ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 1 ಮೇ 2024, 20:08 IST
Last Updated 1 ಮೇ 2024, 20:08 IST
ಅಕ್ಷರ ಗಾತ್ರ

ಚುನಾವಣೆ ಸಂದರ್ಭ: ಮಾತಿಗೆ ಇರುವುದಿಲ್ಲ ‘ಕಿಮ್ಮತ್ತು’

‘ಕಾಂಗ್ರೆಸ್ ಗ್ಯಾರಂಟಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ’ ಎಂದಿದ್ದಾರೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ
(ಪ್ರ.ವಾ., ಮೇ 1). ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಡುಕೊಂಡು, ಹಲವು ಹೆಣ್ಣುಮಕ್ಕಳು ಎಮ್ಮೆ ಕೊಂಡು, ಹೊಲಿಗೆ ಯಂತ್ರ ಖರೀದಿಸಿ ತಮ್ಮ ಕಷ್ಟಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ. ಈಚೆಗೆ ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈದ ಕೆಲವು ವಿದ್ಯಾರ್ಥಿಗಳು ವಿದ್ಯುತ್ ಉಚಿತವಾಗಿ ಸಿಗುತ್ತಿರುವುದರಿಂದ ಉಳಿತಾಯವಾಗುತ್ತಿರುವ ಹಣವನ್ನು ಪುಸ್ತಕ ಕೊಳ್ಳಲು ಬಳಸಿರುವುದಾಗಿ ಸ್ಮರಿಸಿದ್ದಾರೆ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಇರುವುದರಿಂದ ನಮ್ಮ ಗ್ರಾಮೀಣ ಮಹಿಳೆಯರಲ್ಲಿ ಹಲವರು ಮೊದಲ ಸಲ ಪ್ರವಾಸ ಹೋಗಿಬಂದಿದ್ದಾರೆ. ಈ ರೀತಿಯ ಹಲವು ಆರ್ಥಿಕ ಸಂಚಲನಗಳು ಮಾಧ್ಯಮದಲ್ಲಿ ವರದಿಯಾಗುತ್ತಲೇ ಇವೆ. ಆದರೆ, ಅವು ಯಡಿಯೂರಪ್ಪ ಅವರಿಗೆ ಕಾಣುವುದಿಲ್ಲ. ಏಕೆಂದರೆ ಇದು ಚುನಾವಣಾ ಕಾಲ.

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ನೀರಿಗೆ ಇಳಿಯುವ ಮುನ್ನ ಯೋಚಿಸಿ

ಮೇಕೆದಾಟುಗೆ ಈಚೆಗೆ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರಿನ ಐವರು ವಿದ್ಯಾರ್ಥಿಗಳು ನದಿಯಲ್ಲಿ ಈಜುವಾಗ ಮುಳುಗಿ ಮೃತಪಟ್ಟಿದ್ದಾರೆ. ಈ ರೀತಿಯ ಅವಘಡಗಳು ಮರುಕಳಿಸುತ್ತಲೇ ಇವೆ. ಈಜಲು ಬಾರದಿದ್ದರೂ
ಕೆರೆ–ಕಟ್ಟೆ, ನದಿಗಳಲ್ಲಿ ಈಜಲು ಹೋಗಿ ನೀರುಪಾಲಾದವರಲ್ಲಿ ಹದಿಹರೆಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ದುರದೃಷ್ಟಕರ.

ಬೇಸಿಗೆ ಬಂದೊಡನೆ ನೀರಿಗಿಳಿದು ಬೇಗೆ ತಣಿಸಿಕೊಳ್ಳಲು ಮನಸ್ಸು ಹಾತೊರೆಯುವುದು ಸಹಜ. ಆದರೆ ನೀರಿಗೆ ಇಳಿಯುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ. ಬಿಸಿಲು ಚುರುಕಾಗುತ್ತಿದ್ದಂತೆಯೇ ಮಕ್ಕಳಲ್ಲಿ ನೀರಿನ ಸೆಳೆತ ಹೆಚ್ಚಾಗುತ್ತದೆ. ಮಕ್ಕಳು ಮನೆಯಲ್ಲಿ ಪೋಷಕರಿಗೆ ಏನೋ ಒಂದು ಕಾರಣ ಹೇಳಿ ಸ್ನೇಹಿತರೊಂದಿಗೆ ಪ್ರವಾಸ ಹೊರಡುತ್ತಾರೆ. ಈಜು ಬಾರದಿದ್ದರೂ ಸ್ನೇಹಿತರ ಬಲವಂತಕ್ಕೆ ಮಣಿದು ಕೆರೆ–ನದಿಗೆ ಇಳಿಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಈ ಬಗೆಯ ಅವಘಡಗಳು ಸಂಭವಿಸಿದಾಗ ಹೆತ್ತವರು ಜೀವನಪರ್ಯಂತ ದುಃಖ ಅನುಭವಿಸಬೇಕಾಗುತ್ತದೆ.

ಆಳ–ಅಗಲ ಗೊತ್ತಿರದ ಕೆರೆ– ಕಟ್ಟೆ, ಬಾವಿ, ಹೊಂಡದಲ್ಲಿ ಈಜಾಡುವುದು ಸೂಕ್ತವಲ್ಲ ಎಂಬುದನ್ನು ಯುವಕ–ಯುವತಿಯರು ಅರಿತರೆ ಒಳ್ಳೆಯದು. ಯುವ ಪೀಳಿಗೆಯು ಮೋಜು ಮಸ್ತಿಯ ನೆಪದಲ್ಲಿ ಮೈಮರೆತು ಜೀವಕ್ಕೆ ಕುತ್ತು ತಂದುಕೊಳ್ಳಬಾರದು. ಮಕ್ಕಳಿಗೆ ಪಾಲಕರು ಈ ಕುರಿತು ತಿಳಿವಳಿಕೆ ನೀಡಬೇಕು ಮತ್ತು ಅವರ ಮೇಲೆ ನಿಗಾ ಇಡಬೇಕು.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಭ್ರಷ್ಟಾಚಾರ ಪೋಷಣೆಗೆ ಕೈಜೋಡಿಸುವುದು ಬೇಡ

ಪ್ರಿಯಾಂಕಾ ಲಾಹಿರಿ ಅವರು ದಿನದ ಟ್ವೀಟ್‌ನಲ್ಲಿ (ಪ್ರ.ವಾ., ಮೇ 1) ‘ಭಾರತದ ಮಧ್ಯಮ ವರ್ಗಕ್ಕೆ ಭ್ರಷ್ಟಾಚಾರ ಕಡಿಮೆಯಾಗುವುದು ನಿಜಕ್ಕೂ ಬೇಕಿಲ್ಲ...’ ಎಂಬ ಮಾರ್ಮಿಕ ನುಡಿಗಳನ್ನು ಆಡಿದ್ದಾರೆ. ನಿಜ, ರಾಜಕಾರಣಿಗಳನ್ನು ಭ್ರಷ್ಟರು ಎಂದು ಜರಿಯುವ ನಾವು, ಚುನಾವಣೆ ಸಂದರ್ಭದಲ್ಲಿ ಅವರು ಮನೆ ಮನೆಗೆ ಹಂಚುವ ದುಡ್ಡು, ಮದ್ಯ, ಕುಕ್ಕರ್‌, ಬೆಳ್ಳಿ, ಬಂಗಾರವನ್ನು ನಾಚಿಕೆ ಇಲ್ಲದೆ ಪಡೆಯುತ್ತೇವೆ. ಈ ಮೂಲಕ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸುತ್ತಿದ್ದೇವೆ. ಮತದಾರರಿಗೆ ಹಣ ಹಂಚುವುದು ರಾಜಾರೋಷವಾಗಿಯೇ ನಡೆಯುತ್ತಿದೆ.

ದೇವರ ದರ್ಶನದ ಸರತಿ ಸಾಲಿನಲ್ಲಿ, ಕ್ರಿಕೆಟ್ ಮತ್ತು ಸಿನಿಮಾ ನೋಡಲು ಟಿಕೆಟ್ ಕೌಂಟರ್‌ನಲ್ಲಿ, ಕೊನೆಗೆ ದೊಡ್ಡ ದೊಡ್ಡವರ ವಿವಾಹ ಆರತಕ್ಷತೆ ಕ್ಯೂನಲ್ಲಿ ‘ಅಡ್ಡದಾರಿ’ ಮೂಲಕ ತ್ವರಿತವಾಗಿ ಕೆಲಸ ಸಾಧಿಸುವ ಮನಃಸ್ಥಿತಿ ಎಲ್ಲೆಡೆಯೂ ಗೋಚರಿಸುತ್ತದೆ. ‘ಭ್ರಷ್ಟಾಚಾರ’ ನಮ್ಮ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿದೆ ಮತ್ತು ಅದು ಗಾಳಿ-ನೀರಿನಂತೆ ನಮ್ಮ ಸುತ್ತ ಆವರಿಸಿದೆ. ರಾಜಕಾರಣಿಗಳ ಕೃಪೆಗೆ ಒಳಗಾಗಲು ಹಾತೊರೆಯುತ್ತೇವೆ. ಈ ಕಾರಣದಿಂದಲೇ ಅವರ ಎಲ್ಲ ಅನಾಚಾರಗಳನ್ನೂ ಸಹಿಸಿಕೊಳ್ಳುತ್ತೇವೆ. ಕೊನೇಪಕ್ಷ ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಒಡ್ಡುವ ಆಮಿಷಗಳನ್ನಾದರೂ ನಿರಾಕರಿಸುವ ಮನಃಸ್ಥಿತಿ ನಮ್ಮ ಜನರಲ್ಲಿ ಮೂಡಬೇಕು.

ರವಿಚಂದ್ರ ಎಂ., ಬೆಂಗಳೂರು

ಯೋಗ್ಯರಲ್ಲದವರ ಆಯ್ಕೆ ಸಲ್ಲದು

ಪ್ರಜಾಪ್ರಭುತ್ವದ ಆಶಯಗಳು ಫಲಿಸಬೇಕಾದರೆ ಶಾಸನಸಭೆಗಳಲ್ಲಿ ಯೋಗ್ಯ ಜನಪ್ರತಿನಿಧಿಗಳು
ಇರಬೇಕಾಗುತ್ತದೆ. ಅಂಥವರನ್ನು ಆರಿಸುವುದು ಮತದಾರರ ಆದ್ಯ ಕರ್ತವ್ಯ. ಅಮೂಲ್ಯವಾದ ಮತವನ್ನು ಪ್ರತಿಯೊಬ್ಬರೂ ವಿವೇಚನೆಯಿಂದ ಚಲಾಯಿಸಬೇಕು. ಮೂರು ಕಾಸಿಗೆ, ಉಡುಗೊರೆಗಳಿಗೆ ಮರುಳಾಗಿ ಅಪಾತ್ರರನ್ನು ಆರಿಸಿದರೆ ಅದರ ಪರಿಣಾಮಗಳು ಭೀಕರವಾಗಿರುತ್ತವೆ. ಐದು ವರ್ಷಗಳವರೆಗೆ ಪಶ್ಚಾತ್ತಾಪಪಡಬೇಕಾಗುತ್ತದೆ.

ಆದಕಾರಣ ಅಭ್ಯರ್ಥಿಯ ನಡೆ–ನುಡಿ, ಸಾಮರ್ಥ್ಯ, ಸಮಾಜದ ಬಗೆಗಿನ ಕಳಕಳಿ ಮತ್ತು ಬದ್ಧತೆಯನ್ನು ಒರೆಗೆ ಹಚ್ಚಿ ಮತ ನೀಡಬೇಕು. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಇದೇ ಬುನಾದಿ. ಮತದಾರ ಯಾವುದೇ ಕಾರಣಕ್ಕೂ ಇದನ್ನು ಮರೆಯಬಾರದು. ಆಗಮಾತ್ರ ಜನತಂತ್ರದ ಬೇರುಗಳು ಗಟ್ಟಿಗೊಳ್ಳುತ್ತವೆ.

ಎಸ್‌.ಜಿ. ಹವಾಲದಾರ, ಬಾಗಲಕೋಟೆ

ಜನತಂತ್ರದ ಘನತೆ ಎತ್ತಿಹಿಡಿಯಬೇಕಿದೆ

ಗುಜರಾತಿನ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯು ಎದುರಾಳಿಗಳೇ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೀಗ ಮಧ್ಯಪ್ರದೇಶದ ಇಂದೋರ್ ಕ್ಷೇತ್ರದಲ್ಲಿಯೂ ಇದೇ ರೀತಿ ಆಗಿದೆ. ಒಂದು ಪಕ್ಷದಿಂದ ಟಿಕೆಟ್‌ ಪಡೆದು ಕೊನೇ ಕ್ಷಣದಲ್ಲಿ ಏನೋ ಕಾರಣ ನೀಡಿ ಕಣದಿಂದ ಹಿಂದಕ್ಕೆ ಸರಿದು ಎದುರಾಳಿ ಪಕ್ಷದ ಅಭ್ಯರ್ಥಿಯ ಅವಿರೋಧ ಆಯ್ಕೆಗೆ ಅನುವು ಮಾಡಿಕೊಡುವುದು ಆ ಕ್ಷೇತ್ರದ ಮತದಾರರಿಗೆ ಮಾಡುವ ದೊಡ್ಡ ದ್ರೋಹ, ಕ್ಷಮೆ ಇಲ್ಲದ ನಡೆ. ಇಂತಹ ನಡೆ ಬಗ್ಗೆ ಅನುಮಾನ ಹುಟ್ಟುವುದು ಸಹಜ. ಆಮಿಷ, ಒತ್ತಡಗಳೇನಾದರೂ ಇದರ ಹಿಂದೆ ಕೆಲಸ ಮಾಡಿವೆಯೇ ಎಂಬುದರ ಬಗ್ಗೆ ಕೂಲಂಕಷ ತನಿಖೆ ಆಗಬೇಕು. ಅಂಥವುಗಳು ಇದ್ದದ್ದು ಸಾಬೀತಾದಲ್ಲಿ ಅಂತಹ ವ್ಯಕ್ತಿ–ಪಕ್ಷದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿಯುವಂತಹ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕು.

ಗಿರಿಯಪ್ಪ ಕೊಳ್ಳಣ್ಣವರ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT