ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜ ಘಟನೆಯನ್ನೂ ನೆನೆಯಬೇಕಿತ್ತು

Last Updated 31 ಅಕ್ಟೋಬರ್ 2019, 18:02 IST
ಅಕ್ಷರ ಗಾತ್ರ

‘ಎರಡು ಶತಮಾನಗಳ ಹಿಂದೆ ನರಕ ಚತುರ್ದಶಿಯಂದು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಅಯ್ಯಂಗಾರ್ ಸಮುದಾಯದ800 ಮಂದಿಯನ್ನು ಟಿಪ್ಪು ಸುಲ್ತಾನನ ಸೈನಿಕರು ಕೊಂದಿದ್ದರಿಂದ ಮೇಲುಕೋಟೆ ಬ್ರಾಹ್ಮಣರು ಪ್ರತಿವರ್ಷ ದೀಪಾವಳಿಯಂದು ಕಪ್ಪು ದಿನ ಆಚರಿಸುತ್ತಾರೆ. ಹಾಗಾಗಿ, ನಾನೂ ಈ ವರ್ಷ ದೀಪಾವಳಿ ಆಚರಿಸುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಮೊನ್ನೆ ವಿವಾದಾತ್ಮಕ ಟ್ವೀಟ್ ಮಾಡಿದರು. ಆದರೆ, ಟಿಪ್ಪು ಆಡಳಿತದಲ್ಲಿ ಈ ರೀತಿಯ ಕರಾಳ ಘಟನೆ ನಡೆದ ಬಗ್ಗೆ ಯಾವುದೇ ನೈಜ ದಾಖಲೆ ಲಭ್ಯವಿಲ್ಲ. ಮೇಲಾಗಿ ಟಿಪ್ಪು ಸುಲ್ತಾನನ ಬಳಿ ಇದ್ದ ಸೈನಿಕರಲ್ಲಿ ಶೇ 80ರಷ್ಟು ಮಂದಿ ಹಿಂದೂಗಳಾಗಿದ್ದರು. ಅವರಲ್ಲಿ ದೊಡ್ಡ ಸಂಖ್ಯೆಯಲ್ಲಿ ಮರಾಠರೂ ಇದ್ದರೂ. ಒಂದು ವೇಳೆ ಈ ಘಟನೆ ನಿಜ ಆಗಿದ್ದರೂ ಹಿಂದೂಗಳೇ ಹಿಂದೂಗಳನ್ನು ಕೊಂದಂತೆ ಆಗುತ್ತದೆ. ಅಷ್ಟೇ ಅಲ್ಲ, ಟಿಪ್ಪುವಿನ ಆಡಳಿತ ಕಾಲದಲ್ಲಿಯೇ ಕರ್ನಾಟಕದ ಇತಿಹಾಸದಲ್ಲಿ ಮರಾಠರ ಇನ್ನೊಂದು ಕರಾಳ ಕೃತ್ಯದ ದಾಖಲೆ ಇದೆ. ದೀಪಾವಳಿಯ ದಿನವೇ 1796ರಲ್ಲಿ ಶೈವ ಚಿತ್ಪಾವನ ಬ್ರಾಹ್ಮಣನಾದ 2ನೇ ಬಾಜಿರಾವ್ ಪೇಶ್ವೆಯು ಆದಿ ಶಂಕರರಿಂದಲೇ ಸ್ಥಾಪಿಸಲಾದ ಶೃಂಗೇರಿ ಶಾರದಾ ಮಠದ ಮೇಲೆ ದಾಳಿ ಮಾಡಿದ್ದ. ಆಗ ಆತನ ಮರಾಠಾ ಸೈನಿಕರು ಶೃಂಗೇರಿ ಮಠದ ಸಂಪತ್ತನ್ನು ಲೂಟಿ ಮಾಡುವಾಗ ವಿರೋಧಿಸಿದ ಶೃಂಗೇರಿಯ ನೂರಾರು ಬ್ರಾಹ್ಮಣರನ್ನು ಪೇಶ್ವೆಯ ಸೈನಿಕರು ಕೊಂದರು ಮತ್ತು ಮಠದಲ್ಲಿದ್ದ ಅಗಾಧ ಸಂಪತ್ತನ್ನು ತಮ್ಮ ರಾಜಧಾನಿ ಪುಣೆಗೆ ಕೊಂಡುಹೋದರು. ಆದರೆ ನಂತರ ಶೃಂಗೇರಿ ಮಠವನ್ನು ರಿಪೇರಿ ಮಾಡಿಸಿ, ಪೇಶ್ವೆ ಲೂಟಿ ಮಾಡಿದಷ್ಟು ಮೊತ್ತದ ಸಂಪತ್ತನ್ನು ಮಠಕ್ಕೆ ತುಂಬಿಸಿಕೊಟ್ಟಿದ್ದು ಟಿಪ್ಪು ಸುಲ್ತಾನ್ ಎಂದು ಶೃಂಗೇರಿ ಮಠದಲ್ಲಿಯೇ ಲಿಖಿತ ದಾಖಲೆ ಇದೆ. ಮೇಲುಕೋಟೆಯ ಕಾಲ್ಪನಿಕ ಘಟನೆಯ ಜತೆ ಶೃಂಗೇರಿಯ ನೈಜ ಘಟನೆಯನ್ನೂ ಉಪಮುಖ್ಯಮಂತ್ರಿಯವರು ದೀಪಾವಳಿಯಂದು ನೆನಪಿಸಿಕೊಂಡಿದ್ದರೆ ಅವರ ಇತಿಹಾಸದ ಜ್ಞಾನ ಹಾಗೂ ನ್ಯಾಯಪರತೆಯನ್ನು ಒಪ್ಪಿಕೊಳ್ಳಬಹುದಿತ್ತು!

ಲಿಂಗರಾಜ ರಾವ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT