ಬುಧವಾರ, ನವೆಂಬರ್ 25, 2020
24 °C

ನಿಘಂಟು ದೋಷ ಪತ್ತೆಯಾಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ‘ಸಂಕ್ಷಿಪ್ತ ಕನ್ನಡ ನಿಘಂಟು’ 12ನೇ ಆವೃತ್ತಿಯಲ್ಲಿ ಪುಟ ಸಂಖ್ಯೆ ಮತ್ತು ಶಬ್ದಗಳ ಅನುಕ್ರಮಣಿಕೆಗೆ ಸಂಬಂಧಿಸಿದಂತೆ ದೋಷಗಳಿದ್ದು, ಇದಕ್ಕೆ ಯಾರು ಹೊಣೆ ಎಂದು ಬಸವರಾಜ ಆಕಳವಾಡಿ ಪ್ರಶ್ನಿಸಿದ್ದಾರೆ (ವಾ.ವಾ., ನ. 5). ಆದರೆ ಅವರು ಬರೆದಿರುವಂತೆ ಈ ನಿಘಂಟಿನ ಒಂದು ಲಕ್ಷ ಪ್ರತಿಗಳನ್ನು ನಾವು ಪ್ರಕಟ ಮಾಡಿಲ್ಲ. ಕೇವಲ ಹತ್ತು ಸಾವಿರ ಪ್ರತಿಗಳನ್ನು ಪ್ರಕಟಿಸಲಾಗಿದೆ. ಅಂದಿನ ಸಮ್ಮೇಳನವೂ ಸೇರಿದಂತೆ ಇದುವರೆಗೆ ಸುಮಾರು ಎರಡೂವರೆ ಸಾವಿರ ಪ್ರತಿಗಳನ್ನು ಮಾರಾಟ ಮಾಡಿದ್ದು, ಓದುಗರಿಂದಾಗಲೀ ಪುಸ್ತಕ ರಾಟಗಾರರಿಂದಾಗಲೀ
ನಮಗೆ ದೂರುಗಳು ಬಂದಿಲ್ಲ. ನಮ್ಮಲ್ಲಿ ಇರುವ ಪ್ರತಿಗಳನ್ನು ಒಂದೊಂದಾಗಿ ಪರಿಶೀಲನೆ ಮಾಡುತ್ತಿದ್ದು, ಅದರಲ್ಲಿಯೂ ತಕ್ಷಣ ನಮಗೆ ಅಂತಹ ದೋಷ ಇರುವ ಪುಟಗಳು ಪತ್ತೆಯಾಗಿಲ್ಲ. ನಮ್ಮ ಸಂಸ್ಥೆಯಲ್ಲಿ ಇರುವವರ ವೈಯಕ್ತಿಕ ಸಂಗ್ರಹದಲ್ಲಿರುವ ಇದೇ ಆವೃತ್ತಿಯ ಪ್ರತಿಗಳಲ್ಲಿಯೂ ದೋಷಗಳು ಕಂಡುಬಂದಿಲ್ಲ.

‘ಈ ತಪ್ಪು, ಪುಸ್ತಕದ ಬೈಂಡಿಂಗ್ ಹಂತದಲ್ಲಿ ಆಗಿರದೇ ಪೇಜ್ ಸೆಟ್ಟಿಂಗ್ ಮತ್ತು ಕರಡು ತಿದ್ದುವ ಹಂತದಲ್ಲಿ ಆಗಿರುವುದು ತಿಳಿದುಬರುತ್ತದೆ’ ಎಂದೂ ಅವರು ಬರೆದಿದ್ದಾರೆ. ವಾಸ್ತವದಲ್ಲಿ, ಈ ನಿಘಂಟನ್ನು ಪುನರ್ ಮುದ್ರಣ ಮಾಡುತ್ತಿರುವುದರಿಂದ ಇದರಲ್ಲಿ ಕರಡು ತಿದ್ದುವ ಮತ್ತು ಮತ್ತೆ ಪುಟ ವಿನ್ಯಾಸ ಮಾಡುವ ಪ್ರಮೇಯವೇ ಬಂದಿರುವುದಿಲ್ಲ. ಈ ನಿಘಂಟಿಗೆ ತುಂಬ ಬೇಡಿಕೆಯಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಇದರ ಪ್ರತಿಗಳು ಹೆಚ್ಚು ಮಾರಾಟ ವಾಗುತ್ತವೆ. ಅದಕ್ಕಾಗಿ, ಪ್ರತೀ ಬಾರಿಯಂತೆ ಈಗಲೂ ನಮ್ಮಲ್ಲಿ ಇರುವ ಪ್ಲೇಟ್‍ಗಳನ್ನು ಬಳಸಿ ಮುದ್ರಿಸಿ ಹೊರಗಿನ ಒಂದು ಮುದ್ರಣಾಲಯಕ್ಕೆ ನಾವು ಬೈಂಡಿಂಗ್ ಮಾಡಲು ಕೊಟ್ಟಿದ್ದೆವು. ಈ ನಿಘಂಟಿನ ಫಾರ್ಮ್‌ಗಳನ್ನು ಜೋಡಿಸಿ ಬೈಂಡ್ ಮಾಡುವುದಕ್ಕಿಂತ ಮುಂಚೆ ಮುದ್ರಣಾಲಯದವರು ನಮಗೆ ಕೊಟ್ಟ ಒಂದು ಮಾದರಿ ಪ್ರತಿಯಲ್ಲಿಯೂ ಈ ದೋಷಗಳು ಕಂಡುಬಂದಿರಲಿಲ್ಲ. ಬಸವರಾಜ ಅವರು ಕೊಂಡ ಪ್ರತಿಯನ್ನು ಪರಿಷತ್ತಿಗೆ ಕೊಟ್ಟರೆ ಬದಲಿಸಿ ಕೊಡುತ್ತೇವೆ.

- ಮನು ಬಳಿಗಾರ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.