ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: 20 ಸೆಪ್ಟೆಂಬರ್ 2024

Published : 19 ಸೆಪ್ಟೆಂಬರ್ 2024, 22:32 IST
Last Updated : 19 ಸೆಪ್ಟೆಂಬರ್ 2024, 22:32 IST
ಫಾಲೋ ಮಾಡಿ
Comments

ಅರ್ಹರನ್ನು ವಂಚಿಸುವ ನಕಲಿ ವೃದ್ಧರು

ರಾಜ್ಯದ ಯಾವುದೇ ತಾಲ್ಲೂಕು ಕಚೇರಿಯಲ್ಲಿ ವೃದ್ಧರು ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಸಾಮಾನ್ಯವಾಗಿ ಯಾರನ್ನಾದರೂ ಅವಲಂಬಿಸಿ ಅಲೆದಾಡುತ್ತಿರುತ್ತಾರೆ. ಇಂತಹ ಅರ್ಹರು ಹೇಗೋ ಲಂಚ ಹೊಂದಿಸಿಕೊಂಡು, ಮಧ್ಯವರ್ತಿಗಳ ಮೂಲಕ ಕಷ್ಟಪಟ್ಟು ವೃದ್ಧಾಪ್ಯ ವೇತನ ಪಡೆಯುತ್ತಾರೆ. ಆದರೆ ದುಡಿಯಲು ಗಟ್ಟಿಮುಟ್ಟಾಗಿದ್ದರೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವೃದ್ಧಾಪ್ಯ ವೇತನ ಪಡೆಯುವ ಮೂಲಕ ಅರ್ಹ ಫಲಾನುಭವಿಗಳನ್ನು ವಂಚಿಸುವ ಮತ್ತು ಇಂತಹವರಿಗೆ ಪ್ರೋತ್ಸಾಹ ನೀಡುವ ನೌಕರ ವರ್ಗದವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕೊಂದರಲ್ಲಿಯೇ ವೃದ್ಧಾಪ್ಯ ಪಿಂಚಣಿ ಪಡೆಯುವ ಸಲುವಾಗಿ ಸಾವಿರಕ್ಕೂ ಹೆಚ್ಚು ಮಂದಿ ನಕಲಿ ವಯೋವೃದ್ಧರು ಸೃಷ್ಟಿಯಾಗಿದ್ದಾರೆಂದರೆ, ರಾಜ್ಯದಾದ್ಯಂತ ಇಂತಹ ಎಷ್ಟು ಜನ ನಕಲಿ ವೃದ್ಧರಿರಬಹುದು ಎನ್ನುವುದನ್ನು ಲೆಕ್ಕ ಹಾಕಬೇಕಾಗಿದೆ. ಈ ಬಗೆಯ ಅಕ್ರಮಗಳು ತಾಲ್ಲೂಕು ಕಚೇರಿಯ ಸಂಬಂಧಿಸಿದ ನೌಕರರ ಸಹಾಯವಿಲ್ಲದೇ ನಡೆಯಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವಿತೀಯ ದರ್ಜೆ ಸಹಾಯಕರೊಬ್ಬರು ‘ಆ ಸಮಯದಲ್ಲಿ ತಹಶೀಲ್ದಾರ್ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ’ ಎಂದು ಉತ್ತರ ನೀಡಿದ್ದಾರೆ. ಇಂತಹವರನ್ನು ಕಚೇರಿ ಕರ್ತವ್ಯಕ್ಕಿಂತ ಯಾವುದಾದರೂ ಕಚೇರಿ ಕಾವಲುಗಾರ ಹುದ್ದೆಗೆ ನೇಮಿಸಬೇಕು. ಆಗ ಅವರಿಗೆ ತಮ್ಮ ಹುದ್ದೆಯ ಕರ್ತವ್ಯದ ಸ್ವರೂಪ ಮತ್ತು ಜವಾಬ್ದಾರಿ ಏನು ಎಂಬುದರ ಅರಿವು ಮೂಡುತ್ತದಲ್ಲದೆ ಬೇರೆಯವರು ಇಂತಹ ಕೆಲಸಗಳನ್ನು ಮಾಡಲು ಹಿಂಜರಿಯುವಂತೆ ಆಗುತ್ತದೆ.

- ತಿಮ್ಮೇಶ ಮುಸ್ಟೂರು, ಜಗಳೂರು

ವಸ್ತುನಿಷ್ಠ ಅಧ್ಯಯನ ಅಗತ್ಯ

ಇಂದಿನ ಸಂದರ್ಭದಲ್ಲಿ ಕನ್ನಡ– ಕನ್ನಡಿಗರ ಬೇಡಿಕೆಗಳು ಅರ್ಥಪೂರ್ಣವಾಗಿ ಈಡೇರಲು ‘ನವ ಮಹಿಷಿ’ ಮತ್ತು ‘ನವ ಗೋಕಾಕ್‌’ ವರದಿಗಳು ಸಿದ್ಧಗೊಳ್ಳಬೇಕಾಗಿದೆ ಎಂದು ಚಂದ್ರಕಾಂತ ವಡ್ಡು ಹೇಳಿದ್ದಾರೆ (ಪ್ರ.ವಾ., ಸೆ. 18). ಕರ್ನಾಟಕದ ಒಂದು ಸಾವಿರಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲು ಅನುಮತಿ ನೀಡಲಾಗಿರುವ ಈ ಸಂದರ್ಭದಲ್ಲಿ ಈ ‘ಭೂತಕಾಲದ ವರದಿ’ಗಳನ್ನು ಮುಂದಿಟ್ಟುಕೊಂಡು, ವರ್ತಮಾನ ಮತ್ತು ಭವಿಷ್ಯದ ಕನ್ನಡ ಭಾಷೆ, ಕನ್ನಡ ಜನ ಮತ್ತು ಕನ್ನಡ ನಾಡಿನ ಹಿತಾಸಕ್ತಿಗಳನ್ನು ಕಾಯುವಂತೆ ರೂಪಿಸುವ ದಿಸೆಯಲ್ಲಿ ನವ ವರದಿಗಳನ್ನು ತಯಾರಿಸಲು ಹೊರಡುವುದು ಸರಿಯಾದ ಚಿಂತನೆಯಲ್ಲ. ಇದರ ಅರ್ಥ ಮಹಿಷಿ ವರದಿ ಮತ್ತು ಗೋಕಾಕ್‌ ವರದಿಯ ಮಹತ್ವವನ್ನು ಅಲ್ಲಗಳೆಯುವುದಲ್ಲ. ಆದರೆ ಜಾಗತೀಕರಣೋತ್ತರ ಸಂದರ್ಭದ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಸ್ಥಿತಿ–ಗತಿ ಮತ್ತು ವಿಜ್ಞಾನ–ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಡೆದಿರುವ ಅಶ್ಚರ್ಯಕರವಾದ ಸಾಧನೆಗಳು ಹಾಗೂ ಬದಲಾವಣೆಗಳ ಸಂದರ್ಭವನ್ನು ಎದುರುಗೊಳ್ಳುವ ಬಗೆ ಬೇರೆಯದೇ ಆಗಿರಬೇಕು. ಆ ನೆಲೆಯಲ್ಲಿ ನಾವು ಆಳವಾಗಿ ಚಿಂತಿಸಬೇಕಾಗಿದೆ.

ಸಾಹಿತ್ಯ ಸಮ್ಮೇಳನಗಳಲ್ಲಿ ದಶಕಗಳಿಂದ ಆಗುತ್ತಿರುವ ಚರ್ಚೆಗಳು, ಹಲವು ಬಗೆಯ ಕನ್ನಡಪರ ಹೋರಾಟಗಳ ನಂತರವೂ ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದ ಮೂಲಕ ನೀಡಲು ಸಾಧ್ಯವಾಗಿಲ್ಲ. ಕನ್ನಡಿಗರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ದಿಸೆಯಲ್ಲಿ ಇರುವ ತೊಡಕುಗಳನ್ನು ನಿವಾರಿಸಲು ಆಗಿಲ್ಲ. ಈ ದೃಷ್ಟಿಯಿಂದ ನೋಡಿದಾಗ, ಈ ಬಗೆಯ ಸಮಸ್ಯೆಗಳ ಮೂಲಕಾರಣಗಳು ಮತ್ತು ಅವುಗಳ ಆಳ-ಅಗಲವನ್ನು ಅರಿಯಲು ಬೇಕಾದ ವಸ್ತುನಿಷ್ಠ ಅಧ್ಯಯನಗಳು, ಅಂಕಿಅಂಶಗಳು, ಸಂಶೋಧನೆಗಳ ಕೊರತೆ ಇದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ.

ಮೂಲಕಾರಣಗಳನ್ನು ಸ್ಪಷ್ಟವಾಗಿ ಗುರುತಿಸದೆ ಹೋರಾಟದ ಹೊಸ ಮಾದರಿಗಳನ್ನು ಹುಡುಕುವುದು ಮತ್ತು ಪರಿಹಾರೋಪಾಯಗಳ ಬಗ್ಗೆ ಚರ್ಚಿಸುವುದು ಸರಿಯಲ್ಲ.

-ಎಂ.ರವೀಂದ್ರ, ಬೆಂಗಳೂರು

ಆಗ ಅಲ್ಲೊಬ್ಬ ಇಲ್ಲೊಬ್ಬ ಕುಖ್ಯಾತ, ಈಗ...?

ಕಳ್ಳಸಾಗಣೆಯಿಂದ ಕುಖ್ಯಾತಿ ಪಡೆದಿದ್ದ ಹಾಜೀ ಮಸ್ತಾನ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದ ವರದಿಯನ್ನು ಓದಿ (ಪ್ರ.ವಾ., 50 ವರ್ಷಗಳ ಹಿಂದೆ; ಸೆ. 19) ನನ್ನ ನೆನಪು 50 ವರ್ಷ ಹಿಂದಕ್ಕೆ ಹೋಯಿತು. ಆಗ ಕಾಲೇಜಿನಲ್ಲಿ ಓದುತ್ತಿದ್ದ ನಾವು ಸ್ನೇಹಿತರು ಅಂತಹ ಕುಖ್ಯಾತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ, ರಿಚ್ಮಂಡ್ ರಸ್ತೆಯಲ್ಲಿದ್ದ ಆತನ ಭವ್ಯ ಮನೆಯ ಬಳಿ ಹೋಗಿ ಅಲ್ಲಿದ್ದ ನಾಮಫಲಕವನ್ನು ಓದಿದ್ದ ನೆನಪು. 50 ವರ್ಷಗಳ ಹಿಂದೆ ಅಲ್ಲೊಬ್ಬ, ಇಲ್ಲೊಬ್ಬ ಕಳ್ಳಸಾಗಣೆದಾರ, ಮೋಸಗಾರ, ನೀತಿಗೆಟ್ಟ ರಾಜಕಾರಣಿ ಇರುತ್ತಿದ್ದರು ಮತ್ತು ಅದೇ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ನಂತರದ ಈ 50 ವರ್ಷಗಳಲ್ಲಿ ನಾವು ಕಾಣುತ್ತಿರುವುದೇನು? ಲೆಕ್ಕವಿಲ್ಲದಷ್ಟು ಕಳ್ಳತನ, ಕಳ್ಳಸಾಗಣೆ, ದರೋಡೆ, ಕೋಟ್ಯಂತರ ರೂಪಾಯಿಗಳ ಹಗರಣ, ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ... ಛೆಛೆ!

ನಾವು ಎತ್ತ ಸಾಗುತ್ತಿದ್ದೇವೆ? ಅಭಿವೃದ್ಧಿಯ ಹೆಸರಿನಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರೂ ಆ ದಿಕ್ಕು ಸರಿಯಿದೆಯೇ ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕಾಗಿದೆ. ತಪ್ಪು ದಿಕ್ಕಿನಲ್ಲಿ ವೇಗವಾಗಿ ಮುನ್ನಡೆ

ಯುತ್ತಿದ್ದರೆ ನಾವು ಅಷ್ಟೇ ವೇಗದಲ್ಲಿ ದುರಂತದ ಸನಿಹಕ್ಕೆ ಹೋಗುತ್ತಿದ್ದೇವೆ ಎಂದು ಅರ್ಥ. ಇಂತಹ ಅನಾಹುತಗಳನ್ನು ಎದುರಿಸಬೇಕಾದ ಸವಾಲು ಈಗ ನಮ್ಮ ಮುಂದೆ ಇದೆ.

- ಟಿ.ವಿ.ಬಿ. ರಾಜನ್, ಬೆಂಗಳೂರು

ಧಾರವಾಡಕ್ಕೆ ಬೇಕು ಪ್ರತ್ಯೇಕ ಪಾಲಿಕೆ

ಬೀದರ್‌ ಮತ್ತು ರಾಯಚೂರಿಗೆ ಮಹಾನಗರಪಾಲಿಕೆ ರಚಿಸಬೇಕೆಂದು ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ, ಸಂತೋಷ. ನಾವು ಧಾರವಾಡದ ನಾಗರಿಕರು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಬೇಕೆಂದು ಎರಡು ವರ್ಷಗಳಿಂದ ಎಲ್ಲ ರೀತಿಯ ಹೋರಾಟ, ಸತ್ಯಾಗ್ರಹವನ್ನು ಮಾಡುತ್ತಾ ಬಂದಿದ್ದೇವೆ. ಈಗ ಅಭಿವೃದ್ಧಿ ವಿಷಯಗಳಲ್ಲಿ ಧಾರವಾಡ ನಗರವು ಉಪೇಕ್ಷೆಗೆ ಒಳಪಡುತ್ತಿದ್ದು, ಆಡಳಿತವೆಲ್ಲ ಹುಬ್ಬಳ್ಳಿ ಕೇಂದ್ರಿತವಾಗಿದೆ.

ಧಾರವಾಡ ನಗರವು ಮಹಾನಗರ ಪಾಲಿಕೆಯಾಗಲು ಎಲ್ಲ ರೀತಿಯ ಅರ್ಹತೆ ಮತ್ತು ಮೂಲ ಸೌಕರ್ಯಗಳನ್ನು ಹೊಂದಿದೆ. ಜಿಲ್ಲಾ ಕೇಂದ್ರವಾಗಿ ಧಾರವಾಡಕ್ಕೆ ತನ್ನದೇ ಆದ ಸಾಹಿತ್ಯಕ, ಸಾಂಸ್ಕೃತಿಕ ಅಸ್ಮಿತೆ ಇದೆ. ಹೀಗಿದ್ದೂ ಇಲ್ಲಿಯ ನಾಗರಿಕರ ಅಹವಾಲಿನ ಕುರಿತು ಸರ್ಕಾರ ಗಮನಹರಿಸುತ್ತಿಲ್ಲ. ಈಗಲಾದರೂ ಆದ್ಯತೆ ಮೇರೆಗೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಮಾಡಿ, ಧಾರವಾಡ ಮತ್ತು ಹುಬ್ಬಳ್ಳಿ ಎರಡೂ ನಗರಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

- ವೆಂಕಟೇಶ ಮಾಚಕನೂರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT