ಬುಧವಾರ, ಮೇ 19, 2021
22 °C

ವಾಚಕರ ವಾಣಿ: ಆಹಾರ ಯೋಜನೆಯ ಫಲ ಫಲಾನುಭವಿಗೆ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಕಂಗೆಟ್ಟಿದ್ದ ಮಕ್ಕಳು, ಜನ ಕುಡಿದು ಬಿಸಾಡಿದ್ದ ಎಳನೀರಿನ ತಿರುಳನ್ನು ತಿಂದ ಘಟನೆ ರಾಮನಗರದಲ್ಲಿ ನಡೆದಿದೆ (ಪ್ರ.ವಾ., ಏ. 3). ವಿಶ್ವಸಂಸ್ಥೆಯ ವರದಿಗಳ ಪ್ರಕಾರ, ಭಾರತದಲ್ಲಿ ಈಗಲೂ ಹಸಿವಿನಿಂದ ಸಾವು–ನೋವು ಸಂಭವಿಸುತ್ತವೆ ಹಾಗೂ 19 ಕೋಟಿ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಸುಮಾರು 3 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಪ್ರತಿವರ್ಷ ಸಾಯುತ್ತಾರೆ.

ಮಾಜಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ದೇಶವು ಸ್ವಾತಂತ್ರ್ಯ ಪಡೆದ ದಿನ ಹೇಳಿದ ಮಾತೊಂದು ಹೀಗಿದೆ: ‘ಭಾರತದ ಇಂದಿನ ಬಹುಮುಖ್ಯವಾದ ಸವಾಲು ಎಂದರೆ ಭಾರತವನ್ನು ಹಸಿವುಮುಕ್ತ ರಾಷ್ಟ್ರವನ್ನಾಗಿ ಮಾಡುವುದು’. ಆದರೆ ಇಂದಿಗೂ ಅನೇಕ ಸರ್ಕಾರಿ ಯೋಜನೆಗಳ ಹೊರತಾಗಿಯೂ ಜನ ಸಾಯುತ್ತಿರುವುದು ದುಃಖದ ಸಂಗತಿಯೇ ಸರಿ ಅಥವಾ ಯೋಜನೆಗಳನ್ನು ಸಮಗ್ರವಾಗಿ ಜಾರಿಗೆ ತರುವಲ್ಲಿ ಲೋಪದೋಷ ಇರಬಹುದೇನೋ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಕರ್ನಾಟಕದಲ್ಲಿಯೇ ಸುಮಾರು ಒಂದೂವರೆ ಲಕ್ಷದಷ್ಟು ಮಕ್ಕಳು ಉಪಾಹಾರ ಇಲ್ಲದೆ ಶಾಲೆಗೆ ಹೋಗುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗಿರಬಹುದು. 2020ರ ಹಠಾತ್ ಲಾಕ್‌ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರು, ಮಹಿಳೆಯರು, ವಯೋವೃದ್ಧರು, ಮಕ್ಕಳು ಮತ್ತು ಅಂಗವಿಕಲರು ಊಟವಿಲ್ಲದೆ ನೂರಾರು ಮೈಲುಗಳು ನಡೆದು ಸಂಕಷ್ಟಕ್ಕೀಡಾಗಿದ್ದು, ಅವರಲ್ಲಿ ಕೆಲವರು ಸಾವಿಗೀಡಾಗಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಸಾವು-ನೋವುಗಳನ್ನು ಮರೆಯುವ ಮುನ್ನವೇ ವಿಭಿನ್ನ ಮತ್ತು ತೀಕ್ಷ್ಣವಾದ ರೀತಿಯಲ್ಲಿ ಕೋವಿಡ್‌ ಮರಳಿ ಬಂದಿದೆ. ಬೇಡಿಕೆ-ಪೂರೈಕೆಗಳ ಅಂತರ ಜಾಸ್ತಿಯಾಗಿ ಮುಗ್ಧ ಜನರ ಸಂಕಷ್ಟ ಮುಗಿಲು ಮುಟ್ಟಿದೆ.

ಕಳೆದ ಬಾರಿಯ ಘಟನೆಗಳನ್ನು ಅರಿತಿರುವ ಕೇಂದ್ರ ಸರ್ಕಾರ ಮೂರು ತಿಂಗಳ ಮಟ್ಟಿಗೆ ಉಚಿತ ಆಹಾರವನ್ನು ಒದಗಿಸುವ ಯೋಜನೆಯನ್ನು ರೂಪಿಸಿದೆ. ಆದರೆ ಯೋಜನೆ ಸರಿಯಾದ ಫಲಾನುಭವಿಗಳಿಗೆ ಸೇರುವಂತೆ ಆಡಳಿತ ಯಂತ್ರ ನೋಡಿಕೊಳ್ಳಬೇಕು. ಆಹಾರಧಾನ್ಯ ಹಾಗೂ ದಿನಸಿ ಪೊಟ್ಟಣಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೊಳೆತು ತಿಪ್ಪೆ ಸೇರದಿರುವಂತೆ ಅಥವಾ ಉಳ್ಳವರ ಪಾಲಾಗದಂತೆ ಎಚ್ಚರ ವಹಿಸಬೇಕು.

ಎಚ್.ವೆಂಕಟೇಶ ದೊಡ್ಡೇರಿ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು