ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ತಪ್ಪದಿರಿ ಚಾನೆಲ್‌ ಗ್ರಾಹಕರೇ...

Last Updated 21 ಫೆಬ್ರುವರಿ 2019, 9:37 IST
ಅಕ್ಷರ ಗಾತ್ರ

ಟಿ.ವಿ. ಚಾನೆಲ್ ಗ್ರಾಹಕರಿಗಾಗುತ್ತಿರುವ ಆರ್ಥಿಕ ಹೊರೆ ಹಾಗೂ ಅನಗತ್ಯ ಚಾನೆಲ್‍ಗಳ ಕಿರಿಕಿರಿ ತಪ್ಪಿಸಲು ‘ಟ್ರಾಯ್’ ಸಂಸ್ಥೆ ಹೊಸ ನಿಯಮ ಜಾರಿಗೊಳಿಸಿದೆ. ಜನವರಿ ಕೊನೆಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದ್ದರೂ ಕೇಬಲ್ ಆಪರೇಟರ್‌ಗಳ ಅಸಹಕಾರದಿಂದ ಇನ್ನೂ ಗ್ರಾಹಕರಿಗೆ ಇದರ ಪೂರ್ಣ ಲಾಭ ದೊರೆತಿಲ್ಲ. ಮಾರ್ಚ್ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕೆಂದು ಟ್ರಾಯ್ ಸೂಚಿಸಿದೆ.

ಈ ಹೊಸ ನಿಯಮದ ಅನುಸಾರ, ಗ್ರಾಹಕನೊಬ್ಬ ತನಗೆ ಅಗತ್ಯವಿರುವ ಚಾನೆಲ್‍ಗಳಿಗೆ ಮಾತ್ರ ಹಣ ಪಾವತಿಸಿದರೆ ಸಾಕು. ಈ ಹಿಂದೆ ಗ್ರಾಹಕ ತನಗೆ ಅನಗತ್ಯವಾದ, ನೋಡದ ಚಾನೆಲ್‍ಗಳಿಗೂ ಸೇರಿ ತಿಂಗಳಿಗೆ ₹300ಕ್ಕಿಂತ ಹೆಚ್ಚು ಹಣ ಪಾವತಿಸಬೇಕಾಗಿತ್ತು.

ಹೊಸ ನಿಯಮದ ಅನುಸಾರ ₹130ಕ್ಕೆ ಕನಿಷ್ಠ 100 ಚಾನೆಲ್‌ಗಳನ್ನು ಪಡೆದುಕೊಳ್ಳುವ ಅವಕಾಶ ಒದಗಿದೆ. ಈ ಹಣಕ್ಕೆ ₹24 ಜಿಎಸ್‌ಟಿ ಸೇರಿದರೆ ಒಟ್ಟು ₹154 ಮಾತ್ರ ಪಾವತಿಸಬೇಕು.

₹130ರಲ್ಲಿ 100 ಫ್ರೀ ಟು ಏರ್ ಚಾನೆಲ್‍ಗಳು, ಅಂದರೆ ಗ್ರಾಹಕರಿಗೆ ಉಚಿತವಾಗಿ ಲಭ್ಯವಿರುವ ಚಾನೆಲ್‍ಗಳು ಅಥವಾ ₹130ಕ್ಕೆ ಆಗುವಷ್ಟು ಮೊತ್ತದ ಯಾವುದೇ ಪೇ ಚಾನೆಲ್‍ಗಳು ಅಥವಾ ಪೇ ಚಾನೆಲ್ ಗುಚ್ಛಗಳೂ ಆಗಬಹುದು. ಅಂದರೆ, ಗ್ರಾಹಕ ಹೀಗೆ ಆಯ್ಕೆ ಮಾಡಿಕೊಂಡ ಪೇ ಚಾನೆಲ್‍ಗಳ ಒಟ್ಟು ಮೊತ್ತ ₹130ರ ಒಳಗಿದ್ದರೆ ಅವನ್ನು ಹೆಚ್ಚುವರಿ ಮೊತ್ತ ಪಾವತಿಸದೆ ಇದೇ ಮೊತ್ತದೊಳಗೆ ವೀಕ್ಷಿಸಬಹುದು.

ಈ ಆಯ್ಕೆಯ ಬಳಿಕ ಉಳಿದ ಸಂಖ್ಯೆಯಷ್ಟು ಫ್ರೀ ಚಾನೆಲ್‍ಗಳನ್ನು ಆಪರೇಟರ್‌ಗಳು ಗ್ರಾಹಕರಿಗೆ ನೀಡಬೇಕು. ಉದಾಹರಣೆಗೆ, 15 ಪೇ ಚಾನೆಲ್‍ಗಳನ್ನು ಆಯ್ಕೆ ಮಾಡಿಕೊಂಡಿದ್ದರೆ 85 ಫ್ರೀ ಚಾನೆಲ್‍ಗಳು ಅದರಲ್ಲೇ ದೊರೆಯುತ್ತವೆ. ನಿಜವಾಗಿಯೂ ಗ್ರಾಹಕರಿಗೆ ಅನುಕೂಲವಾದ ಈ ಹೊಸ ನಿಯಮವನ್ನು ಕೇಬಲ್ ಆಪರೇಟರ್‌ಗಳು ಗ್ರಾಹಕರಿಂದ ಮುಚ್ಚಿಟ್ಟು, ₹130ಕ್ಕೆ ಕೇವಲ ಫ್ರೀ ಚಾನೆಲ್‍ಗಳು ದೊರಕುತ್ತವೆ, ಮನರಂಜನೆಯ ಪೇ ಚಾನೆಲ್‍ಗಳು ಬೇಕಾದರೆ ಪ್ರತ್ಯೇಕವಾಗಿಯೇ ಹಣ ಪಾವತಿಸಬೇಕು ಎನ್ನುತ್ತಾ ದಾರಿ ತಪ್ಪಿಸುತ್ತಿದ್ದಾರೆ. ಆ ಮೂಲಕ ಗ್ರಾಹಕರಲ್ಲಿ ಟ್ರಾಯ್‍ ನಿಯಮದ ವಿರುದ್ಧ ಅಸಮಾಧಾನ ಹುಟ್ಟುವಂತೆ ಮಾಡುತ್ತಿದ್ದಾರೆ.

₹130 + 24 = ₹154 ಹೊರತಾಗಿ ಕೇಬಲ್ ಆಪರೇಟರ್‌ಗಳು ಪ್ರತ್ಯೇಕವಾದ ಸರ್ವಿಸ್ ಚಾರ್ಜನ್ನು ವಸೂಲಿ ಮಾಡುವಂತಿಲ್ಲವಾದರೂ ಕೆಲವೆಡೆ ₹25-30 ಸರ್ವಿಸ್ ಚಾರ್ಜ್ ಹೊರೆಯನ್ನು ಹಾಕುತ್ತಿದ್ದಾರೆ. ಈ ಬಗ್ಗೆ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು, ಪ್ರಶ್ನಿಸಬೇಕು. ಸ್ಥಳೀಯ ಗ್ರಾಹಕ ಸಂಘಗಳೂ ಗ್ರಾಹಕರಲ್ಲಿ ಅರಿವು ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT