ಭಾನುವಾರ, ಸೆಪ್ಟೆಂಬರ್ 19, 2021
23 °C

ವಾಚಕರ ವಾಣಿ | ಪರಿಸರಸ್ನೇಹಿ ಗುಜರಿ ನೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿರುವ ‘ಮೋಟಾರು ವಾಹನ ಗುಜರಿ’ ನೀತಿ ಪರಿಸರಸ್ನೇಹಿ ಹಾಗೂ ಗ್ರಾಹಕಸ್ನೇಹಿಯಾಗಿದೆ. ಈ ನೀತಿಯಂತೆ, 15 ವರ್ಷ ತುಂಬಿದ ಸರ್ಕಾರದ ನಾಲ್ಕು ಚಕ್ರ ವಾಹನಗಳು ಗುಜರಿ ಸೇರುತ್ತವೆ. 20 ವರ್ಷ ದಾಟಿದ ಖಾಸಗಿ ಹಾಗೂ 15 ವರ್ಷ ದಾಟಿದ ವಾಣಿಜ್ಯ ವಾಹನಗಳನ್ನು ಪರೀಕ್ಷೆಗೆ ಒಳಪಡಿಸಿ ಅರ್ಹತಾಪತ್ರ ಪಡೆಯಬೇಕಾಗುತ್ತದೆ. ಇಲ್ಲವಾದಲ್ಲಿ ಅಂತಹ ವಾಹನಗಳ ನೋಂದಣಿ ತನ್ನಿಂದತಾನೇ ರದ್ದಾಗುವುದರಿಂದ ಗತ್ಯಂತರವಿಲ್ಲದೆ ಗುಜರಿ ಸೇರುತ್ತವೆ.

ಅವಧಿ ಮೀರಿದ ತಮ್ಮ ವಾಹನವನ್ನು ಗುಜರಿಗೆ ನೀಡುವ ವಾಹನ ಮಾಲೀಕರಿಗೆ ಹೊಸ ವಾಹನದ ಮೌಲ್ಯದಲ್ಲಿ ರಿಯಾಯಿತಿ, ವಾಹನ ನೋಂದಣಿಯಲ್ಲಿ ರಿಯಾಯಿತಿ ಹಾಗೂ ರಸ್ತೆ ತೆರಿಗೆಯಲ್ಲೂ ಶೇ 25ರಷ್ಟು ಕಡಿಮೆಯಾಗುವುದರಿಂದ ಅಷ್ಟೇನೂ ಆರ್ಥಿಕ ಹೊಡೆತ ಬೀಳಲಾರದು. ಹಳೆ ವಾಹನದ ನಿರ್ವಹಣೆ ವೆಚ್ಚ ಸಹಜವಾಗಿಯೇ ಹೆಚ್ಚಾಗಿರುತ್ತದೆ ಹಾಗೂ ಇಂಧನ ಕ್ಷಮತೆ (ಮೈಲೇಜ್) ಕಡಿಮೆಯಾಗಿರುತ್ತದೆ ಎನ್ನುವುದನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು.

‘ಮೋಟಾರು ವಾಹನ ಗುಜರಿ’ ನೀತಿಯಿಂದಾಗಿ ಪರಿಸರ ಮಾಲಿನ್ಯ ಕಡಿಮೆಯಾಗುವುದರಲ್ಲಿ ಸಂಶಯವೇ ಇಲ್ಲ. ವಿದ್ಯುತ್ ಚಾಲಿತ ವಾಹನಗಳ ಖರೀದಿಯನ್ನು ಪ್ರೋತ್ಸಾಹಿಸಿದಂತಾಗಿ ಹೊಸ ಉದ್ಯಮಗಳಿಗೆ ಅವಕಾಶ ಮಾಡಿ ಕೊಟ್ಟಂತಾಗುತ್ತದೆ. ಕಚ್ಚಾ ಸಾಮಾಗ್ರಿ ಆಮದು ಗಣನೀಯವಾಗಿ ಕಡಿಮೆಯಾಗುತ್ತದೆ. ಹೊಸದಾಗಿ ಗುಜರಿ ಉದ್ಯಮಗಳು ಸ್ಥಾಪನೆಗೊಳ್ಳುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಎಲ್ಲ ಅನುಕೂಲಗಳಿಂದಾಗಿ ಹೊಸ ನೀತಿ ಸ್ವಾಗತಾರ್ಹವಾಗಿದೆ. 

   -   ಜಿ.ನಾಗೇಂದ್ರ, ಸಂಡೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.