಳವಲ್ಲವೇ?

Last Updated 28 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

‘ಸ್ವೀಟಿ, ಹನಿ, ಬೇಬ್ ಎನ್ನಬೇಡಿ, ಅದು ಮಹಿಳೆಗೆ ಅಗೌರವ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಪೆಪ್ಸಿಕೊ ಕಂಪನಿಯ ಸಿಇಒ ಆಗಿದ್ದ ಇಂದ್ರಾ ನೂಯಿ. ‘ವೃತ್ತಿವಲಯದಲ್ಲಿ ಮಹಿಳೆಯರ ವ್ಯಕ್ತಿತ್ವವನ್ನು ಗೌರವಿಸಬೇಕೇ ವಿನಾ ಅವರನ್ನು ಇಂಥ ಹೆಸರುಗಳಿಂದ ಕರೆಯುವುದು ಅವಹೇಳನಕಾರಿ’ ಎಂದಿದ್ದಾರೆ. ನಿಜವೇ. ಕೆಲಸದ ಜಾಗಗಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಅಧಿನಿಯಮ, 2013 ಪ್ರಕಾರವೂ ಇದು ನಿಷಿದ್ಧ.

ಆದರೆ, ನಮ್ಮ ಟಿ.ವಿ. ಚಾನೆಲ್‌ಗಳಲ್ಲಿ ಪ್ರಸಾರವಾಗುವ ಹೆಚ್ಚಿನ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವ ಯುವತಿಯರನ್ನು ಉದ್ದೇಶಿಸಿ ಆ್ಯಂಕರ್‌ಗಳು, ತೀರ್ಪುಗಾರರು ಅನಾಯಾಸ ಅಭ್ಯಾಸವೆಂಬಂತೆ, ಅವರ ದೈಹಿಕ ಅಂಕು ಡೊಂಕುಗಳನ್ನು ವರ್ಣಿಸುತ್ತಾರೆ; ಹಾವಭಾವಗಳಿಂದ ಇನ್ನೇನು ಅವರನ್ನು ಹಸಿಹಸಿ ನುಂಗಿಬಿಡುವರೋ ಎನ್ನುವಂತೆ ವರ್ತಿಸುತ್ತಾರೆ. ಅವರನ್ನು ‘ಸೆಕ್ಸಿ’, ‘ಹಾಟ್’ ಎಂದು ಕರೆಯುತ್ತಾರೆ. ಇದು ಲೈಂಗಿಕ ಕಿರುಕುಳವಲ್ಲವೇ? ಅಲ್ಲ.

ಕಾನೂನಿನಲ್ಲಿ, ‘ಈ ರೀತಿಯ ಲೈಂಗಿಕ ಇಂಗಿತದ ಮಾತು ಸಂಬಂಧಪಟ್ಟ ಮಹಿಳೆಗೆ ‘ಅಪ್ರಿಯ’ವಾಗಿರಬೇಕು, ಇದರಿಂದಾಗಿ ಆಕೆಯ ನಿತ್ಯದ ಕೆಲಸ ಕಾರ್ಯಗಳಿಗೆ ಮಾರಕವಾಗಿರಬೇಕು’ ಎಂದಿದೆ. ಆದರೆ, ನಾವು ಉಲ್ಲೇಖಿಸುತ್ತಿರುವ ರಿಯಾಲಿಟಿ ಷೋಗಳಲ್ಲಿನ ಮಹಿಳೆಯರಿಗೆ ಆ್ಯಂಕರ್‌ಗಳು, ತೀರ್ಪುಗಾರರ ಈ ಮಾತುಗಳು ಅಪ್ರಿಯವಾಗುವ ಬದಲಿಗೆ, ಬಹಳ ಮೆಚ್ಚುಗೆಯಾಗುತ್ತವೆ; ಅವರು ಆ ಮಾತುಗಳನ್ನು ಸ್ವತಃ ಎಂಜಾಯ್ ಮಾಡುತ್ತಾರೆ.

ಕಾನೂನು ಪ್ರಕಾರ ಅಲ್ಲದಿರಬಹುದು; ನೈತಿಕವಾಗಿ ಇದೂ ಅಪರಾಧವೇ ಸರಿ. ಏಕೆಂದರೆ ಆ ಪುರುಷ– ಮಹಿಳೆಯರು ಏಕಾಂತದಲ್ಲಿ ಪರಸ್ಪರ ಏನನ್ನಾದರೂ ಕರೆದುಕೊಳ್ಳಲಿ, ಹೇಗಾದರೂ ಪ್ರಿಯವಾಗುವಂತೆ ವರ್ತಿಸಲಿ, ಅದು ಅವರವರ ಇಷ್ಟ. ಆದರೆ, ಇಡೀ ಕುಟುಂಬ, ಸಾರ್ವತ್ರಿಕವಾಗಿ ಕುಳಿತು ಗ್ರಹಿಸುವ ‘ರಿಯಾಲಿಟಿ’ಯಲ್ಲಿ ಮಹಿಳೆಯರನ್ನು ಇಷ್ಟು ‘ಭೌತಿಕ’ವಾಗಿ ಮಾತ್ರ ಮೆಚ್ಚುವುದು, ಲಘುವಾಗಿ ಪರಿಗಣಿಸಿ ಮಾತಾಡುವುದು ನೋಡುವವರ ಮನೋಭಾವದ ಮೇಲೆ ಪ್ರಭಾವ ಬೀರುತ್ತದೆ. ಇದರ ಅನೇಕ ವಿಕೃತ ರೂಪಗಳನ್ನು ನಾವು ಎಲ್ಲೆಲ್ಲೂ ಕಾಣಬಹುದಾಗಿದೆ. ಈ ಕುರಿತು ಸಾಮಾಜಿಕ ಜವಾಬ್ದಾರಿಯನ್ನು ತೋರುವಷ್ಟು ಸೂಕ್ಷ್ಮತೆ ನಮ್ಮ ಚಾನೆಲ್‌ಗಳಿಗೆ ಇದೆಯೇ?

ಎಂ. ಅಬ್ದುಲ್ ರೆಹಮಾನ್ ಪಾಷ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT