ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯೇತರ ಸಂಪುಟ ಸಂವಿಧಾನ ವಿರೋಧಿ

ಅಕ್ಷರ ಗಾತ್ರ

‘ಅಸಾಮಾನ್ಯ ಸ್ಥಿತಿಗೆ ಅಸಹಜ ಪರಿಹಾರ’ ಎಂಬ ಲೇಖನದಲ್ಲಿ (ಪ್ರ.ವಾ., ಮೇ 27) ಚಂದ್ರಕಾಂತ ವಡ್ಡು ಅವರು ರಾಜಕೀಯೇತರ ಸಂಪುಟ ರಚನೆಯ ಪ್ರಸ್ತಾಪ ಮಾಡಿದ್ದಾರೆ. ಇಂತಹ ಪ್ರಸ್ತಾಪ ಸಹಜವೋ ಅಸಹಜವೋ ಅದು ಬೇರೆಯದೇ ಮಾತು. ಪ್ರಜಾಸತ್ತಾತ್ಮಕ ವಾಸ್ತವವೆಂದರೆ, ಇಂತಹ ಪ್ರಸ್ತಾಪವು ಸಂವಿಧಾನ ವಿರೋಧಿ ಎಂಬುದು.

ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಅಂಬೇಡ್ಕರ್ ಅವರು ಸಂವಿಧಾನಸಭೆಯಲ್ಲಿ ಪ್ರಥಮ ಕರಡನ್ನು ಮಂಡಿಸುವಾಗ, ‘ನಮ್ಮ ಸಂವಿಧಾನವು ಸಂಸದೀಯ ಪ್ರಜಾಸತ್ತೆಯನ್ನು ಎತ್ತಿಹಿಡಿಯುತ್ತದೆ’ ಎಂದಿದ್ದಾರೆ. ಹಾಗೆಯೇ, ‘ಅಮೆರಿಕದ ಅಧ್ಯಕ್ಷೀಯ ಮಾದರಿಯು ಶಾಸಕಾಂಗ ಮತ್ತು ಕಾರ್ಯಾಂಗಗಳನ್ನು ಪ್ರತ್ಯೇಕವಾಗಿ ಇಡುತ್ತದೆ. ಆ ಕಾರಣಕ್ಕಾಗಿ ಅಧ್ಯಕ್ಷ ಮತ್ತು ಆತನ ಕಾರ್ಯದರ್ಶಿಗಳು ಅಮೆರಿಕದ ಶಾಸಕಾಂಗವಾದ ಕಾಂಗ್ರೆಸ್‌ನ ಸದಸ್ಯರಾಗಬೇಕಾದ ಅಗತ್ಯವಿಲ್ಲ. ಆದರೆ ನಮ್ಮ ಸಂವಿಧಾನವು ಅಮೆರಿಕದ ಈ ಮಾದರಿಯನ್ನು ಅನುಕರಿಸಿಲ್ಲ. ಬದಲಿಗೆ ಸಂಸದೀಯ ಮಾದರಿಯನ್ನು ಒಪ್ಪಿಕೊಂಡಿರುವ ನಮ್ಮ ಸಂವಿಧಾನದಲ್ಲಿ ಮಂತ್ರಿಗಳು ಸಂಸತ್ತಿನ ಸದಸ್ಯರಾಗಿರಬೇಕು’ ಎನ್ನುತ್ತಾರೆ.

ಇದರಂತೆ ನಮ್ಮ ಮಂತ್ರಿಗಳು ಹೇಗೆ ಕೇಂದ್ರ ಮಂತ್ರಿಗಳು ಸಂಸತ್ತಿನ ಸದಸ್ಯರಾಗಿರುತ್ತಾರೆಯೋ ಹಾಗೆಯೇ ರಾಜ್ಯ ಶಾಸಕಾಂಗಗಳ ಉಭಯ ಸದನಗಳಾದ ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಸದಸ್ಯರಾಗಬೇಕಾಗುತ್ತದೆ ಮತ್ತು ರಾಜ್ಯ ಮಂತ್ರಿಮಂಡಲ ಹೀಗೆಯೇ ಇರಬೇಕು ಎಂಬುದನ್ನು ಭಾರತದ ಸಂವಿಧಾನದ ವಿಧಿ 164 ಬಹಳ ಸ್ಪಷ್ಟವಾಗಿ ದಾಖಲಿಸಿದೆ. ಅಂದಹಾಗೆ ರಾಜಕೀಯ ಪಕ್ಷಗಳ ಅಡಿಯಲ್ಲಿ ಸ್ಪರ್ಧಿಸಿ, ವಯಸ್ಕ ಮತದಾನದ ಮೂಲಕ ಸದರಿ ಸಚಿವರು ಆಯ್ಕೆಯಾಗುವುದರಿಂದ, ನಮ್ಮ ಸಂಪುಟವು ರಾಜಕೀಯ ಸಂಪುಟವೇ ಆಗುತ್ತದೆ. ಹಾಗಿದ್ದರೆ ಯಾಕೆ ಮಂತ್ರಿಗಳು ಸದನದಿಂದ ಆಯ್ಕೆಯಾಗಬೇಕು? ಇದಕ್ಕೆ ಡಾ. ಅಂಬೇಡ್ಕರ್ ಅವರು ಹೇಳಿರುವುದೇನೆಂದರೆ ‘ಅವರು ಜನರಿಗೆ ಹೆಚ್ಚು ಜವಾಬ್ದಾರರಾಗಿರುತ್ತಾರೆ ಅಥವಾ ಜವಾಬ್ದಾರರಾಗಿರಬೇಕು’ ಎಂಬುದು. ಈ ಹಿನ್ನೆಲೆಯಲ್ಲಿ, ರಾಜಕೀಯೇತರ ಸಂಪುಟವು ಸಂವಿಧಾನವಿರೋಧಿ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಾಗುತ್ತದೆ.

ರಘೋತ್ತಮ ಹೊ.ಬ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT