ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿಯಾಗದ ಉಪದೇಶ

ಅಕ್ಷರ ಗಾತ್ರ

ಬಿಜೆಪಿ ಹಾಗೂ ಕಾಂಗ್ರೆಸ್‌ನ ದೂತರು ದೆಹಲಿಯಿಂದ ಬೆಂಗಳೂರಿಗೆ ಬಂದು ಉಪದೇಶ ಉದುರಿಸಿದ್ದಾರೆ. ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ‘ಸರ್ಕಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಬೇಕು’ ಎಂದು ಮುಖ್ಯಮಂತ್ರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಉಪದೇಶವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಅನ್ವಯವಾಗದೇ? ನೋಟು ರದ್ದತಿ, ಪೌರತ್ವ ಮಸೂದೆ, ಕೃಷಿ ಕಾಯ್ದೆಯಂತಹ ಪ್ರಮುಖ ನಿರ್ಧಾರಗಳ ಬಗ್ಗೆ ಸಂಪುಟದ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳೊಂದಿಗೆ ಅವರು ಸರಿಯಾಗಿ ಚರ್ಚಿಸಿದ್ದರೇ? ಇವು ಏಕಪಕ್ಷೀಯ ನಿರ್ಧಾರಗಳಲ್ಲವೇ? ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷದ ದಿಗ್ಗಜರ ವಿಶ್ವಾಸ ಗಳಿಸಬೇಕಲ್ಲವೇ?

‘ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಸಿದ್ಧಾಂತಗಳಿಗೆ ಗೌರವ ನೀಡುವವರನ್ನು ಆರಿಸಿ, ಗೆಲ್ಲಿಸಬೇಕು, ಗೆದ್ದವರು ಪಕ್ಷದ ಹಿರಿಯ ನಾಯಕರೊಡನೆ ಬೆರೆತು ಕಲಿಯುವಂತಾಗಬೇಕು’ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಉಪದೇಶಿಸಿದ್ದಾರೆ. ಈ ಉಪದೇಶವು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಅನ್ವಯವಾಗುವುದಿಲ್ಲವೇ? ಪಕ್ಷದ ಪ್ರಮುಖ ಮುಖಂಡರು ಪತ್ರ ಬರೆದು ‘ಪಕ್ಷವನ್ನು ಬಲಪಡಿಸಲು, ದೌರ್ಬಲ್ಯಗಳನ್ನು ಗುರುತಿಸಲು ಸಭೆ ಕರೆಯಿರಿ’ ಎಂದರೂ ಸಭೆ ಕರೆದಿಲ್ಲ. ಪಕ್ಷ ಇವರ ಹಿಡಿತದಲ್ಲಿದೆ ಎನ್ನುವುದಕ್ಕೆ ಮಿಕ್ಕಾವ ಪುರಾವೆ ಬೇಕು? ಜಾಣ ಕಿವುಡಾಗುವುದು ನಾಯಕತ್ವದ ಲಕ್ಷಣವೇ? ಪ್ರಮುಖ ನಾಯಕರು ಸ್ವತಃ ಮಾದರಿಯಾಗುವ ಬದಲು ರಾಜ್ಯದ ನಾಯಕರಿಗೆ ಉಪದೇಶ ಮಾಡುವುದು ಅಪಹಾಸ್ಯಕರ.

- ರಮೇಶ್ ಉಪಾಧ್ಯಾಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT