ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮಕ್ಕಳಿಗಾಗಿ ಆಹಾರ ತಯಾರಿಕೆ ಸಾಮಾನ್ಯವಲ್ಲ

Last Updated 28 ಡಿಸೆಂಬರ್ 2022, 19:53 IST
ಅಕ್ಷರ ಗಾತ್ರ

ಮಕ್ಕಳಿಗಾಗಿ ಆಹಾರ ತಯಾರಿಕೆ ಸಾಮಾನ್ಯವಲ್ಲ

ಮುಂಡಗೋಡದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಸಾಂಬಾರಿನಲ್ಲಿ ಇಲಿ ಬಿದ್ದಿದ್ದುದು ಮತ್ತು ಅದನ್ನು ತೆಗೆದು ಅದೇ ಸಾಂಬಾರನ್ನು ಮಕ್ಕಳಿಗೆ ಬಡಿಸಿರುವುದು (ಪ್ರ.ವಾ., ಡಿ. 28) ಸಾಧಾರಣ ವಿಚಾರವಲ್ಲ. ಅಲ್ಲಿ ಬಿಸಿಯೂಟದ ಮೇಲ್ವಿಚಾರಕರಿಲ್ಲವೇ? ಮಕ್ಕಳಿಗಾಗಿ ಆಹಾರವನ್ನು ತಯಾರಿಸುವುದು ಸಾಮಾನ್ಯ ವಿಷಯವಲ್ಲ. ಈ ಕುರಿತು ಅರಿವು ಮತ್ತು ಜವಾಬ್ದಾರಿ ಬಿಸಿಯೂಟ ತಯಾರಿಸುವವರಿಗೆ ಇಲ್ಲವೆಂದರೆ ಹೇಗೆ? ಅಲ್ಲದೆ ಶಾಲೆಯ ಶಿಕ್ಷಕರ ಗಮನಕ್ಕೆ ಈ ವಿಚಾರ ಬರಲಿಲ್ಲವೇ? ಮಕ್ಕಳೇ ದೇವರು ಎನ್ನುವ ಮಾತಿದೆ. ಮಕ್ಕಳ ನಿರ್ವಹಣೆಯಲ್ಲಿ ಸರಿಯಾಗಿ ಕಾರ್ಯಪ್ರವೃತ್ತರಾಗುವುದು ಆ ಜವಾಬ್ದಾರಿ ಹೊತ್ತವರ ಧರ್ಮ.

ಬಾಲಕೃಷ್ಣ ಎಂ.ಆರ್., ಬೆಂಗಳೂರು

ಅರಿವಾಗಲಿ ಹೈನೋದ್ಯಮದ ಮಹತ್ವ

‘ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಹೈನೋದ್ಯಮದ ಮಾದರಿ ಪರಿಹಾರವಾಗಬಹುದು’ ಎಂಬ ಬಗ್ಗೆ ಎಂ.ಎಸ್.ಶ್ರೀರಾಮ್ ತಮ್ಮ ಲೇಖನದಲ್ಲಿ (ಪ್ರ.ವಾ., ಡಿ. 27) ಚರ್ಚೆ ಮಾಡಿದ್ದಾರೆ. ಹೈನುಗಾರಿಕೆ ಮತ್ತು ಹೈನೋದ್ಯಮದ ಮಹತ್ವ ನಮ್ಮ ಸರ್ಕಾರಕ್ಕೆ ಅರ್ಥವೇ ಆಗಿಲ್ಲ. ಹೈನೋ
ದ್ಯಮ ಎನ್ನುವುದು ಬರೀ ಹಾಲು ಉತ್ಪಾದನೆಯ ಸಂಗತಿಯಲ್ಲ. ಅದು ಅನೇಕ ಉಪಉತ್ಪನ್ನಗಳ ಮಹಾಸಾಗರ. ಇದರ ಜೊತೆಗೆ ಮಾಂಸೋದ್ಯಮ, ಚರ್ಮೋದ್ಯಮ, ದನಗಳ ಮೂಳೆ, ಕೋಡು, ಚಕ್ಕಳದಂತಹವು ಆರ್ಥಿಕ ಮಹತ್ವ ಹೊಂದಿವೆ. ಇದಾವುದರ ಪರಿವೆಯಿಲ್ಲದೆ ಸರ್ಕಾರ ಅತ್ಯಂತ ಅವೈಜ್ಞಾನಿಕವಾದ ಜಾನುವಾರು ಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದು ಇದನ್ನೆಲ್ಲ ನಾಶ ಮಾಡುತ್ತಿದೆ.

ಕರ್ನಾಟಕದಲ್ಲಿ ಜಾನುವಾರು ಆರ್ಥಿಕತೆ ವರಮಾನ 2011-12ರಲ್ಲಿ ₹ 13,497 ಕೋಟಿಯಿದ್ದುದು 2020-21ರಲ್ಲಿ ₹ 52,688 ಕೋಟಿಗೇರಿದೆ. ಇಲ್ಲಿ ವರಮಾನದ ವಾರ್ಷಿಕ ಬೆಳವಣಿಗೆ ಶೇ 29.03. ಆದರೆ ಕೃಷಿ ಬೆಳೆ ಆರ್ಥಿಕತೆಯ ವರಮಾನ ಇದೇ ಅವಧಿಯಲ್ಲಿ ₹ 53,395 ಕೋಟಿಯಿಂದ ₹ 1,28,045 ಕೋಟಿಗೇರಿದೆ. ಆದರೆ ಇಲ್ಲಿ ವಾರ್ಷಿಕ ಬೆಳವಣಿಗೆ ಶೇ 13.98ರಷ್ಟು. ಹೈನುಗಾರಿಕೆಯು ರೈತರಿಗೆ ಪೂರಕ ವರಮಾನದ ಮೂಲವಾಗಿದ್ದರೆ, ಹೈನೋದ್ಯಮವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿದರೆ
ಅದು ಉದ್ಯೋಗದ ಮೂಲವಾಗಬಹುದು. ಹೈನುಗಾರಿಕೆಯು ಸಾವಯವ ಗೊಬ್ಬರದ ಮೂಲವೂ ಹೌದು ಮತ್ತು ಪೌಷ್ಟಿಕ ಆಹಾರದ ಮೂಲವೂ ಹೌದು. ಶ್ರೀರಾಮ್ ಅವರು ಲೇಖನದಲ್ಲಿ ಚರ್ಚಿಸಿರುವ ಸಹಕಾರ, ಸರ್ಕಾರ ಮತ್ತು ಮಾರುಕಟ್ಟೆಯ ಪಾತ್ರವು ಕೃಷಿ ಅಭಿವೃದ್ಧಿಯಲ್ಲಿ ಏನಿರಬೇಕು, ಯಾವ ರೀತಿಯ ಸಂಬಂಧ ಇರಬೇಕು ಎಂಬುದರ ಬಗ್ಗೆ ನಾವು ಯೋಚಿಸಬೇಕಾಗಿದೆ.

ಟಿ.ಆರ್.ಚಂದ್ರಶೇಖರ, ಬೆಂಗಳೂರು

ಕುರಿಗಾಹಿಗಳಿಗೆ ಸಿಗಲಿ ಪರಿಹಾರ

ಬೆಳಗಾವಿಯ ಸುವರ್ಣಸೌಧದ ಹತ್ತಿರ, ಪ್ರತಿಭಟನೆನಿರತ ವಿರಾಟ್ ಪಂಚಶಕ್ತಿ ಸಮಾವೇಶ ಮುಗಿದ ನಂತರ, ಉಳಿದ ಹಳಸಲು ಆಹಾರವನ್ನು ತಿಂದ 10 ಕುರಿಗಳು ಸಾವನ್ನಪ್ಪಿದ ಸುದ್ದಿ ಚಿತ್ರಸಮೇತ ವರದಿಯಾಗಿದೆ
(ಪ್ರ.ವಾ., ಡಿ. 27). ಆ ಚಿತ್ರವೇ ಕುರಿಗಾಹಿಗಳ ಬದುಕಿನ ಬವಣೆಯನ್ನು ಸಮರ್ಥವಾಗಿ ಬಯಲು ಮಾಡುತ್ತದೆ. ಮೊದಲನೆಯದಾಗಿ, ತಿನ್ನುವ ಆಹಾರವನ್ನು ಪೋಲು ಮಾಡಿರುವುದು ಒಂದು ಅಪರಾಧವಾದರೆ, ಕುರಿಗಳು ಸಾಯುವುದಕ್ಕೆ ಕಾರಣವಾದುದು ಎರಡನೇ ಅಪರಾಧ. ಸಮಾಧಾನದ ಸಂಗತಿಯೆಂದರೆ, ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಯವರು ‘ಕುರಿಗಾಹಿಗಳಿಗೆ ಕೈಲಾದ ಸಹಾಯ ಮಾಡುತ್ತೇವೆ’ ಎಂದು ಹೇಳಿರುವುದು. ಕುರಿಗಾಹಿಗಳು ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಆಗಬಾರದು. ಕಾಯಕಕ್ಕೆ, ಕಾಯಕ ಮಾಡುವ ದೇಹಕ್ಕೆ, ದೇಹವನ್ನು ರಕ್ಷಿಸುವ ಆಹಾರಕ್ಕೆ ಎಲ್ಲಿಲ್ಲದ ಮಹತ್ವವನ್ನು ಕೊಡುವ ಶರಣರೇ ಆಹಾರವನ್ನು ಪೋಲು ಮಾಡಿದರೆ ಹೇಗೆ? ತುತ್ತು ಅನ್ನಕ್ಕೆ ಪರಿತಪಿಸುತ್ತಿರುವ ಈ ಸಮಾಜದಲ್ಲಿ, ಅದನ್ನು ಹೊರಕ್ಕೆ ಚೆಲ್ಲುವುದರಿಂದ ಹಸಿದವನು ಅನ್ನದಿಂದ ವಂಚಿತನಾದ, ಪರಿಸರ ಮಾಲಿನ್ಯವಾಯಿತು, ಅದನ್ನು ತಿಂದ ಕುರಿಗಳ ಪ್ರಾಣವು ಹೋಯಿತು.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಸಚಿವರ ‘ತೀರ್ಪು’ ಎಷ್ಟು ಸರಿ?

‘ನನ್ನ ಮೇಲೆ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಸಂಬಂಧ ನ್ಯಾಯಾಲಯಕ್ಕೆ ದಾಖಲೆ ಕೊಡದಿದ್ದರೆ, ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಸಚಿವ ಮುನಿರತ್ನ ಹೇಳಿದ್ದಾರೆ (ಪ್ರ.ವಾ., ಡಿ. 26). ಹೀಗೆ ಹೇಳಲು ಮುನಿರತ್ನ ಅವರೇನು ನ್ಯಾಯಾಧೀಶರೇ ಅಥವಾ ಇವರು ಹೇಳಿದಂತೆ ನ್ಯಾಯಾಧೀಶರು ಕೇಳುವರೇ?

ಬೂಕನಕೆರೆ ವಿಜೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT