ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published : 2 ಸೆಪ್ಟೆಂಬರ್ 2024, 19:30 IST
Last Updated : 2 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ಆಸ್ತಿ ದಂಧೆ: ರಾಜಕಾರಣಿಗಳ ನೆರವಿಗೆ ಪಡೆಯೇ ಇದೆ!

‘ರಾಜಕೀಯ ಜೀವನದಲ್ಲಿ 10 ರೂಪಾಯಿಯಷ್ಟೂ ಭ್ರಷ್ಟಾಚಾರ ಮಾಡಿಲ್ಲ, ಬೇರೆಯವರ ಹೆಸರಿನಲ್ಲಿ ಭೂಮಿ ತೆಗೆದುಕೊಂಡಿಲ್ಲ ಎಂದು ತಂದೆ-ತಾಯಿ ಮೇಲೆ ಪ್ರಮಾಣ ಮಾಡಿ’ ಎಂದು ಬಿಜೆಪಿ ಮುಖಂಡ ಮುರುಗೇಶ ನಿರಾಣಿ ಅವರು ಸಚಿವ ಎಂ.ಬಿ.ಪಾಟೀಲ ಅವರಿಗೆ ಸವಾಲು ಹಾಕಿರುವುದಾಗಿ ವರದಿಯಾಗಿದೆ. ಪ್ರಸ್ತುತ ರಾಜಕಾರಣವು ದುಡ್ಡು ಚೆಲ್ಲಿ ದುಡ್ಡು ಗೆಬರುವ ವೃತ್ತಿಯಾಗಿದೆ. ಸಮಾಜಸೇವೆ ಎನ್ನುವುದು ನೆಪ ಮಾತ್ರ. ಇತ್ತೀಚೆಗೆ ರಾಜಕಾರಣಿಗಳೂ ಒಳಗೊಂಡಂತೆ ಕೆಲ ದೊಡ್ಡದೊಡ್ಡ ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಆಸ್ತಿ ಮಾಡುತ್ತಿಲ್ಲ. ತಾನು ಕರೆದ ತಕ್ಷಣ ಏನು, ಎತ್ತ ಎಂದು ಕೇಳದೆ, ಎಲ್ಲಿ ಸಹಿ ಹಾಕು ಎಂದು ಹೇಳಲಾಗುತ್ತದೋ ಅಲ್ಲಿ ಸಹಿ ಹಾಕುವಂತಹ ಮನಃಸ್ಥಿತಿಯವರನ್ನು ಸಾಕಿಕೊಳ್ಳುವ, ಪೋಷಿಸುವ ಸಂಸ್ಕೃತಿ ರೂಪುಗೊಂಡಿದೆ. ಅಂತಹವರ ಹೆಸರಿನಲ್ಲಿ ಆಸ್ತಿ ನೋಂದಣಿ ಮಾಡಲಾಗುತ್ತದೆ.

ರಾಜಕಾರಣಿಗಳಿಗೆ ಜಮೀನು, ಕಟ್ಟಡಗಳ ಬಗ್ಗೆ ಮಾಹಿತಿ ನೀಡಲು ಮತ್ತು ಅವುಗಳನ್ನು ಖರೀದಿಸಿ, ಬೇರೊಬ್ಬರ ಹೆಸರಿನಲ್ಲಿ ನೋಂದಣಿ ಮಾಡಿಸಲು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಒಂದು ಪಡೆಯೇ ಸೃಷ್ಟಿಯಾಗಿದೆ. ಪರಸ್ಪರ ಆರೋಪ– ಪ್ರತ್ಯಾರೋಪ ಮಾಡುವಾಗ ದೇವರ ಮೇಲೆ ಆಣೆ ಮಾಡುವಂತೆ ಸವಾಲು ಎಸೆಯಲಾಗುತ್ತಿತ್ತು. ಈಗ ಅದು ಹೋಗಿ ತಂದೆ-ತಾಯಿ ಮೇಲೆ ಆಣೆ– ಪ್ರಮಾಣ ಮಾಡುವಂತೆ ಕೇಳಲಾಗುತ್ತಿದೆ. ಆದರೆ ರಾಜಕಾರಣಿಗಳ ಆಸ್ತಿ ಕಬಳಿಕೆಯ ತಂತ್ರಗಳು ಆಣೆ– ‍ಪ್ರಮಾಣದ ಪರಿಧಿ ಮೀರಿ ಬಹಳ ಮುಂದಕ್ಕೆ ಹೋಗಿವೆ. 

⇒ತಿಮ್ಮೇಶ ಮುಸ್ಟೂರು, ಜಗಳೂರು

ಮುಖ್ಯಮಂತ್ರಿ ಆಗುವ ಹಂಬಲವೇಕೆ?

‘ಹೈಕಮಾಂಡ್ ಒಪ್ಪಿದರೆ ಹಾಗೂ ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ. ನಾನು ಸಿದ್ದರಾಮಯ್ಯ ಅವರಿಗಿಂತ ಎರಡು ವರ್ಷ ದೊಡ್ಡವನು‌. ಸಚಿವ ಆಗಿ ಆಗಿ ದಣಿದಿದ್ದೇನೆ. ಇನ್ನು ಮುಖ್ಯಮಂತ್ರಿ ಆಗಬೇಕಷ್ಟೆ. ಎಲ್ಲರಂತೆ ನನಗೂ ಆಸೆ ಇದೆ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ
ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಮುಖ್ಯಮಂತ್ರಿ ಆಗಲು ಹೈಕಮಾಂಡ್ ಮಾತ್ರ ಒಪ್ಪಿದರೆ ಸಾಲದು, ಬಹುಮುಖ್ಯವಾಗಿ ಶಾಸಕರ ಬೆಂಬಲ ಬೇಕು. ಜೊತೆಗೆ ಸಿದ್ದರಾಮಯ್ಯ ಅನುಮತಿ ನೀಡುತ್ತಾರೆ ಎಂಬುದು ಭ್ರಮೆ. ಇವೆಲ್ಲಾ ತಿಳಿಯದಷ್ಟು ಅಮಾಯಕರೇನಲ್ಲ ದೇಶಪಾಂಡೆಯವರು. ಬಂದರೆ ಬೆಟ್ಟ ಹೋದರೆ ಹಗ್ಗ ಎಂಬಂತೆ ಹಾಗೇ ಸುಮ್ಮನೆ ಒಂದು ದಾಳ ಉರುಳಿಸಿದ್ದಾರೆ ಅಷ್ಟೆ.

ಅಷ್ಟಕ್ಕೂ ಸಚಿವರಾಗಿ ಕೆಲಸ ಮಾಡಿ ದಣಿದಿರುವ ಅವರಿಗೆ ಮುಖ್ಯಮಂತ್ರಿ ಆಗುವ ಹಂಬಲವೇಕೊ? ಯುವಕರಿಗೆ ಜಾಗ ಬಿಟ್ಟು ಮನೆಯಲ್ಲೇ ಇದ್ದು ವಿಶ್ರಾಂತಿ ತೆಗೆದುಕೊಂಡು ಹಿರಿಯ ರಾಜಕಾರಣಿಗಳಿಗೆ ಸ್ಫೂರ್ತಿಯಾಗಲಿ.

⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಜೆನರಿಕ್‌ ಔಷಧಿಯಷ್ಟೇ ಸಿಗಲಿ

ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ನಡೆಯುತ್ತಿರುವ ಅಡ್ಡ ವ್ಯಾಪಾರದ ಬಗ್ಗೆ ಬೆಳಕು ಚೆಲ್ಲಿರುವ ಲಕ್ಷ್ಮೀಕಾಂತ್‌ ಕೊಟ್ಟಾರಚೌಕಿ ಅವರು (ವಾ.ವಾ., ಸೆ. 2), ಒಂದೇ ಬಗೆಯ ಔಷಧಿಗಳಿಗೆ ಎಲ್ಲ ಜನೌಷಧಿ ಕೇಂದ್ರಗಳಲ್ಲೂ ಏಕರೂಪದ ಬೆಲೆ ನಿಗದಿ ಮಾಡಬೇಕು ಎಂದಿದ್ದಾರೆ. ಕಂಪನಿಗಳ ಬ್ರ್ಯಾಂಡೆಡ್‌ ಔಷಧಿಗಳಿಗೆ ಹೋಲಿಸಿದಲ್ಲಿ ಸರ್ಕಾರದ ಜೆನರಿಕ್‌ ಔಷಧಿಗಳ ಮಾರಾಟದಿಂದ ಸಿಗುವ ಲಾಭದ ಪ್ರಮಾಣ ತೀರಾ ಕಡಿಮೆ.

ಕೆಲವು ಔಷಧಿಗಳ ವಿಷಯದಲ್ಲಿ, ಐವತ್ತು ಜನೌಷಧಿ ಮಾತ್ರೆಗಳ ಮಾರಾಟದಿಂದ ದೊರೆಯುವ ಲಾಭವು ಇತರ ಬ್ರ್ಯಾಂಡೆಡ್‌ ಕಂಪನಿಗಳ ಬರೀ ಹತ್ತು ಮಾತ್ರೆಗಳನ್ನು ಮಾರುವುದರಿಂದ ದೊರೆಯುತ್ತದೆ. ಆದ್ದರಿಂದ ಜೆನರಿಕ್‌ ಔಷಧಿಗಳ ಜೊತೆಗೆ ಬ್ರ್ಯಾಂಡೆಡ್‌ ಕಂಪನಿಗಳ ಔಷಧಿಗಳನ್ನೂ ಮಾರಾಟ ಮಾಡಿ ಅಧಿಕ ಲಾಭ ಮಾಡಿಕೊಳ್ಳುವ ದಂಧೆ ಕೆಲವು ಜನೌಷಧಿ ಕೇಂದ್ರಗಳಲ್ಲಿ ನಡೆಯುತ್ತಿದೆ. ಇದರಿಂದ ಗ್ರಾಹಕರಿಗೆ ಆರ್ಥಿಕ ನಷ್ಟವುಂಟಾಗುತ್ತಿದೆ. ಆದ್ದರಿಂದ ಜನೌಷಧಿ ಕೇಂದ್ರಗಳಲ್ಲಿ ಜೆನರಿಕ್‌ ಔಷಧಿಗಳನ್ನು ಮಾತ್ರ ಮಾರಾಟ ಮಾಡಬೇಕೆಂಬ ನಿಯಮವನ್ನು ರೂಪಿಸಬೇಕಾಗಿದೆ.

⇒ಜಿ.ನಾಗೇಂದ್ರ ಕಾವೂರು, ಸಂಡೂರು

ಗ್ರಾಹಕರಿಗೆ ಭಾರವಾಗುತ್ತಿವೆಯೇ ಬ್ಯಾಂಕುಗಳು?

ಗ್ರಾಹಕರು ತಮ್ಮ ಹಣಕಾಸು ವ್ಯವಹಾರಕ್ಕೆಂದು ಬ್ಯಾಂಕುಗಳಿಗೆ ಹೋದರೆ ಗಂಟೆಗಟ್ಟಲೆ ಅಲ್ಲೇ ಕಳೆಯಬೇಕಾದ ಸ್ಥಿತಿ ಇದೆ. ₹ 10,000ದ ಒಳಗಿನ ಹಣವನ್ನು ಎಟಿಎಂಗಳಲ್ಲಿ ತೆಗೆದುಕೊಳ್ಳುವಂತೆ ಹೇಳುತ್ತಾರೆ. ₹ 20,000ಕ್ಕಿಂತ ಹೆಚ್ಚಿನ ಹಣ ತೆಗೆಯಲು ಕೆಲವು ಬ್ಯಾಂಕ್‌ಗಳವರು ಚೆಕ್ ಕೊಡಿ ಎನ್ನುತ್ತಾರೆ. ಚೆಕ್ ಇಲ್ಲದವರ ಗೋಳು ಹೇಳತೀರದು.

ಬ್ಯಾಲೆನ್ಸ್‌ ಕಡಿಮೆ ಇರುವುದು ಗೊತ್ತಾಗದೆ ಎಟಿಎಂನಲ್ಲಿ ಹಣ ಪಡೆಯಲು ಹೋದರೆ, ಇನ್‌ಸಫಿಷಿಯಂಟ್‌ ಬ್ಯಾಲೆನ್ಸ್‌ ಎಂಬ ಕಾರಣಕ್ಕೆ ₹ 23.60 (ಇದರಲ್ಲಿ ₹ 3.60 ಜಿಎಸ್‌ಟಿ) ಕಡಿತಗೊಳಿಸಲಾಗುತ್ತದೆ. ನಾವು ವ್ಯವಹರಿಸುವ ಬ್ಯಾಂಕುಗಳ ಎಟಿಎಂಗಳಲ್ಲಿ ಹಣ ಇಲ್ಲದಿದ್ದರೆ ಬೇರೆ ಬ್ಯಾಂಕ್‌ ಎಟಿಎಂ ಬಳಸಿದರೆ ಅದರಲ್ಲೂ ನಿಗದಿತ ವಹಿವಾಟು ಮಿತಿ ಮೀರಿದ್ದಾಗ ಮತ್ತೆ ಗ್ರಾಹಕನ ಹಣ ಕಡಿತಗೊಳಿಸಲಾಗುತ್ತದೆ. ಇಂತಹ ಸ್ಥಿತಿಯಿಂದಾಗಿ, ಬ್ಯಾಂಕುಗಳು ಗ್ರಾಹಕರಿಗೆ ಭಾರ ಆಗುತ್ತಿವೆಯೇನೊ ಎಂಬ ಭಾವನೆ ಮೂಡುತ್ತದೆ.

⇒ಅಶೋಕ ಚನ್ನಳ್ಳಿ, ಹಿರೇಕೆರೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT