ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 22 ಫೆಬ್ರುವರಿ 2024, 19:39 IST
Last Updated 22 ಫೆಬ್ರುವರಿ 2024, 19:39 IST
ಅಕ್ಷರ ಗಾತ್ರ

ತಿರಸ್ಕೃತ ಮತ: ಅರಿವಿನ ಕೊರತೆ?

ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಚಲಾಯಿತವಾದ 16,541 ಮತಗಳಲ್ಲಿ 1,239 ಮತಗಳು ತಿರಸ್ಕೃತಗೊಂಡಿವೆ ಎಂಬ ವರದಿ ನೋಡಿ ಅಚ್ಚರಿಯಾಯಿತು. ಶಿಕ್ಷಕರು ಅಂದರೆ ಗುರುಗಳು, ಇತರರಿಗೆ ಮಾರ್ಗದರ್ಶನ ನೀಡುವವರು, ಬಲ್ಲವರು ಎಂಬ ನಂಬಿಕೆ ಇದೆ. ಆದರೆ ಅಂತಹ ಶಿಕ್ಷಕರೇ ಮತದಾರರಾಗಿರುವ ಈ ಚುನಾವಣೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮತಗಳು ತಿರಸ್ಕೃತಗೊಂಡಿವೆಯೆಂದರೆ, ಇದಕ್ಕೆ ಅವರ ಬೇಜವಾಬ್ದಾರಿತನ ಅಥವಾ ತಿಳಿವಳಿಕೆಯ ಕೊರತೆ ಈ ಎರಡರಲ್ಲಿ ಯಾವುದಾದರೊಂದು ಕಾರಣವಾಗಿರುತ್ತದೆ ಎಂಬುದು ದಿಟ. ಶಿಕ್ಷಕರಿಂದಲೇ ಈ ರೀತಿಯಾದರೆ ಉಳಿದವರ ಪಾಡೇನು? ಶಿಕ್ಷಕರು ಚುನಾವಣೆಯನ್ನು ಲಘುವಾಗಿ ಪರಿಗಣಿಸದೆ ತಮ್ಮ ಮೂಲಭೂತ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸುವಂತೆ ಆಗಲಿ. ಮತದಾನ ಮಾಡುವಾಗ ಪ್ರಬುದ್ಧತೆ ತೋರಿ ಇತರರಿಗೆ ಮಾದರಿಯಾಗಲಿ.

ಸಲೀಮ್ ಬೋಳಂಗಡಿ, ಮಂಗಳೂರು

ಜಾತ್ರೆಯ ಸಂಭ್ರಮಕ್ಕೆ ಕಪ್ಪುಚುಕ್ಕೆ

ಮಾರ್ಚ್– ಏಪ್ರಿಲ್ ತಿಂಗಳುಗಳೆಂದರೆ ನಾಡಿನಾದ್ಯಂತ ಊರದೇವರ ಜಾತ್ರೆಗಳ ಸಂಭ್ರಮ. ಯುವಕರು ಮಜ್ಜಿಗೆ, ಪಾನಕ, ಪ್ರಸಾದವನ್ನು ಸಂಭ್ರಮದಿಂದ ಹಂಚುತ್ತಾರೆ. ಇದು ನಿಜಕ್ಕೂ ಸಂತೋಷದ ವಿಚಾರ. ಆದರೆ ಅದಕ್ಕಾಗಿ ಯಥೇಚ್ಛವಾಗಿ ಏಕಬಳಕೆಯ ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಬಳಸುವುದು ಮಾತ್ರ ಆತಂಕಕಾರಿ. ಜಾತ್ರೆಯ ಸಂಭ್ರಮ‌ ಮುಗಿದ ನಂತರ ಊರಿನ ಮುಂದೆ ಗುಡ್ಡೆಯಾಗಿ ಬೀಳುವ ಈ ಪ್ಲಾಸ್ಟಿಕ್, ಬಹಳ ದಿನಗಳವರೆಗೆ ಹಾಗೇ ಬಿದ್ದಿರುತ್ತದೆ. ಸ್ವಚ್ಛತಾ ಕಾರ್ಯ ಕೈಗೊಂಡರೂ ಅದನ್ನು ಊರಿನ ಮತ್ತೊಂದು ಮೂಲೆಯಲ್ಲಿ ಎಸೆಯಲಾಗುತ್ತದೆ.

ಏಕಬಳಕೆಯ ಪ್ಲಾಸ್ಟಿಕ್ ಮಣ್ಣಿನಲ್ಲಿ ಮಣ್ಣಾಗಲು ಹಲವಾರು ವರ್ಷಗಳೇ ಬೇಕು. ಪ್ರತಿವರ್ಷ ಹೀಗೆ ಪ್ಲಾಸ್ಟಿಕ್ ಸಂಗ್ರಹವಾದರೆ, ಅದು ಮಣ್ಣಿನೊಳಗೆ ಸೇರಿಕೊಳ್ಳುತ್ತದೆ. ಪರಿಸರಕ್ಕೆ ಹಾನಿ ಮಾಡುತ್ತದೆ. ಈ ವಿಚಾರ ತಿಳಿದಿದ್ದರೂ ನಮ್ಮ‌ ಯುವಕರು ಪ್ರತಿಷ್ಠೆಗಾಗಿ ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಬಳಸುವುದು ತರವಲ್ಲ. ಮರು‌ಬಳಕೆ ಮಾಡುವ ಸ್ಟೀಲ್ ವಸ್ತುಗಳನ್ನು ಬಳಸಿ ಊರಿನ ಮಣ್ಣಿನ ಫಲವತ್ತತೆ ಮತ್ತು ನೈರ್ಮಲ್ಯವನ್ನು ಕಾಪಾಡಬೇಕು. ಸ್ಥಳೀಯ ಪಂಚಾಯಿತಿಗಳು, ಪ್ರಾಧಿಕಾರಗಳು ಈ‌ ಬಗ್ಗೆ ಜಾಗೃತಿ ಮೂಡಿಸಿ, ನಿಗಾ ವಹಿಸುವ ಅವಶ್ಯಕತೆ‌ ಇದೆ.

ಎಸ್.ರವಿ, ಮೈಸೂರು

ಕೊಳವೆಬಾವಿ: ಬೇಕಾಗಿದೆ ಜಾಗೃತಿ

ರಾಜ್ಯದಲ್ಲಿ ಬರದಿಂದ ಕುಡಿಯುವ ನೀರಿನ ಸಮಸ್ಯೆ ಹಾಗೂ ಕೃಷಿಗೆ ನೀರಿನ ಕೊರತೆ ಎದುರಾಗಿದೆ. ಇದಕ್ಕೆ ಶಾಸಕರು, ಅಧಿಕಾರಿಶಾಹಿ, ರೈತರು ಕಂಡುಕೊಂಡ ಪರಿಹಾರವೆಂದರೆ ಕೊಳವೆಬಾವಿ ಕೊರೆಸುವುದು. ಈ ಕ್ರಮದಿಂದ ಅಂತರ್ಜಲ ನಾಶವಾಗುತ್ತದೆಯಲ್ಲದೆ ಅತಿಯಾದ ವಿದ್ಯುತ್ ಬಳಸಬೇಕಾಗಿ ಬರುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಹೀಗಾಗಿ, ಕೊಳವೆಬಾವಿಗಳಿಂದ ಆಗುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

ಕೊಳವೆಬಾವಿ ಹೆಚ್ಚುಹೆಚ್ಚು ಆಳಕ್ಕೆ ಹೋದಂತೆ‌ಲ್ಲಾ ವಿಷಪೂರಿತ ಲವಣ ಹೊರಬರುತ್ತದೆ. ಇಂತಹ ನೀರನ್ನು ಬಳಸಲು ಶುದ್ಧ ನೀರಿನ ಘಟಕವನ್ನು ಸ್ಥಾಪಿಸಬೇಕಾಗುತ್ತದೆ. ಇಲ್ಲವಾದರೆ, ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಲವಣಗಳಿಂದ ಜನರ ಆರೋಗ್ಯ ಹಾಳಾಗುತ್ತದೆ. ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಲು ಮಳೆನೀರಿನ ಸಂಗ್ರಹ,
ಕೃಷಿ ಹೊಂಡ, ಕೆರೆಗಳಲ್ಲಿ ಮಳೆನೀರಿನ ಸಂರಕ್ಷಣೆ, ಹನಿ ನೀರಾವರಿಯಂತಹ ಕ್ರಮಗಳು ಸೂಕ್ತ ಪರಿಹಾರ ಮಾರ್ಗಗಳಾಗಿವೆ.

ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

ಸರ್ಕಾರದ ಕೆಲಸ... ಧೈರ್ಯವಾಗಿ ಪ್ರಶ್ನಿಸಿ!

ರಾಜ್ಯದ ಕೆಲವು ವಸತಿ ಶಾಲೆಗಳಲ್ಲಿನ ಪ್ರವೇಶದ್ವಾರದ ಘೋಷವಾಕ್ಯವನ್ನು ಬದಲಿಸಲು ಹೊರಟ ಸರ್ಕಾರ, ಅದಕ್ಕೆ ವಿರೋಧ ವ್ಯಕ್ತವಾದ ಬಳಿಕ ಯಥಾಸ್ಥಿತಿ ಕಾಯ್ದುಕೊಳ್ಳಲು ಮುಂದಾಗಿದ್ದು ಸರಿಯಷ್ಟೆ. ಆದರೆ ಇಂತಹದ್ದೊಂದು ಬದಲಾವಣೆಯು ಸರ್ಕಾರಿ ಕಚೇರಿಗಳಲ್ಲಿ ಅಗತ್ಯವಾಗಿ ಆಗಬೇಕಾಗಿದೆ. ಏಕೆಂದರೆ, ‘ಜನ ಸೇವೆಯೇ ಜನಾರ್ದನನ ಸೇವೆ’, ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬಂತಹ ಘೋಷವಾಕ್ಯಗಳು ಈಗ ಸವಕಲಾಗಿ ಹೋಗಿವೆ. ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರಲ್ಲಿ ನೈತಿಕ ಮೌಲ್ಯವನ್ನು ಹೆಚ್ಚಿಸುವ ಉದ್ದೇಶ ಈ ವಾಕ್ಯಗಳದ್ದಾಗಿದ್ದರೂ ಈಗ ಈ ಎರಡೂ ವರ್ಗದವರು ಪ್ರಶ್ನಾತೀತರಾಗಿದ್ದಾರೆ. ಹೀಗಾಗಿ, ಈ ವಾಕ್ಯಗಳ ಬದಲಿಗೆ ‘ಸರ್ಕಾರದ ಕೆಲಸ ಸಾರ್ವಜನಿಕರ ಕೆಲಸ, ಧೈರ್ಯವಾಗಿ ಪ್ರಶ್ನಿಸಿ’ ಎಂದು ಎಲ್ಲಾ ಸರ್ಕಾರಿ ಕಚೇರಿ ಮತ್ತು ರಾಜಕೀಯ ಪಕ್ಷಗಳ ಕಚೇರಿಗಳ ಪ್ರವೇಶ ದ್ವಾರದಲ್ಲಿ  ಬರೆಸುವುದನ್ನು ಕಡ್ಡಾಯ ಮಾಡಬೇಕಾಗಿದೆ. 

ತಾ.ಸಿ.ತಿಮ್ಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT