ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 7 ಜುಲೈ 2024, 18:41 IST
Last Updated 7 ಜುಲೈ 2024, 18:41 IST
ಅಕ್ಷರ ಗಾತ್ರ

ಕೆಲಸ ಮಾಡಿರುವುದು ಮುಖ್ಯ

ಬ್ರಿಟನ್ ಚುನಾವಣೆಯ ಫಲಿತಾಂಶಕ್ಕೆ ಭಾರತದಲ್ಲಿ ವಿವಿಧ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಾಧ್ಯಮಗಳು ರಿಷಿ ಸುನಕ್ ಸೋತ ಬಗೆಗೆ ಹಾಗೂ ಅವರು ಭಾರತದ ಜೊತೆ ಹೊಂದಿರುವ ಸಂಬಂಧದ ಕುರಿತು ಹೆಚ್ಚು ಗಮನ ನೀಡಿವೆ. ಆದರೆ ಕನ್ಸರ್ವೇಟಿವ್ ಪಾರ್ಟಿಯ ದೀರ್ಘ ಆಡಳಿತವನ್ನು ಅಲ್ಲಿನ ಮತದಾರರು ಅಂತ್ಯಗೊಳಿಸಿದ್ದು ಮುಖ್ಯ. ಲೇಬರ್ ಪಾರ್ಟಿ ಭಾರತದ ಬಗ್ಗೆ ಮೊದಲಿಗಿಂತ ಉತ್ತಮ ನಿಲುವು ತಾಳುತ್ತದೆಯೋ ಎಂದು ನೋಡಬೇಕಾಗಿದೆ.
ಮುಕ್ತ ವ್ಯಾಪಾರ ಒಪ್ಪಂದವೇನೋ (ಎಫ್‌ಟಿಎ) ಏರ್ಪಡಬಹುದು. ಆದರೆ ಅದಕ್ಕಿಂತಲೂ ವಲಸಿಗರ ವಿಚಾರವಾಗಿ ನೂತನ ಪ್ರಧಾನಿ ಅನುಸರಿಸಲಿರುವ ನೀತಿಯಿಂದ ಭಾರತ ಮೂಲದ ವಿದ್ಯಾರ್ಥಿಗಳು, ಕಾರ್ಮಿಕರ ಮೇಲೆ ಏನು ಪರಿಣಾಮ ಆದೀತು ಎಂಬ ಕುತೂಹಲ ಹೆಚ್ಚು ಇದೆ. ಒಟ್ಟಿನಲ್ಲಿ ಅಲ್ಲಿನ ಪ್ರಧಾನಿಯ ವೈಯಕ್ತಿಕ ಹಿನ್ನೆಲೆ, ಆಸ್ತಿ ವಿವರ ಇವುಗಳಿಗಿಂತ ಇಲ್ಲಿಯವರೆಗೆ ಅವರು ಸಾರ್ವಜನಿಕ ವಲಯದಲ್ಲಿ ಏನು‌ ಕೆಲಸ ಮಾಡಿದ್ದಾರೆ ಎಂಬುದನ್ನು
ಪರಿಗಣಿಸಬೇಕಾಗುತ್ತದೆ.

⇒ಎಚ್.ಎಸ್.ಮಂಜುನಾಥ, ಗೌರಿಬಿದನೂರು

ನಮ್ಮಲ್ಲೂ ಚುರುಕಿನ ಚುನಾವಣೆ ಆಗಲಿ

ಬ್ರಿಟನ್ನಿನ ಜನಸಂಖ್ಯೆ 6.7 ಕೋಟಿ. ಅಲ್ಲಿನ ಸಂಸತ್ತಿಗೆ 650 ಮಂದಿ ಆಯ್ಕೆಯಾಗಿದ್ದಾರೆ. 412 ಸ್ಥಾನ ಗಳಿಸಿದ ಲೇಬರ್ ಪಾರ್ಟಿಯ ಕೀರ್ ಸ್ಟಾರ್ಮರ್ ಅವರು ಚುನಾವಣಾ ಫಲಿತಾಂಶ ಬಂದ ಕೆಲವೇ ಹೊತ್ತಿನಲ್ಲಿ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಕೂಡ. ಆದರೆ 140 ಕೋಟಿ ಜನಸಂಖ್ಯೆ ಹಾಗೂ 96 ಕೋಟಿ ಮತದಾರರನ್ನು ಹೊಂದಿರುವ ಭಾರತದಲ್ಲಿ 543 ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸುದೀರ್ಘ ಅವಧಿಯನ್ನು ತೆಗೆದುಕೊಂಡಿತು. ಇನ್ನು ಮುಂದಾದರೂ ಚುನಾವಣೆಯನ್ನು ಸಾಧ್ಯವಾದಷ್ಟು ಕಡಿಮೆ ಅವಧಿಯಲ್ಲಿ ನಡೆಸುವಂತಾಗಲಿ. ಆಡಳಿತ ಪಕ್ಷಕ್ಕೆ ಪ್ರಚಾರ ನಡೆಸಲು ಅನುಕೂಲವಾಗಲಿ ಎಂದು ಆರೇಳು ಹಂತಗಳಲ್ಲಿ ಚುನಾವಣೆ ನಡೆಸುವುದನ್ನು ಬಿಟ್ಟು, ಒಂದು ಅಥವಾ ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ಆಗಲಿ.

ಕರ್ನಾಟಕದಲ್ಲಿ ಇರುವಷ್ಟು ಜನಸಂಖ್ಯೆ ಹಾಗೂ ಈ ರಾಜ್ಯದಷ್ಟು ವಿಸ್ತೀರ್ಣವುಳ್ಳ ಬ್ರಿಟನ್ 650 ಸಂಸದರನ್ನು ಹೊಂದಿದೆ. ನಾವು ಮಾತ್ರ 543 ಲೋಕಸಭಾ ಸದಸ್ಯರನ್ನು ಹೊಂದಿದ್ದೇವೆ. ನಮ್ಮ ಕೆಲವು ಲೋಕಸಭಾ ಕ್ಷೇತ್ರಗಳು, ಅಭ್ಯರ್ಥಿಗಳಿಗೆ ಎಲ್ಲ ಮತದಾರರನ್ನು ಭೇಟಿ ಮಾಡಲಾಗದಷ್ಟು ದೊಡ್ಡದಿವೆ. ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕೊಡಗಿನ ಜನ ತುರ್ತಾಗಿ ಸಂಸದರನ್ನು ಭೇಟಿಯಾಗಬೇಕೆಂದರೆ 150 ಕಿ.ಮೀ. ಪ್ರಯಾಣಿಸಿ ಮೈಸೂರಿಗೇ ಬರಬೇಕು. ಇದೊಂದು ಉದಾಹರಣೆಯಷ್ಟೇ. ಕಳೆದ ಬಾರಿ ನಡೆದ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ ಅವ್ಯವಸ್ಥೆ ಇದು.

ಜಿಲ್ಲೆಗೊಬ್ಬ ಸಂಸದರ ಅವಶ್ಯಕತೆ ಇದೆ. ಆದ್ದರಿಂದ ಮುಂದಿನ ಪುನರ್ ವಿಂಗಡಣೆ ಸಮಯದಲ್ಲಿ (2028ರಲ್ಲಿ) ಈ ಬಗ್ಗೆ ಗಮನ ಹರಿಸಬೇಕು. ಆಗ ಮಾತ್ರ ಜಿಲ್ಲೆಗಳ ಜನರಿಗೆ ಅನುಕೂಲ ಆಗುತ್ತದೆ.

⇒ಮುಳ್ಳೂರು ಪ್ರಕಾಶ್, ಮೈಸೂರು

ಮಾತನ್ನು ಹಿಂತೆಗೆದುಕೊಳ್ಳುವರೇ?

ಕಳೆದ ವರ್ಷ ಮಳೆ ಕಡಿಮೆಯಾಗಿ ರಾಜ್ಯದಲ್ಲಿ ಬರಗಾಲದ ಛಾಯೆ ಕಂಡು ಬಂದಾಗ ಕೆಲವು ರಾಜಕಾರಣಿಗಳು ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಬರಗಾಲ ಎದುರಾಗುತ್ತದೆ ಎಂದು ಲೇವಡಿ ಮಾಡಿದ್ದರು. ಈಗಲೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿ ಇದೆ. ಆದರೆ ರಾಜ್ಯದ ಹಲವೆಡೆ ಕುಂಭದ್ರೋಣ ಮಳೆ ಬೀಳುತ್ತಿದೆ. ಕರಾವಳಿ ಮತ್ತು ಮಲೆನಾಡಿನಲ್ಲಂತೂ ಜನರು ದಶಕಗಳ ಹಿಂದಿನ ಮಳೆಗಾಲದ ದಿನಗಳಂತೆಯೇ ಮಳೆ ಸುರಿಯುವುದನ್ನು ನೋಡುತ್ತಿದ್ದಾರೆ. ಕೆರೆ ಕಾಲುವೆಗಳು ಉಕ್ಕುತ್ತಿವೆ. ಹಿಂದಿನ ವರ್ಷ ಕುಡಿಯುವ ನೀರಿನ ಕೊರತೆಯನ್ನು ಅನುಭವಿಸಿದ ಕೆಲವು ಪ್ರದೇಶಗಳು ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರಬಹುದು. ಬರಗಾಲಕ್ಕೂ ಕಾಂಗ್ರೆಸ್‌ ಪಕ್ಷಕ್ಕೂ ನಂಟು ಹಾಕಿದವರು ತಮ್ಮ ಮಾತನ್ನು ಹಿಂತೆಗೆದುಕೊಳ್ಳುವರೇ?

⇒ರಮಾನಂದ ಶರ್ಮಾ, ಬೆಂಗಳೂರು

ಶ್ರದ್ಧಾಂಜಲಿ ಸಲ್ಲಿಸಿದ್ದು ವಿಷಾದಕರ

ವಿ. ಸೋಮಣ್ಣ ಮತ್ತು ಡಾ.ಸಿ.ಎನ್. ಮಂಜುನಾಥ್ ಅವರು ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸುದ್ದಿ (ಪ್ರ.ವಾ., ಜುಲೈ 7) ಓದಿ ಆಶ್ಚರ್ಯ ಮತ್ತು ಆಘಾತ ಎರಡೂ ಆದವು. ನಮ್ಮೊಡನೆಯೇ ಇರುವ ಅಡ್ವಾಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದವರಲ್ಲಿ ಒಬ್ಬರು ಉನ್ನತ ಸ್ಥಾನದಲ್ಲಿರುವ ಸಚಿವರು, ಮತ್ತೊಬ್ಬರು ಜನಪ್ರಿಯ ವ್ಯಕ್ತಿ ಹಾಗೂ ಸಂಸದರು.

‘ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯ’ ಮತ್ತು ತೀರಾ ಏಕಪಕ್ಷೀಯವಾದ ಕೆಲವು ಯೂಟ್ಯೂಬ್ ವಾಹಿನಿಗಳಲ್ಲಿ ಬಿತ್ತರವಾಗುವ ಅನೇಕ ಸುದ್ದಿಗಳು ‘ಬುರುಡೆ’ ಎಂಬುದು ಎಲ್ಲರಿಗೂ ತಿಳಿದಿದೆ. ಈ ಹಿಂದೆಯೂ ಮಹನೀಯರ ಸಾವಿನ ಸುಳ್ಳು ಸುದ್ದಿಯನ್ನು ಕೆಲವರು ಹರಡಿದ, ಶ್ರದ್ಧಾಂಜಲಿ ಅರ್ಪಿಸಿದ ನಿದರ್ಶನಗಳಿವೆ. ವಿಶೇಷವಾಗಿ ಒಬ್ಬ
ಗಣ್ಯವ್ಯಕ್ತಿಯ ಸಾವಿನ ಸುದ್ದಿಯನ್ನು ಖಚಿತಪಡಿಸಿಕೊಂಡೇ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬೇಕು. ಸೋಮಣ್ಣ ಮತ್ತು ಮಂಜುನಾಥ್ ಅವರು ತಮ್ಮಿಂದಾದ ಅಚಾತುರ್ಯಕ್ಕೆ ಕ್ಷಮೆ ಕೋರಿದ್ದಾರೆ ಎಂಬುದು ನಿಜ. ಆದರೂ, ಅವರಿಗೆ ಮತ್ತು ಪಕ್ಷಕ್ಕೆ ಆದ ಮುಜುಗರ ವಿಷಾದಕರ.

⇒ಎಚ್.ವಿ. ಶ್ರೀಧರ್, ಬೆಂಗಳೂರು

ಐದು ದಶಕಗಳ ಹಿಂದಿನ ಬೆರಗು

‘50 ವರ್ಷಗಳ ಹಿಂದೆ’ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾದ ಸುದ್ದಿಯೊಂದು (ಪ್ರ.ವಾ., ಜುಲೈ 5) ಗಮನ ಸೆಳೆಯಿತು. ಅಮೆರಿಕದ ವಿಜ್ಞಾನಿಗಳು ಆಗಲೇ ‘ಮನೆಯಿಂದಲೇ ಕಚೇರಿ ಕೆಲಸ’ದ ಕಾಲವೊಂದು ಬಹಳ ಬೇಗನೆ ಬರಬಹುದು ಎಂದು ಅಂದಾಜಿಸಿ ಆ ವ್ಯವಸ್ಥೆಗಾಗಿ ಸಂಶೋಧನೆ ಕೈಗೊಂಡಿದ್ದುದು ಸೋಜಿಗವೆನಿಸಿತು. ಈಗ ಅದು ನಮಗೆ ಹೊಸ ವಿಷಯವೇ ಅಲ್ಲ. ಆದರೆ ಐವತ್ತು ವರ್ಷಗಳ ಹಿಂದೆ ಅದೊಂದು ಬಹಳ ಬೆರಗಿನ ಸಂಗತಿಯಾಗಿ ಜನರಿಗೆ ಕಂಡಿತ್ತೇನೋ...

⇒ವೀರೇಶ ಬಂಗಾರಶೆಟ್ಟರ, ಕುಷ್ಟಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT