ಬುಧವಾರ, ಏಪ್ರಿಲ್ 1, 2020
19 °C

ಬೈಗುಳಕ್ಕೂ ಬಲಪಂಥಕ್ಕೂ ಸಂಬಂಧವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಪತ್ರಕರ್ತ ಕೃಷ್ಣ ಪ್ರಸಾದ್ ಅವರ, ‘ಕನ್ನಡ ಹರಾಜೋತ್ಸವ: ದಿನಾ ಆಚರಣೆ’ ಲೇಖನ (ಪ್ರ.ವಾ., ಮಾರ್ಚ್‌ 16) ಓದಿ ಆಶ್ಚರ್ಯ, ಭಯ ಎರಡೂ ಆಯಿತು. ಕನ್ನಡ ಭಾಷೆಗಿರುವ ಸುದೀರ್ಘ ಇತಿಹಾಸ, ವಿಧಾನಮಂಡಲದಲ್ಲಿ ಸದಸ್ಯರು ಇತ್ತೀಚೆಗೆ ಬಳಸಿದ ಬೈಗುಳ, ಸಾರ್ವಜನಿಕವಾಗಿ ಸಹ ಜನ ಕಮ್ಯುನಲ್ ಆಗಿ ಬಳಸಲು ಶುರು ಮಾಡಿದ ಭಾಷಾ ಪದಪ್ರಯೋಗವನ್ನು ಪಟ್ಟಿ ಮಾಡುತ್ತ ಕೊನೆಗೆ, ಬಲಪಂಥೀಯ ಪಕ್ಷಗಳ ಸರ್ಕಾರಗಳು ಅಧಿಕಾರಕ್ಕೆ ಬಂದು ಈ ರೀತಿ ಆಯಿತು ಎನ್ನುವ ಬಾಲಿಶ ವಿಚಾರವನ್ನು ಅವರು ಮಂಡಿಸಿದ್ದಾರೆ.

ಬೈಗುಳ ನಮ್ಮ ನಾಡು– ನುಡಿಯ ಭಾಗ. ಹೊಸಬರು ಯಾರಾದರೂ ಬೈಗುಳದ ಬಗ್ಗೆ ಬರೆಯಬೇಕೆಂದರೆ, ಅವರು ಉತ್ತರ ಕರ್ನಾಟಕಕ್ಕೆ ಹೋಗಿ ಬರಬೇಕು. ನಮ್ಮ ಗ್ರಾಮೀಣ ಭಾಗದ ಜನ, ಜಾತಿ ಆಧರಿಸಿ ಬೈಯ್ಯುವುದು ಮೊದಲಿನಿಂದಲೂ ಇದೆ. ಇದು ಸರಿಯೇ? ಖಂಡಿತ ಅಲ್ಲ. ಜನರ ಬಾಯಿಂದ ಬರುವ ಅಂತಹ ಪದಪುಂಜಗಳನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಹಾಗೆಂದು ಸದನದಲ್ಲಿ ಅವನ್ನೆಲ್ಲ ಬಳಸಲು ಸಾಧ್ಯವೇ? ಆದರೆ ಬಲಪಂಥೀಯ ಪಕ್ಷಗಳು ಬರುವ ಮುಂಚಿನಿಂದಲೂ ಅಲ್ಲಿ ಬೈಗುಳ ಇತ್ತು. ಅದು ಸರಿಯೇ? ಖಂಡಿತ ಅಲ್ಲ. ಇಷ್ಟಕ್ಕೂ ತಮಿಳು
ನಾಡಿನಲ್ಲಿ ಜಯಲಲಿತಾ ಅವರ ಮೇಲೆ ಕೈ ಮಾಡಿ, ಸೀರೆ ಮುಟ್ಟಿದ್ದು ಯಾರು? ದೇವರನ್ನೇ ನಂಬದ ಪಕ್ಷದ ಜನ. ಇನ್ನು ವಿದೇಶದ ಉದಾಹರಣೆ ಕೊಡಲು ನಿಂತರೆ ಇನ್ನೊಂದು ಲೇಖನ ಬರೆಯಬೇಕಾಗಬಹುದು. ಲೇಖಕರು ಹೇಳಿದ ಬಲಪಂಥೀಯ ದೇಶಗಳನ್ನು ಬಿಡೋಣ. ದಕ್ಷಿಣ ಕೊರಿಯಾ, ಇಟಲಿಯಂತಹ ಹಲವಾರು ದೇಶಗಳ ಉದಾಹರಣೆಯನ್ನು ನಾವು ಕೊಡಬಹುದು. ಬೈಗುಳಕ್ಕೂ ಬಲಪಂಥಕ್ಕೂ ಸಂಬಂಧ ಇದೆ ಎನ್ನುವ ಅವರ ವಾದದಲ್ಲಿ ಹುರುಳಿಲ್ಲ. ಕರ್ನಾಟಕದ ಬಂಡಾಯ ಮತ್ತು ದಲಿತ ಸಾಹಿತ್ಯದ ನೆಲೆಯಲ್ಲಿ ಬಂದ ಹಲವಾರು ಕೃತಿಗಳಲ್ಲಿ ಬೈಗುಳ ಇದೆ. ಕೃತಿಯ ಸಂವೇದನೆಯನ್ನು ಹೆಚ್ಚಿಸುವ ಆ ಬೈಗುಳವನ್ನು, ಸ೦ಸ್ಕೃತಿ ಯನ್ನು ದಾಖಲಿಸುವ ಪ್ರಯತ್ನ ಅದಾಗಿತ್ತು ಎಂದೇನೋ ಜನ ಹೊಗಳಿದ್ದಿದೆ. ಎಪ್ಪತ್ತು ಮತ್ತು ಎಂಬತ್ತರ ದಶಕದ ಹಲವಾರು ಕೃತಿಗಳಲ್ಲಿ ಕ್ಲಾಸ್ ಮತ್ತು ಕಾಸ್ಟ್‌ ಕಾನ್‌ಫ್ಲಿಕ್ಟ್‌ನ ಭಾಗವಾಗಿ ಬೈಗುಳ ಬಂದಿದೆ. ಬೈಗುಳವನ್ನು ಬಳಸದೆ ಅದರ ಧ್ವನಿಯನ್ನು ತಂದ ಕೀರ್ತಿ ಯಶವಂತ ಚಿತ್ತಾಲರಿಗೆ ಸಲ್ಲಬೇಕು. ಅವರು ತಮ್ಮ ‘ಶಿಕಾರಿ’ ಕಾದಂಬರಿಯಲ್ಲಿ ಬೈಗುಳವನ್ನು ಬೇರೆ ರೀತಿ ಬಳಸಿದ್ದು ವಿಶೇಷವಾಗಿ ಕಾಣಬಹುದು. ಇಷ್ಟಕ್ಕೂ ಸುದ್ದಿಮನೆ ಒಳಗಣ ಬೈಗುಳದ ಬಗ್ಗೆ ಲೇಖಕರು ಮರೆತರೇ? ಅದರಲ್ಲಿಯೂ ಇಂಗ್ಲಿಷ್ ಪತ್ರಿಕೋದ್ಯಮದ ಸಂಪಾದಕರು, ದೆಹಲಿಯಲ್ಲಿ ಕುಳಿತುಕೊಳ್ಳುತ್ತಿದ್ದ ಅಖಿಲ ಭಾರತ ಪ್ರಧಾನ ಸಂಪಾದಕರು ಬಳಸುತ್ತಿದ್ದ ಬೈಗುಳದ ಬಗ್ಗೆ ಅವರಿಗೆ ಗೊತ್ತಿಲ್ಲ ಅಂದರೆ ಆಶ್ಚರ್ಯ. ಸುದ್ದಿಮನೆಯ ಬೈಗುಳದ ಸಂಸ್ಕೃತಿಯು ಲೆಫ್ಟ್- ಲಿಬರಲ್ ಸಂಪಾದಕರು ಇದ್ದಾಗ ಇತ್ತು ಎನ್ನುವುದಕ್ಕೆ ಹಲವಾರು ಉದಾಹರಣೆಗಳನ್ನು
ಕೊಡಬಲ್ಲೆ.

ಭಾಸ್ಕರ ಹೆಗಡೆ, ಕೆಂಗೇರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)