ಹಿಂದೆ ಪೂರ್ವ ಪಾಕಿಸ್ತಾನ ಎನಿಸಿಕೊಂಡಿದ್ದ ಈಗಿನ ಬಾಂಗ್ಲಾದೇಶವು ಪಾಕಿಸ್ತಾನದಿಂದ ಬೇರ್ಪಡಲು ಮಾಡಿದ ಯುದ್ಧ ನಮ್ಮ ತಲೆಮಾರಿನಲ್ಲೇ ನಡೆದದ್ದು. ಹೀಗಾಗಿ, ಆ ಪ್ರಕ್ರಿಯೆಯಲ್ಲಿ ಆದ ಸಾವು, ನೋವು, ತ್ಯಾಗ, ಬಲಿದಾನ ಎಲ್ಲಾ ನಮ್ಮ ನೆನಪಿನ ಅಂಗಳದಿಂದ ಮರೆಯಾಗಿಲ್ಲ. ಆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇದ್ದದ್ದು ಮುಜೀಬುರ್ ರೆಹಮಾನ್ ಅವರ ನಿಸ್ವಾರ್ಥ ಪಾಲುದಾರಿಕೆ. ಅದನ್ನು ಅರಿಯದ ಈಗಿನ ಅಲ್ಲಿಯ ಯುವಕರು ಅವರದಲ್ಲದ ತಪ್ಪಿಗೆ, ಅವರ ಪ್ರತಿಮೆ ಮೇಲೆ ಕುಳಿತು, ಸುತ್ತಿಗೆಯಿಂದ ತಲೆಗೆ, ಮುಖಕ್ಕೆ ಹೊಡೆಯುತ್ತಿದ್ದುದನ್ನು ಟಿ.ವಿ.ಯಲ್ಲಿ ನೋಡಿ ಮನಸ್ಸಿಗೆ ಅತೀವ ಖೇದವಾಯಿತು.
ನಾನಾ ಕಾರಣಗಳಿಂದಾಗಿ ದೇಶದ ಆರ್ಥಿಕತೆ ದಯನೀಯ ಸ್ಥಿತಿಯಲ್ಲಿ ಇರುವಾಗ, ಸಂಬಂಧಪಟ್ಟ ವ್ಯಕ್ತಿಗಳು, ಅಧಿಕಾರಿಗಳು ಸಮಾಲೋಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಅದುಬಿಟ್ಟು ಸಂಬಂಧವಿಲ್ಲದವರ ಮೇಲೆ ವಿನಾಕಾರಣ ಆಕ್ರೋಶ ಹೊರಹಾಕಿ ಅವರಿಗೆ ಅವಮಾನ ಮಾಡುವುದು ಸರಿಯಲ್ಲ.
⇒ಟಿ.ವಿ.ಬಿ.ರಾಜನ್, ಬೆಂಗಳೂರು
‘ಬರಿಗಾಲ ಗಾಂಧಿ’ ಎಂದೇ ಹೆಸರಾಗಿದ್ದ ವಿಜಯಪುರದ ಕಾರ್ಮಿಕ ಧುರೀಣ ಭೀಮಶಿ ಕಲಾದಗಿ, ಪಾದರಕ್ಷೆ ಧರಿಸದೆ ಬರಿಗಾಲಿನಿಂದ ನಡೆಯುವುದನ್ನು ತಮ್ಮ ಹೋರಾಟದ ಅಸ್ತ್ರವನ್ನಾಗಿಸಿಕೊಂಡಿದ್ದರು. ಆಲಮಟ್ಟಿ ಜಲಾಶಯ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಈ ಕಾಮಗಾರಿ ಇನ್ನೂ ಬಾಕಿ ಇರುವುದರಿಂದ ಅವರು ಪಾದರಕ್ಷೆಯನ್ನು ಧರಿಸದೆ, ನಾಡಿನ ತುಂಬ ಬರಿಗಾಲಿನಲ್ಲೇ ಓಡಾಡುತ್ತಿದ್ದರು. ಖಾದಿ ಧೋತರ, ನಿಲುವಂಗಿ ಮತ್ತು ಟೋಪಿ ಧರಿಸುತ್ತಿದ್ದ ಭೀಮಶಿ ಅಪ್ಪಟ ಗಾಂಧಿ ಪ್ರತಿನಿಧಿಯಾಗಿದ್ದರು.
ರಸ್ತೆಬದಿಯಲ್ಲಿ ಬಹಿರ್ದೆಸೆಗೆ ಕುಳಿತಿದ್ದ ಮಹಿಳೆಯರನ್ನು ಲಾಠಿ ಬೀಸಿ ಓಡಿಸಿದ ಪೊಲೀಸ್ ಅಧಿಕಾರಿಯ ಮನೆಗೆ ಆ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಿ ‘ಪೊಲೀಸಪ್ಪ, ಹೆಣ್ಣುಮಕ್ಕಳು ನಿನ್ನ ಮನೆಯಲ್ಲಿ ಸಂಡಾಸು ಮಾಡಲು ಬಂದಿದ್ದಾರೆ’ ಎಂದು ಕೂಗು ಹಾಕಿದ್ದರು.
ವಿಜಯಪುರ ಜಿಲ್ಲೆಯ ಶಿರೂಲ, ಹೊಸೂರ, ಕಣಬೂರು, ಚಿಕ್ಕಲಗಲಿ, ಜಂಬಿಗಿ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾರ್ಮಿಕರ ಪರವಾಗಿ ದೀರ್ಘ ಹೋರಾಟ ನಡೆಸಿ, 119 ಎಕರೆ ಸರ್ಕಾರಿ ಭೂಮಿಯ ಹಕ್ಕುಪತ್ರ ಕೊಡಿಸಿದ್ದರು. ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಕೈಗಾರಿಕೆಗಳ ಕಾರ್ಮಿಕರು, ಹಮಾಲರು, ರಸ್ತೆಬದಿ ವ್ಯಾಪಾರಿಗಳು, ದಿನಗೂಲಿ ನೌಕರರು ರಾಜ್ಯದಾದ್ಯಂತ ನಡೆಸಿಕೊಂಡು ಬಂದ ಹೋರಾಟಗಳಲ್ಲಿ ಅವರ ಜನಪರ ಕೂಗು ಕೇಳಿಸುತ್ತಿತ್ತು. ಸೈಕಲ್ ರಿಪೇರಿ ಅವರ ಉಪಜೀವನದ ವೃತ್ತಿಯಾಗಿತ್ತು. ಅವರ ಪತ್ನಿ ಗಂಗಮ್ಮ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಹಳೆಯ ತಲೆಮಾರಿನ ಸಣ್ಣ ಮನೆಯಲ್ಲಿ ಬದುಕು ಸಾಗಿಸಿದ ಭೀಮಶಿ ಅವರ ಅಗಲಿಕೆಯಿಂದ ಜನಪರ ಹೋರಾಟದ ದನಿ ಬಡವಾಗಿದೆ.
⇒ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಹಂಚಿಕೆ ಮಾಡಿರುವ ನಿವೇಶನಗಳನ್ನು ಮುಡಾ ಹಿಂದಕ್ಕೆ ಪಡೆಯಲಿ’ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿರುವುದು (ಪ್ರ.ವಾ., ಆ. 6) ಸರಿಯಲ್ಲ. ಲೌಕಿಕ ಜೀವನದಲ್ಲಿ ಆಸಕ್ತಿ ತಾಳದೆ, ದೀಕ್ಷೆ ಪಡೆದು ಭಕ್ತರನ್ನು
ಆಧ್ಯಾತ್ಮಿಕತೆಯಲ್ಲಿ ಮುನ್ನಡೆಸುತ್ತ ಜನಸೇವೆ ಮಾಡಲು ತಮ್ಮನ್ನು ಪ್ರಾಮಾಣಿಕವಾಗಿ ಅರ್ಪಿಸಿಕೊಂಡವರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಖಂಡನೀಯ.
ತಮ್ಮ ಧ್ಯೇಯ ಮತ್ತು ನಿಲುವನ್ನು ಆಧ್ಯಾತ್ಮಿಕತೆಯಲ್ಲಿ ಐಕ್ಯಗೊಳಿಸಿ ತಮ್ಮ ಘನತೆ, ಗೌರವವನ್ನು ಕಾಯ್ದುಕೊಳ್ಳುವುದು ಸೂಕ್ತ. ತಾವು ನಿರ್ವಹಿಸುತ್ತಿರುವ ಮಠದಲ್ಲಿ ಭಕ್ತರ ಸೇವೆಗೆ ಸಂಬಂಧಪಟ್ಟ ಸಮಸ್ಯೆಗಳೇನಾದರೂ ಇದ್ದಲ್ಲಿ ಅವುಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕೇ ವಿನಾ ತಮಗೆ ಸಂಬಂಧವಿಲ್ಲದ ವಿಚಾರಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡುವುದು ಸ್ವಾಮೀಜಿಗಳ ಕೆಲಸವಲ್ಲ.⇒
⇒ಎಲ್.ಚಿನ್ನಪ್ಪ, ಬೆಂಗಳೂರು
ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರ ಬರುವಿಕೆಗೆ ಅಥವಾ ಸತ್ಯಾಗ್ರಹ, ಧರಣಿಗಳಿಗೆ ಜನಪದ ಕಲಾವಿದರನ್ನು ಕರೆದು ಅವರ ಕಲೆಯನ್ನು ಅವಮಾನಿಸುವಂತಹ ಪ್ರವೃತ್ತಿ ಹೆಚ್ಚುತ್ತಿರುವುದರ ಬಗ್ಗೆ ಗಿರಿಜಾ ವೀರಪ್ಪ ಅವರು ಪ್ರಶ್ನಿಸಿರುವುದು (ವಾ.ವಾ., ಆ. 7) ಸರಿಯಾಗಿದೆ. ಈ ಸಂದರ್ಭದಲ್ಲಿ, ಸಾಹಿತಿ ಶಿವರಾಮ ಕಾರಂತರ ಮಾತುಗಳನ್ನು ಉದ್ಧರಿಸುವುದು ಸೂಕ್ತವೆನಿಸುತ್ತದೆ.
ಕಾರಂತರು ತಮ್ಮನ್ನು ಉಡುಪಿಯ ಉತ್ಸವಕ್ಕೆ ಆಹ್ವಾನಿಸಿದ ಸಂದರ್ಭವನ್ನು ಪ್ರಸ್ತಾಪಿಸುತ್ತಾ, ‘ಉಡುಪಿಯ ಉತ್ಸವಕ್ಕೆ ನನ್ನನ್ನು ಕರೆತರುವ ಹೊತ್ತಿನಲ್ಲಿ ನಾನು ಕಂಡ ಒಂದು ನೋಟ ಮಾತ್ರ ಆ ಕ್ಷಣದಲ್ಲೂ ಮತ್ತು ಇಂದಿನ ತನಕವೂ ಒಂದು ನೋವನ್ನು ಉಳಿಸಿದೆ. ಆ ದಿನ ನನ್ನ ಸ್ವಾಗತಕ್ಕೆಂದು ಕಾಲೇಜಿನ ಮಹಾದ್ವಾರದಿಂದ ಸಭಾಂಗಣದ ವೇದಿಕೆಯ ತನಕವೂ ಎರಡು ಸಾಲುಗಳಲ್ಲಿ ಯಕ್ಷಗಾನ ಕಲಾವಿದರನ್ನು ವೇಷಪೂರಿತವಾಗಿ ನಿಲ್ಲಿಸಿದ್ದರು. ಅದನ್ನು ಕಂಡು ನನಗೆ ತೀರಾ ನೋವಾಯಿತು. ಆ ಕಲೆಗಾಗಿ ನಾನು ಸಾಕಷ್ಟು ದುಡಿದಿದ್ದೇನೆ. ಅದು ನನಗಿಂತಲೂ ದೊಡ್ಡದು. ಯಾವುದೇ ಕಲೆಯಾದರೂ ಹಾಗೆಯೇ. ಯಕ್ಷಗಾನ ಕಲಾವಿದರನ್ನು ನನ್ನ ಆಗಮನದ ಕಾಲದಲ್ಲಿ ಆಚೀಚೆ ನಿಲ್ಲಿಸಿದ್ದು ಔಚಿತ್ಯ ಮೀರಿದ್ದು’ ಎಂದು ಹೇಳಿದ್ದರು. ಹಾಗಾಗಿ, ಜನಪದ ಕಲಾವಿದರಿರಬಹುದು, ಯಕ್ಷಗಾನ ಕಲಾವಿದರಿರಬಹುದು
ಅಥವಾ ಶಿಷ್ಟಕಲೆಯ ಕಲಾವಿದರಿರಬಹುದು- ಈ ಎಲ್ಲ ಕಲಾವಿದರನ್ನೂ ಸಮಾನವಾಗಿ ಗೌರವಿಸುವುದನ್ನು
ರೂಢಿಸಿಕೊಳ್ಳಬೇಕಿದೆ.
⇒ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು
ಬಾಂಗ್ಲಾದ ಮಧ್ಯಂತರ
ಸರ್ಕಾರದ ನೇತೃತ್ವಕ್ಕೆ
ನೊಬೆಲ್ ಶಾಂತಿ ಪ್ರಶಸ್ತಿ
ಪುರಸ್ಕೃತ ಯೂನಸ್ ಸಮ್ಮತಿ,
ತರಲಿ ಶಾಂತಿ, ನೆಮ್ಮದಿಯ
ಕೊನೆಗಾಣಲಿ ಹಿಂಸೆ, ಅರಾಜಕತೆ
ಹೆಚ್ಚಲಿ ಭಾರತದ ಜೊತೆಗಿನ
ಬಾಂಗ್ಲಾ ಬಾಂಧವ್ಯ.
-ಸಿ.ಪಿ.ಸಿದ್ಧಾಶ್ರಮ ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.