ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 27 ಡಿಸೆಂಬರ್ 2023, 21:55 IST
Last Updated 27 ಡಿಸೆಂಬರ್ 2023, 21:55 IST
ಅಕ್ಷರ ಗಾತ್ರ

ಯತ್ನಾಳ ಆರೋಪ: ಸೂಕ್ತ ತನಿಖೆಯಾಗಲಿ

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕೋವಿಡ್ ಹೆಸರಿನಲ್ಲಿ ₹ 40 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಆರೋಪಿಸಿರುವು ದಾಗಿ ವರದಿಯಾಗಿದೆ (ಪ್ರ.ವಾ., ಡಿ. 27). ಈ ರೀತಿ ಅಕ್ರಮದ ಆಪಾದನೆ ಹೊತ್ತವರು ಪ್ರಾಮಾಣಿಕರಾಗಿದ್ದರೆ ಹೇಳಿಕೆದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದಲ್ಲವೇ? ತನಿಖಾ ಸಂಸ್ಥೆಗಳು ಸಹ ಸ್ವಯಂಪ್ರೇರಿತ ವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಬಹುದು. ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಹಿಂದೆ ಶೇ 40ರ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಸದ್ಯ ಆಡಳಿತ ನಡೆಸುತ್ತಿದೆ. ಯತ್ನಾಳ ಅವರು ತಮ್ಮ ಆರೋಪಕ್ಕೆ ಪೂರಕವಾಗಿ ದಾಖಲೆ ಒದಗಿಸಬೇಕೆಂದು ಕೇಳುವ ಬದಲು, ವ್ಯವಸ್ಥಿತ ತನಿಖೆ ನಡೆಸಿ ಭ್ರಷ್ಟರಿಗೆ ಶಿಕ್ಷೆ ಕೊಡಿಸಬಹು ದಲ್ಲವೇ? ಯತ್ನಾಳರು ನಿಜವಾಗಿಯೂ ಭ್ರಷ್ಟಾಚಾರ ವಿರೋಧಿಯಾಗಿದ್ದರೆ ಇಂತಹ ವಿಷಯವನ್ನು ಇಷ್ಟು ದಿನ ಮುಚ್ಚಿಟ್ಟಿದ್ದೇಕೆ? ಅಕ್ರಮದ ಬಗ್ಗೆ ಗೊತ್ತಿದ್ದರೂ ಅದನ್ನು ಮುಚ್ಚಿಡುವುದು ಸಹ ಕಾನೂನಿನಡಿ ಅಪರಾಧವಲ್ಲವೇ? 

–ಎಸ್.ನಾಗರಾಜ ನಾಗೂರ, ಬಾಗಲಕೋಟೆ

***

ಸ್ಥಳ ನಿಯುಕ್ತಿ: ವಿಳಂಬ ತರವಲ್ಲ

ಪರಿಚಿತರಾದ ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರು ಸುಮಾರು ಆರು ತಿಂಗಳಿನಿಂದ ಮನೆಯಲ್ಲಿಯೇ ಇದ್ದುದನ್ನು ಗಮನಿಸಿದ ನನಗೆ, ಬಹುಶಃ ಸರ್ಕಾರಿ ಉದ್ಯೋಗಿಗಳಿಗೆ ಲಭ್ಯವಿರುವ ರಜೆಗಳ ದುರ್ಬಳಕೆ ಆಗುತ್ತಿರ ಬಹುದೇನೋ ಅನ್ನಿಸಿತು. ಆದರೆ ಎಂದಿನಂತೆ ಲವಲವಿಕೆಯಿಲ್ಲದೆ ಉತ್ಸಾಹ ಕುಂದಿದ ಆಕೆಯ ಮುಖವನ್ನು ಗಮನಿಸಿದಾಗ, ಬಹುಶಃ ಯಾವುದೋ ತಪ್ಪಿಗಾಗಿ ಅಮಾನತಿಗೆ ಒಳಗಾಗಿರಬಹುದು ಅಂದುಕೊಂಡೆ. ಆದರೆ ಅವರ ಸನ್ನಡತೆ ಬಗ್ಗೆ ಅರಿವಿದ್ದರಿಂದ, ಅನ್ಯರ ತಪ್ಪಿನ ಹೊಣೆ ಇವರ ಮೇಲೆ ಬಂದಿರಬಹುದು ಅಂತಲೂ ಅನ್ನಿಸಿತು. ಆದರೆ ಕಾಲಾನಂತರದಲ್ಲಿ ತಿಳಿದ ವಾಸ್ತವ ಇದ್ಯಾವುದೂ ಆಗಿರಲಿಲ್ಲ. ಈಕೆ ಜಲಸಂಪನ್ಮೂಲ ಇಲಾಖೆಯಲ್ಲಿ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆರು ತಿಂಗಳ ಹಿಂದೆ ಬಡ್ತಿ ನೀಡಲಾಗಿತ್ತು. ಆದರೆ ಸ್ಥಳ ನಿಯುಕ್ತಿಗೊಳಿಸಿರಲಿಲ್ಲ. ಈ ರೀತಿಯ ಸಂಬಳರಹಿತ ಕಡ್ಡಾಯ ಕಾಯುವಿಕೆಯು ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಮಾಡುತ್ತದಲ್ಲದೆ ಅಧಿಕಾರಿಗಳ ಉತ್ಸಾಹವನ್ನೂ ಕುಗ್ಗಿಸುತ್ತದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿ, ಪ್ರಾಮಾಣಿಕ ಅಧಿಕಾರಿಗಳು ಸಹ ಅನಿವಾರ್ಯವಾಗಿ ಅಡ್ಡದಾರಿ ಹಿಡಿಯಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಮುಂದೆ ಒಂದು ದಿನ ಸ್ಥಳ ನಿಯುಕ್ತಿಗೊಳಿಸಿದಾಗ ಸರ್ಕಾರ ಬಾಕಿ ಸಂಬಳ ಪಾವತಿಸಬೇಕಾಗುತ್ತದೆ. ಇದರಿಂದ ಸರ್ಕಾರ ತನ್ನ ನೌಕರರಿಂದ ಕೆಲಸ ಪಡೆಯದೇ ಸಂಬಳ ನೀಡುವಂತಾಗಿ, ಪ್ರಜೆಗಳ ತೆರಿಗೆ ಹಣದ ದುರುಪಯೋಗ ಆದಂತಾಗುತ್ತದೆ.

ಇಂತಹ ಹಲವಾರು ಪ್ರಕರಣಗಳು ವಿವಿಧ ಇಲಾಖೆಗಳಲ್ಲಿ ಇರಬಹುದು. ಈ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂ ಸಚಿವರು ಗಮನಹರಿಸಬೇಕು. ಖಾತೆರಹಿತ ಸಚಿವ ಸ್ಥಾನ ಕೊಟ್ಟು ಖಾತೆ ಹಂಚಿಕೆ ಮಾಡಲು ದೀರ್ಘಕಾಲ ಕಾಯಿಸಿದರೆ ನಮ್ಮ ರಾಜಕಾರಣಿಗಳಿಗೆ ಹೇಗಾಗಬಹುದು?

–ಕೆ.ಎಂ.ನಾಗರಾಜು, ಮೈಸೂರು

***

ನಾಮಫಲಕ: ಗಡುವು ನೀಡಿ, ದಂಡ ವಿಧಿಸಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾಣಿಜ್ಯ ಸಂಸ್ಥೆಗಳ ಕಾಯ್ದೆ ಪ್ರಕಾರ, ಅಂಗಡಿ, ಹೋಟೆಲ್, ಕಂಪನಿ ಮತ್ತು ಇತರ ಎಲ್ಲ ಬಗೆಯ ವ್ಯಾಪಾರಿಗಳು ನಾಮಫಲಕದಲ್ಲಿ ಕನ್ನಡದಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. 2019ರಲ್ಲಿಯೇ ಬಿಬಿಎಂಪಿ ಆಯುಕ್ತರು ಈ ಸಂಬಂಧ ಆದೇಶ ಹೊರಡಿಸಿದ್ದರೂ ಅದು ಇನ್ನೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಕರ್ನಾಟಕದಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಕನ್ನಡದಲ್ಲಿ ನಾಮಫಲಕ ಬರೆಸದೆ, ಕನ್ನಡದ ಬಗ್ಗೆ ಅಸಡ್ಡೆ ತೋರುವುದು ಖಂಡನೀಯ.

ಬೆಂಗಳೂರು ಮಾತ್ರವಲ್ಲ ರಾಜ್ಯದ ಎಲ್ಲ ಕಡೆಯೂ ವ್ಯಾಪಾರ ವಹಿವಾಟು ನಡೆಸುವವರಿಗೆ ಕನ್ನಡದಲ್ಲಿ ನಾಮಫಲಕ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಎಲ್ಲಿಯೂ ಸರಿಯಾಗಿ ಅದು ಜಾರಿಗೆ ಬಂದಿಲ್ಲ. ಸರ್ಕಾರ ಇಂತಹವರಿಗೆ ಸಮಯದ ಗಡುವು ನೀಡಿ ಒಂದು ಅವಕಾಶ ನೀಡಬೇಕು. ಆಮೇಲೆ ಭಾರಿ ಮೊತ್ತದ ದಂಡ ವಿಧಿಸಲು ಮುಂದಾಗಬೇಕು.

–ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು

***

ದೇಶಕ್ಕೊಂದು ರಾಷ್ಟ್ರಭಾಷೆ ಪೂರಕ

ಹಿಂದಿ ಭಾಷೆಗೆ ಸಂಬಂಧಿಸಿದಂತೆ ಗೊಂದಲದ ಹೇಳಿಕೆ ಸಲ್ಲದು ಎಂಬ ನನ್ನ ಪತ್ರಕ್ಕೆ (ವಾ.ವಾ., ಡಿ. 22) ಗುರು ಜಗಳೂರು ಅವರು ‘ಹಿಂದಿಯಲ್ಲಿ ಹಿಂದುಳಿಯುವುದೇಕೆ?’ ಎಂಬ ಶಿರೋನಾಮೆಯಡಿ ಬರೆದ ಪತ್ರದಲ್ಲಿ
(ವಾ.ವಾ., ಡಿ. 25), ‘ಹಿಂದಿಯು ರಾಷ್ಟ್ರಭಾಷೆ ಹೌದೋ ಅಲ್ಲವೋ ಎಂಬ ವಾದಗಳ ನಡುವೆ ಹಿಂದಿ ಭಾಷೆಯನ್ನು ಕಲಿಯುವುದರಿಂದ ಆಗುವ ಅನುಕೂಲಗಳ ಬಗ್ಗೆ ನಾವು ಕುರುಡರಾಗಿದ್ದೇವೆ’ ಎಂದಿದ್ದಾರೆ. ಈ ಹೇಳಿಕೆ ಸಂಪೂರ್ಣವಾಗಿ ಒಪ್ಪುವಂತಹದ್ದು. ನಾನು ನನ್ನ 58ನೇ ವಯಸ್ಸಿನಲ್ಲಿ ಹಿಂದಿ ಭಾಷೆಯ ಪರೀಕ್ಷೆಗಳನ್ನು ಎದುರಿಸಿದ್ದೇನೆ ಮತ್ತು ಸಂಸ್ಕೃತದಲ್ಲಿ ಒಂದು ಪರೀಕ್ಷೆಯನ್ನು ಬರೆದಿದ್ದೇನೆ. ಎರಡರಲ್ಲೂ ಮೊದಲ ದರ್ಜೆಯಲ್ಲಿ ತೇರ್ಗಡೆಯಾಗಿದ್ದೇನೆ.

ಪ್ರಪಂಚದ ಬಹುತೇಕ ರಾಷ್ಟ್ರಗಳು ತಮ್ಮದೇ ಆದ ರಾಷ್ಟ್ರಭಾಷೆಯನ್ನು ಹೊಂದಿವೆ. ಭಾರತದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಆಡಳಿತ ಭಾಷೆಗಳಾಗಿದ್ದವು. ಭಾರತಕ್ಕೆ ರಾಷ್ಟ್ರಭಾಷೆ ಇಲ್ಲದ ಕಾರಣ, ಬ್ರಿಟಿಷರ ಕೊಡುಗೆಯಾದ ಇಂಗ್ಲಿಷ್‌ ಬದಲಿಗೆ ಬಹುಜನರ ಭಾಷೆಯಾಗಿರುವ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸಬೇಕೆಂದು, ಮೊದಲ ಹಿಂದಿ ಸಾಹಿತ್ಯ ಸಮ್ಮೇಳನದಲ್ಲಿ ಮಹಾತ್ಮ ಗಾಂಧಿ ಹೇಳಿದ್ದರು. ನೆಹರೂ ಪ್ರಧಾನಿಯಾಗಿದ್ದ ಕಾಲದಲ್ಲಿ ‘ಹಿಂದಿ ದಿವಸ್‌’ ಆಚರಣೆಯನ್ನು ಆರಂಭಿಸಲಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ ದಿಸೆಯಲ್ಲಿ ಆ ಭಾಷೆಯನ್ನು ಹಂತ ಹಂತವಾಗಿ ಕಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಹಿಂದಿ ಭಾಷಾ ಬೆಳವಣಿಗೆಗೆ ಶ್ರಮಿಸಿದವರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡುತ್ತಾ ಬರಲಾಯಿತು. ಸ್ವಾತಂತ್ರ್ಯ ಗಳಿಸಿದ ನಂತರ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷವೂ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿಸಲು ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ, ಕಾಂಗ್ರೆಸ್‌ ಪಕ್ಷವು ಕರ್ನಾಟಕದಲ್ಲಿ ಮಾತ್ರ ಹಿಂದಿ ಭಾಷೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ. ತಮಿಳು ಭಾಷಿಕರಂತೂ ಹಿಂದಿಯನ್ನು ಸ್ವೀಕರಿಸ
ದಿರಲು ದಶಕಗಳ ಹಿಂದೆಯೇ ನಿರ್ಧರಿಸಿದ್ದಾರೆ. ಯಾವುದೇ ದೇಶವಾಗಲಿ ತನ್ನದೇ ಆದ ರಾಷ್ಟ್ರಭಾಷೆಯನ್ನು ಹೊಂದಿರಬೇಕು ಮತ್ತು ಆ ಭಾಷೆಯು ದೇಶವನ್ನು ಒಗ್ಗೂಡಿಸಲು ಸಹಕಾರಿ ಆಗುವಂತಿರಬೇಕು.

_ಜಿ.ನಾಗೇಂದ್ರ ಕಾವೂರು, ಸಂಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT