ಮಂಗಳವಾರ, ಮಾರ್ಚ್ 28, 2023
33 °C

ವಾಚಕರ ವಾಣಿ: ಲಂಚದ ದಂಧೆಗಿಲ್ಲ ಎಗ್ಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಚದ ದಂಧೆಗಿಲ್ಲ ಎಗ್ಗು

ಪೋಕ್ಸೊ ಪ್ರಕರಣವೊಂದರಲ್ಲಿ ಆರೋಪಿಗೆ ನೆರವಾಗುವ ವಾಗ್ದಾನ ನೀಡಿದ್ದರೆನ್ನಲಾದ ದಾವಣಗೆರೆಯ ಪೋಕ್ಸೊ ನ್ಯಾಯಾಲಯದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌, ಅದಕ್ಕಾಗಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದು
ಕುತೂಹಲಕಾರಿಯಾಗಿದೆ. ಚೆಕ್ ಅಥವಾ ಬ್ಯಾಂಕ್ ಮೂಲಕ ಲಂಚದ ಹಣದ ವ್ಯವಹಾರ ನಡೆದ ಉನ್ನತ ರಾಜಕೀಯ ವಲಯದ ಕೆಲವು ಪ್ರಕರಣಗಳನ್ನು ಹಿಂದೆ ನೋಡಿದ್ದೇವೆ. ಅವು ಅಲ್ಲಲ್ಲೇ ನಿಂತುಹೋದವು. ಅಂಥ ವ್ಯವಹಾರ ಈಗ ಅಧಿಕಾರಿ ವಲಯಕ್ಕೂ ವಿಸ್ತರಿಸಿದಂತೆ ಕಂಡುಬರುತ್ತಿದೆ. ಸರ್ಕಾರದ ಒಂದು ಇಲಾಖೆಯಲ್ಲಿ ಮೇಲ್ದರ್ಜೆ
ಅಧಿಕಾರಿಯಾದಿಯಾಗಿ ಕೆಲವರು ಫೋನ್ ಪೇ ಮೂಲಕ ಹಣ ಪಡೆಯುತ್ತಿದ್ದು, ಈಗ ಎಲ್ಲವೂ ರಾಜಾರೋಷವಾಗಿ ನಡೆಯುತ್ತಿವೆ ಎಂದು ನನ್ನ ಆಪ್ತರೊಬ್ಬರು ತಿಳಿಸಿದರು.

ಹೆಣ್ಣುಮಕ್ಕಳಿಗೆ ಹೆಚ್ಚಿನ ಸಂರಕ್ಷಣೆ ಒದಗಿಸಲು ಜಾರಿಗೆ ತಂದ ಪೋಕ್ಸೊ ಕಾಯ್ದೆ ಪ್ರಕರಣದ ಆರೋಪಿಗೆ ಸಹಾಯ ಮಾಡಲು ಹೋಗಿ ಮಹಿಳಾ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಖುದ್ದು ಆರೋಪಿಯಾಗಿ ನಿಂತಿರುವುದಕ್ಕೆ ಏನನ್ನುವುದು? ಸ್ತ್ರೀ ಯಾವುದರಲ್ಲೂ ಪುರುಷರಿಗಿಂತ ಹಿಂದೆ ಇಲ್ಲ ಅನ್ನುವುದೇ? ಲಂಚದ ಮುಂಗಡ ಹಣ ಪಡೆದು ಉಳಿದ ಹಣದ ಖಾತರಿಗಾಗಿ ಸಹಿ ಮಾಡಿದ ಖಾಲಿ ಚೆಕ್ ಪಡೆದಿದ್ದ ಅವರು, ಹಣ ಬಾರದಿದ್ದರೆ ಅದನ್ನು ನಗದೀಕರಿಸಲು
ಮುಂದಾಗುತ್ತಿದ್ದರೇ ಅಥವಾ ಆಗಲೂ ಹಣ ಬಾರದಿದ್ದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸುತ್ತಿದ್ದರೇ ಎಂಬ ಜಿಜ್ಞಾಸೆ ಉಂಟಾಗುತ್ತದೆ. ಒಂದು ವೇಳೆ ಹಾಗೆ ಮಾಡಿದ್ದರೆ ಅಥವಾ ಈಗಲೂ ಅವರು ಆರೋಪಿಯಾಗಿ ನ್ಯಾಯಾಲಯದಲ್ಲಿ ನಿಂತಾಗ ನಡೆಯಬಹುದಾದ ವಾದ, ಪ್ರತಿವಾದದ ಸ್ವರೂಪ ಹೇಗಿರಬಹುದು ಎಂಬುದು ಬಹಳ ಆಸಕ್ತಿಕರವಾಗಿ ಕಂಡುಬರುತ್ತದೆ.

⇒ವೆಂಕಟೇಶ ಮಾಚಕನೂರ, ಧಾರವಾಡ

‘ದಂತಭಾಗ್ಯ’ ಯೋಜನೆ ತಿಳಿದಿದೆಯೇ?

ವಯಸ್ಸಾದ ಬಡವರಿಗಾಗಿ ಹಲ್ಲಿನ ಸೆಟ್ ಕೊಡುವ ಯೋಜನೆಯೊಂದು ಕರ್ನಾಟಕ ಸರ್ಕಾರದಲ್ಲಿದೆ. ಈ ‘ದಂತಭಾಗ್ಯ’ ಯೋಜನೆ ಜಾರಿಯಾಗಿ ಸುಮಾರು ವರ್ಷಗಳೇ ಕಳೆದುಹೋಗಿವೆ. ಆದರೂ ಈ ಸೌಲಭ್ಯ ಜಿಲ್ಲಾ
ಆಸ್ಪತ್ರೆಗಳಲ್ಲಿಯೇ ಸರಿಯಾಗಿ ದೊರೆಯದಿರುವುದು ಶೋಚನೀಯ ಸಂಗತಿ.

ವಿಜಯಪುರ ಆಸ್ಪತ್ರೆಯಲ್ಲಿ ದಂತಭಾಗ್ಯ ಯೋಜನೆ ಪಡೆಯಲು ಹೋದಾಗ ತಿಳಿದ ಸಂಗತಿ ಇದು. ಈಗಾಗಲೇ ನೂರು ಜನ ತಮ್ಮ ಹೆಸರನ್ನು ಅಲ್ಲಿ ನೋಂದಾಯಿಸಿದ್ದಾರಂತೆ. ಹೊಸಬರಿಗೆ ಆ ಸೇವೆ ದೊರೆಯಲು ಆರು ತಿಂಗಳು ಕಾಯಬೇಕಂತೆ. ಹಲ್ಲಿನ ಸೆಟ್ ಸರಿಯಾಗಿ ಕೂಡುವುದೋ ಇಲ್ಲವೋ ಹೇಳಲಾಗದು. ಹಣ ಕೊಟ್ಟು ಖಾಸಗಿ
ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳುವುದು ಒಳ್ಳೆಯದು ಎಂಬ ಪುಕ್ಕಟೆ ಸಲಹೆ ಬೇರೆ. ಇದೆಂಥ ದಂತಭಾಗ್ಯ? ಸರ್ಕಾರ ಬರೀ ಪ್ರಚಾರಕ್ಕಾಗಿ ಇಂಥ ಯೋಜನೆಗಳನ್ನು ಪ್ರಕಟಿಸುವುದನ್ನು ನಿಲ್ಲಿಸಲಿ.

⇒ಸುಭಾಸ ಯಾದವಾಡ, ವಿಜಯಪುರ

ಹತ್ತಿ ಕೂಳೆ ಸುಡುವ ಮುನ್ನ...

ಕಿತ್ತೂರು ಕರ್ನಾಟಕದ ಬಹುತೇಕ ಭಾಗದಲ್ಲಿ ಇದೀಗ ಹತ್ತಿ ಬೆಳೆಯುವ ಅವಧಿ ಮುಗಿದಿದ್ದು, ಇನ್ನೇನು ಹೊಲವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತದೆ. ಪಂಜಾಬ್, ಹರಿಯಾಣದಲ್ಲಿ ಭತ್ತದ ಕೂಳೆ ಸುಡುವಂತೆ ನಮ್ಮಲ್ಲಿಯೂ ಹತ್ತಿಯ ಕಟ್ಟಿಗೆಯನ್ನು ಒಂದೆಡೆ ಕೂಡಿಸಿ ಹೆಚ್ಚಿನ ಪ್ರಮಾಣದಲ್ಲಿ ಸುಡಲಾಗುತ್ತದೆ. ಇದಕ್ಕೆ ಜನರು ಪ್ಲಾಸ್ಟಿಕ್ ಹಾಳೆ, ಬಾಟಲಿ, ಪೇಪರ್ ಬಳಸುತ್ತಾರೆ. ಇದರಿಂದ ಆಳೆತ್ತರದ ಹೊಗೆ ಗಾಳಿಯನ್ನು ಸೇರುತ್ತದೆ. ಪಂಚಾಯಿತಿಗಳಿಂದ ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಕಟ್ಟಿಗೆಯನ್ನು ಸುಡುವ ಬದಲು ಪರ್ಯಾಯ ಮಾರ್ಗವನ್ನು ರೈತರು ಕಂಡುಕೊಳ್ಳಬೇಕು.

⇒ಬಸನಗೌಡ ಪಾಟೀಲ, ಯರಗುಪ್ಪಿ

ಶ್ರೀಗಳು ಆಗಲಿ ಇನ್ನಷ್ಟು ಪ್ರಜಾಪ್ರಭುತ್ವವಾದಿ

‘ಬ್ರಾಹ್ಮಣರೇಕೆ ಸಿ.ಎಂ. ಆಗಬಾರದು?’ ಎಂದು ಕೇಳಿರುವ ಪೇಜಾವರ ಶ್ರೀಗಳು, ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಒಂದು ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂದಿದ್ದಾರೆ (ಪ್ರ.ವಾ., ಫೆ. 7). ಸ್ವಾಮೀಜಿ ಹೇಳಿಕೆಗಳು
ಪ್ರಜಾಪ್ರಭುತ್ವದ ಪರಿಧಿಯಲ್ಲೇ ಇವೆ. ಹಾಗೆ ನೋಡಿದರೆ ಈ ದೇಶವನ್ನು ಬಹಳ ಹಿಂದಿನಿಂದಲೂ ಬ್ರಾಹ್ಮಣರೇ ಆಳಿದ್ದಾರೆ (ರಾಜನ ಮಂತ್ರಿಯಾಗಿ), ಈಗಲೂ ಆಳುತ್ತಿದ್ದಾರೆ. ಬ್ರಾಹ್ಮಣರು ಮುಖ್ಯಮಂತ್ರಿ ಆಗುವುದರಲ್ಲಿ ಯಾರಿಗೂ ಯಾವುದೇ ಆಕ್ಷೇಪವಿಲ್ಲ. ಈ ಮೂಲಕ ಬ್ರಾಹ್ಮಣ ಸಮಾಜಕ್ಕೆ ಬೆಂಬಲ ನೀಡಿರುವ ಶ್ರೀಗಳು, ತಾವು ಅಪ್ಪಟ
ಪ್ರಜಾಪ್ರಭುತ್ವವಾದಿ ಎಂಬುದನ್ನು ತೋರಿಸಿದ್ದಾರೆ.

ಇದೇ ಮಾದರಿಯಲ್ಲಿ ದಲಿತರೇಕೆ ಪೂಜಾರಿಗಳಾಗಬಾರದು ಎಂಬ ಪ್ರಶ್ನೆಯನ್ನು ಸಮಾಜದ ಮುಂದಿಟ್ಟು, ಅವರಿಗೆ ಅಂಥದೊಂದು ಅವಕಾಶ ದೊರಕಿಸಿಕೊಡಲು ಪ್ರಯತ್ನ ಮಾಡಲಿ. ಜೊತೆಗೆ, ಎಂದೋ ಯಾರೋ ಒಬ್ಬ ಮುಸ್ಲಿಂ ವ್ಯಕ್ತಿ ಮಾಡಿದ ತಪ್ಪಿಗೆ, ಈಗ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂಬ ಸಂದೇಶವನ್ನೂ ನೀಡಿ ಹಿಂದೂ, ಮುಸ್ಲಿಂ ಸಮುದಾಯದ ನಡುವೆ ನಿಂತು ಎಲ್ಲರನ್ನೂ ಒಟ್ಟೊಟ್ಟಿಗೆ ಮುನ್ನಡೆಸುವ ಪ್ರಯತ್ನ ಮಾಡಲಿ.

⇒ತಾ.ಸಿ.ತಿಮ್ಮಯ್ಯ, ಬೆಂಗಳೂರು

ಅನ್ಯಾಯದ ವಿರುದ್ಧ ದನಿ ಎತ್ತಿದ ಮಾದರಿ ನಡೆ

ಮಡಿಕೇರಿಯ ಡಾ. ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಮಹಿಳೆಯೊಬ್ಬರು ಪಡೆದಿದ್ದ ಸಾಲದ ಸಹಾಯಧನ ಮಂಜೂರಿಗಾಗಿ ಮೂವರು ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ
ಬಿದ್ದಿರುವುದನ್ನು ತಿಳಿದು ಒಂದೆಡೆ ಖುಷಿಯಾದರೆ, ಇನ್ನೊಂದೆಡೆ ಬೇಸರವಾಯಿತು. ಭ್ರಷ್ಟಾಚಾರ ನಿಗ್ರಹಿಸಲು ಎಷ್ಟೆಲ್ಲ ಕಾನೂನುಗಳನ್ನೂ ತಂದರೂ ಈ ಪಿಡುಗು ನಿಲ್ಲದಿರುವುದು ನೋವಿನ ಸಂಗತಿ. ಹಾಗೆಯೇ ಆ ಮಹಿಳೆ ತಮಗಾಗುತ್ತಿದ್ದ
ಅನ್ಯಾಯದ ವಿರುದ್ಧ ದನಿ ಎತ್ತಿದ್ದು ಖುಷಿ ತಂದಿತು. ತಮ್ಮ ಅಗತ್ಯಗಳಿಗೆ ಹಣ ಇಲ್ಲದ ಜನಸಾಮಾನ್ಯರು ಸಾಲ ಪಡೆಯುತ್ತಾರೆ. ಹೀಗಿರುವಾಗ, ಅದಕ್ಕೂ ಲಂಚ ಕೇಳಿದರೆ ಅವರು ಎಲ್ಲಿಂದ ತರಬೇಕು?

ಪೂಜಾ ಎಸ್., ಕಲಬುರಗಿ

 

ಕೋರಿಕೆ...
ಗುಬ್ಬಿಯಿಂದ ಹಾರಲಿವೆಯಂತೆ
ವರ್ಷಕ್ಕೆ 30 ಹೆಲಿಕಾಪ್ಟರ್
(ಪ್ರ.ವಾ., ಫೆ. 6).
ಈ ಹಾರಾಟದಿಂದ
ಗುಬ್ಬಿಗಳು ಹಾರಲು
ತೊಂದರೆ ಆಗದಿರಲಿ!
ಈಗಾಗಲೇ ಪುಟ್ಟ ಗುಬ್ಬಿಗಳ
ಸಂತತಿ ಕ್ಷೀಣಿಸುತ್ತಿದೆ.
ನಗರ ಗುರುದೇವ್ ಭಂಡಾರ್ಕರ್
ಹೊಸನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು