ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 09 ಡಿಸೆಂಬರ್ 2023

Published 8 ಡಿಸೆಂಬರ್ 2023, 23:59 IST
Last Updated 8 ಡಿಸೆಂಬರ್ 2023, 23:59 IST
ಅಕ್ಷರ ಗಾತ್ರ

ಬದಲಾವಣೆಯ ಕೂಗು ರವಾನಿಸುವ ಸಂದೇಶ...?

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಅಲಾರಂನಂತೆ ಆಗಾಗ ಕೇಳಿಬರುತ್ತದೆ. ಕೆಲ ದಿನಗಳ ಮಟ್ಟಿಗೆ ಸ್ತಬ್ಧವಾಗಿದ್ದ ಈ ಧ್ವನಿ ಇತ್ತೀಚೆಗೆ ಮತ್ತೆ ಜೋರು ಪಡೆದಿದೆ. ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದಕ್ಕೂ ಬದಲಾವಣೆಯ ಕೂಗಿಗೂ ತಳುಕು ಹಾಕಿ ಜನರು ಮಾತನಾಡುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಇದೇ ರೀತಿಯ ಮಾತುಗಳು ಹರಿದಾಡುತ್ತಿದ್ದವು.

ಪದೇ ಪದೇನಾಯಕತ್ವ ಬದಲಾವಣೆಯಿಂದ ಜನವರ್ಗಗಳಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಬೇರೆ ರಾಜ್ಯಗಳಲ್ಲಿ ಮಾಡಿದಂತಹ ರಾಜಕೀಯ ಪ್ರಯೋಗಗಳನ್ನು ಕರ್ನಾಟಕದಂತಹ ರಾಜ್ಯದಲ್ಲಿ ಜಾರಿಗೆ ತರುವುದು ಕಲ್ಪಿಸಿಕೊಂಡಷ್ಟು ಸುಲಭದ ವಿಷಯವಲ್ಲ. ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಗಟ್ಟಿ ನೆಲೆ ಇರುವುದು ಕರ್ನಾಟಕದಲ್ಲಿ ಮಾತ್ರ. ಆದ್ದರಿಂದ ಪರಿಣಾಮಗಳ ಬಗೆಗೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಹೇಳಿಕೆಗಳು ಪಕ್ಷಕ್ಕೆ ಒಳಿತನ್ನು ಮಾಡಲಾರವು. ಬದಲಾವಣೆಯ ಸುದ್ದಿ ಸುಳ್ಳಾಗಿದ್ದರೆ ಅದನ್ನು ಹಬ್ಬಿಸಿದ ಪಕ್ಷದ ನಾಯಕರ ವಿರುದ್ಧ ವರಿಷ್ಠರು ಕ್ರಮ ಕೈಗೊಳ್ಳಬೇಕು.

– ಮಣಿಕಂಠ ಪಾ. ಹಿರೇಮಠ,ಹಂಪಿ

ಜನೌಷಧಿ ಕೇಂದ್ರ: ಸಂಖ್ಯೆ ಹೆಚ್ಚಿಸುವುದು ಅಗತ್ಯ

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ಲಭ್ಯವಿದ್ದು, ಜನಸಾಮಾನ್ಯರಿಗೆ ಹೆಚ್ಚಿನ ಉಪಯೋಗವಾಗಿದೆ.ಜನೌಷಧಿ ಯೋಜನೆಯು 2008ರಲ್ಲಿ ಜಾರಿಗೆ
ಬಂತು. ಆ ಬಳಿಕ ಮರು ನಾಮಕರಣ ನಡೆಯಿತು. ಯೋಜನೆ ಪ್ರಾರಂಭವಾಗಿ ಇಷ್ಟು ವರ್ಷಗಳಾದರೂ ಇಡೀ ದೇಶದಲ್ಲಿ ಬರೀ 9,000 ಜನೌಷಧಿ ಕೇಂದ್ರಗಳಿವೆ. ಸಮಾಧಾನಕರ ಸಂಗತಿಯೆಂದರೆ ಇದರಲ್ಲಿ ನಮ್ಮ
ರಾಜ್ಯದಲ್ಲಿಯೇ ಸುಮಾರು 950 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.ಈ ಕೇಂದ್ರಗಳ ಸಂಖ್ಯೆಯನ್ನು ಆದ್ಯತೆಯ ಮೇಲೆ ಹೆಚ್ಚು ಮಾಡಲು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಅಲ್ಲದೆ, ಈ ಕೇಂದ್ರಗಳಲ್ಲಿ ಪಶುಔಷಧಿಗಳು ಸಹ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಸಂಬಂಧಿಸಿದವರು ಈ ದಿಸೆಯಲ್ಲಿ ಕ್ರಮ ಕ್ಯೆಗೊಳ್ಳಬೇಕಾಗಿದೆ.

ಬಹುತೇಕ ಔಷಧಿಗಳ ಪ್ರಮಾಣವು ಶರೀರದ ತೂಕ ಹಾಗೂ ಗಾತ್ರದ ಮೇಲೆ ಅವಲಂಬಿತವಾಗಿರುವುದರಿಂದ ಜಾನುವಾರುಗಳಿಗೆ ಹೆಚ್ಚಿನ ಪ್ರಮಾಣದ ಔಷಧಿಯ ಅವಶ್ಯಕತೆಯಿದೆ. ಆದುದರಿಂದ ಔಷಧಿಗಳ ಮೇಲೆ ಹೆಚ್ಚು ವೆಚ್ಚ ಮಾಡುವುದು ಅನಿವಾರ್ಯವಾಗಿದೆ. ಮಿಶ್ರತಳಿ ಹಸುಗಳು ಪದೇ ಪದೇ ಕಾಯಿಲೆಗೆ ಒಳಗಾಗುವುದರಿಂದ ಸದಾ ಚಿಕಿತ್ಸೆ– ಔಷಧಿಗಳ ಮೊರೆಹೋಗುವುದು ಸಾಮಾನ್ಯ ಸಂಗತಿ. ಪಶು ಆಹಾರದ ಬೆಲೆಯೂ ದಿನೇ ದಿನೇ ದುಬಾರಿ ಆಗುತ್ತಿರುವುದರಿಂದ ಹೈನುಗಾರಿಕೆಯು ಅತ್ಯಂತ ತ್ರಾಸದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಯಲ್ಲಿ ಪಶು ಔಷಧಿಗಳನ್ನು ಸಹ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವಂತೆ ಮಾಡಿದರೆ ಜಾನುವಾರು ಮಾಲೀಕರ ಅದರಲ್ಲೂ ಮಿಶ್ರತಳಿ ಹಸು ಸಾಕಣೆದಾರರ ಕಷ್ಟವನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸಿದಂತೆ ಆಗುತ್ತದೆ.

– ಡಾ.ಟಿ. ಜಯರಾಂ, ಕೋಲಾರ

ವಂಚಕರ ದೂಷಿಸಿ ಪ್ರಯೋಜನವಿಲ್ಲ

ಶಿರಾ ಪಟ್ಟಣದ ನಾಲ್ವರು ಆನ್‌ಲೈನ್ ವಂಚನೆಗೆ ಒಳಗಾಗಿ ₹ 1.50 ಕೋಟಿ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ತಮ್ಮ ಕಂಪನಿಯಲ್ಲಿ ₹ 7.50 ಲಕ್ಷ ಹೂಡಿದರೆ 30 ದಿನಗಳಲ್ಲಿ ₹ 56 ಲಕ್ಷ ದೊರಕುತ್ತದೆ ಎಂದು ವಂಚಕರು ನಂಬಿಸಿದ್ದಾರೆ. ಜೊತೆಗೆ ಲಾಭಾಂಶದ ಕಮಿಷನ್ ಹಾಗೂ ಜಿಎಸ್‌ಟಿ ಎಂದು ಮತ್ತೆ ಹಣ ಪೀಕಿದ್ದಾರೆ.

ಈ ಕಾಲದಲ್ಲಿ ಸಾಮಾನ್ಯವಾದ ಯಾವುದೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿದ ಮೂಲಧನಕ್ಕೆ ಶೇಕಡ 10ರಿಂದ 20ರಷ್ಟು ಲಾಭ ಬಂದರೆ ಅದೇ ಪುಣ್ಯ. ಅಂತಹದ್ದರಲ್ಲಿ ಮೂಲಧನದ ಹಲವು ಪಟ್ಟು ಲಾಭಾಂಶ ಕೊಡುತ್ತೇವೆ ಎಂದರೆ ಅವರು ನಿಸ್ಸಂಶಯವಾಗಿ ವಂಚಕರೇ ಆಗಿರುತ್ತಾರೆ. ಈ ಸರಳ ಸತ್ಯವನ್ನು ಎಲ್ಲರೂ ಮನಗಾಣಬೇಕು. ಮಾಧ್ಯಮಗಳಲ್ಲಿ ಇಂತಹವು ವರದಿ ಅಗುತ್ತಲೇ ಇರುತ್ತವೆ. ಅಂತಹದ್ದರಲ್ಲೂ ಈ ರೀತಿಯ ವಂಚಕರನ್ನು ನಂಬುತ್ತಾರೆ ಎಂದರೆ ಅದು ಮನುಜರ ದುರಾಸೆ ಅಷ್ಟೆ. ದುರಾಸೆಯೇ ದುಃಖಕ್ಕೆ ಮೂಲ. ನಾವು ಎಚ್ಚೆತ್ತುಕೊಳ್ಳಬೇಕೇ ಹೊರತು ವಂಚಕರನ್ನು ದೂಷಿಸಿ ಫಲವಿಲ್ಲ. ಇನ್ನಾದರೂ ಅತಿ ಆಸೆಯ ಪ್ರವೃತ್ತಿಯಿಂದ ಜನ ಹೊರಬರಲಿ.

–ಪತ್ತಂಗಿ ಎಸ್. ಮುರಳಿ,ಬೆಂಗಳೂರು

ನಿರಾಸೆ ಹೊಂದಲು ಕಾರಣವಿಲ್ಲ!

ಎಕ್ಸ್‌ಟ್ರಾ ರಿವಾರ್ಡ್ ಕಾರ್ಡ್ ಹೊಂದಿರುವ ಗ್ರಾಹಕರಿಗೆಇಂಡಿಯನ್ ಆಯಿಲ್ ಕಾರ್ಪೊರೇಷನ್‍ನವರು ಪ್ರತೀ ಲೀಟರ್ ಇಂಧನ ಖರೀದಿಯ ಮೇಲೆ ರಿವಾರ್ಡ್ ಪಾಯಿಂಟ್ ಕೊಡುತ್ತಾರೆ. ಗಳಿಸಿದ ಪಾಯಿಂಟ್‍ಗಳನ್ನು ಮರಳಿಸಿ ಇಂಧನ ಪಡೆಯುವ ಯೋಜನೆಯೊಂದು ಹಲವಾರು ವರ್ಷಗಳಿಂದ ಜಾರಿಯಲ್ಲಿದೆ. ಕೆಲವು ಪೆಟ್ರೋಲ್ ಬಂಕ್‍ಗಳಲ್ಲಿ ಈ ಸೇವೆ ಲಭ್ಯವಿರಲಿಲ್ಲ. ಸಂಬಂಧಿತ ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿ, ಬೇಸತ್ತಿದ್ದ ನಾನು ಏಪ್ರಿಲ್ 30ರಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಮನವಿ ಸಲ್ಲಿಸಿ, ಈ ಸಮಸ್ಯೆ ಪರಿಹರಿಸಲು ಕೋರಿದ್ದೆ. ಮೇ 4 ರಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್‍ನ ಉನ್ನತ ಅಧಿಕಾರಿಯೊಬ್ಬರು ಕರೆ ಮಾಡಿ, ನನ್ನ ತೊಂದರೆಯನ್ನು ಆಲಿಸಿ, ‘ದಯವಿಟ್ಟು, ನನ್ನ ಈ ಸಂಖ್ಯೆಯನ್ನು ಸೇವ್ ಮಾಡಿಟ್ಟುಕೊಂಡು, ಏನಾದರೂ ಸಮಸ್ಯೆ ಇದ್ದರೆ, ನೇರವಾಗಿ ನನಗೇ ಕರೆ ಮಾಡಿ, ನಾನು ಪರಿಹರಿಸುತ್ತೇನೆ. ದಯಮಾಡಿ ಮಿನಿಸ್ಟರ್ ಸರ್‌ಗೆ ಪತ್ರ ಬರೆಯಬೇಡಿ’ ಎಂದು ವಿನಂತಿಸಿದರು!

ವ್ಯವಸ್ಥೆಯೇ ಕೆಟ್ಟು ಹೋಗಿದೆ, ನಮ್ಮ ದೇಶವನ್ನು ಯಾರೂ ಸುಧಾರಿಸಲು ಸಾಧ್ಯವಿಲ್ಲ ಎಂದು ಗೊಣಗುತ್ತಿದ್ದ ನಮಗೆ ನಿಜಕ್ಕೂ ಇದು ಆಶ್ಚರ್ಯಕರ ಸಂಗತಿ! ಒಬ್ಬ ಸಾಮಾನ್ಯ ನಾಗರಿಕನ, ಅತ್ಯಂತ ಸಣ್ಣ ಸಮಸ್ಯೆಯೊಂದಕ್ಕೆ, ಭಾರತ ಸರ್ಕಾರದ ಸಂಪುಟ ದರ್ಜೆಯ ಸಚಿವರೊಬ್ಬರು ಕೇವಲ 4 ದಿನಗಳಲ್ಲಿ ಸ್ಪಂದಿಸುತ್ತಾರೆ, ಸಮಸ್ಯೆಯನ್ನು ಕ್ಲುಪ್ತವಾಗಿ ಬಗೆಹರಿಸುತ್ತಾರೆ ಎಂದರೆ ನಾವು ನಿರಾಶರಾಗುವುದಕ್ಕೆ ಕಾರಣವಿಲ್ಲ ಎನಿಸುತ್ತದೆ. ಕೆಂಪುಪಟ್ಟಿಯ ವರ್ತುಲದಲ್ಲಿ ಸಿಲುಕಿ ನರಳುತ್ತಿರುವ ನಾಗರಿಕರಿಗೆ ಇಂತಹ ಕೆಲವು ಪ್ರಸಂಗಗಳು ಚೇತೋಹಾರಿಯಾಗುತ್ತವೆ, ಬದುಕಿನಲ್ಲಿ ಭರವಸೆ ಮೂಡಿಸುತ್ತವೆ.

– ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT