ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ರಾಷ್ಟ್ರಪತಿ ಆಯ್ಕೆ: ಪೌರ ಸೇನಾನಿಯನ್ನು ಪರಿಗಣಿಸಿ

Last Updated 22 ಮೇ 2022, 18:17 IST
ಅಕ್ಷರ ಗಾತ್ರ

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರಾವಧಿ ಜುಲೈ 25ಕ್ಕೆ ಪೂರ್ಣಗೊಳ್ಳಲಿದೆ. ರಾಷ್ಟ್ರಪತಿ ಸೇರಿದಂತೆ ದೇಶದ ಎಲ್ಲ ಸಾಂವಿಧಾನಿಕ ಹುದ್ದೆಗಳಲ್ಲೂ (ನ್ಯಾಯಾಲಯವನ್ನು ಹೊರತುಪಡಿಸಿ) ರಾಜಕೀಯದ ನೆರಳು ಇರುವುದು ಸುಳ್ಳಲ್ಲ. ಇದು ಪಕ್ಷಾತೀತವಾಗಿ ನಡೆದುಬಂದಿದೆ. ಆದರೆ ಈ ಬಾರಿ ದೇಶದ ಪ್ರಥಮ ಪ್ರಜೆಯ ನೇಮಕದ ಸಂದರ್ಭದಲ್ಲಿ ‘ಪೌರ ಸೇನಾನಿ’ಯನ್ನು ಅಥವಾ ಅವರ ಹಿತಕ್ಕಾಗಿ ದುಡಿಯುವ ವ್ಯಕ್ತಿಯನ್ನು ಪರಿಗಣಿಸಿ ಹೊಸ ಇತಿಹಾಸವನ್ನು ಬರೆಯಬೇಕಾದ ಅಗತ್ಯ ಇದೆ.

ಮೇಲ್ನೋಟಕ್ಕೆ ಈ ಬೇಡಿಕೆ ಅತಿ ಆದರ್ಶದ್ದು ಅನಿಸಬಹುದು. ಆದರೆ ಅದು ಅಸಾಧ್ಯವಾದುದೇನೂ ಅಲ್ಲ. ದೇಶದ ನಗರ– ಪಟ್ಟಣ ಪ್ರದೇಶಗಳನ್ನು ಶುಚಿಯಾಗಿ ಇಡುವವರು ಇದೇ ಪೌರ ಕಾರ್ಮಿಕರು. ಅವರಿಲ್ಲದೇ ಇದ್ದರೆ ನಮ್ಮ ನಗರಗಳ ಪರಿಸ್ಥಿತಿಯನ್ನು ಊಹಿಸುವುದಕ್ಕೂ ಅಸಾಧ್ಯ. ಬಿಜೆಪಿ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ಸೇನಾನಿಗಳು ಪ್ರತಿಭಟನೆಗೆ ಇಳಿದಿದ್ದರು. ಆಗ ತ್ಯಾಜ್ಯ ವಿಲೇವಾರಿ ಕಾರ್ಯ ಅಸ್ತವ್ಯಸ್ತವಾಗಿ ಬೆಂಗಳೂರನ್ನು ‘ಗಾರ್ಬೇಜ್ ಸಿಟಿ’ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ಬಣ್ಣಿಸಿದ್ದವು. ಪೌರ ಸೇನಾನಿಗಳು ಇಲ್ಲದೇ ಇದ್ದರೆ ನಮ್ಮ ದಿನನಿತ್ಯದ ಬದುಕು ಅಸಹನೀಯವಾಗಿ ಬಿಡುತ್ತದೆ. ಆದರೆ ಸಮಾಜದ ಕೊಳೆ ತೊಳೆಯುವ ಈ ವರ್ಗಕ್ಕೆನಾವು ನಿಜವಾಗಿಯೂ ಏನಾದರೂ ಮಾಡಿದ್ದೇವೆಯೇ? ವೇತನ, ಭತ್ಯೆಯಂಥ ಸೌಲಭ್ಯಗಳನ್ನು ಹೊರತುಪಡಿಸಿಯೂ ಈ ವರ್ಗದ ಪ್ರತಿನಿಧಿಗಳಿಗೆ ಒಂದು ಗೌರವಯುತ ಸೇವೆ ಮಾಡುವ ಹೊಣೆಗಾರಿಕೆ ಎಲ್ಲ ರಾಜಕೀಯ ಪಕ್ಷಗಳಿಗೂ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ವಾರಾಣಸಿಯಲ್ಲಿ ಪೌರ ಸೇನಾನಿಯೊಬ್ಬರ ಪಾದವನ್ನು ತೊಳೆದು ಪೂಜೆ ಮಾಡಿದ್ದರು. ಆದರೆ ಈ ಕಷ್ಟಜೀವಿಗಳ ಸಂಕಷ್ಟ ತೊಳೆಯುವುದಕ್ಕೆ ನಿಜವಾದ ಪ್ರಯತ್ನಗಳು ಮಾತ್ರ ನಡೆಯಲಿಲ್ಲ. ದೇಶದ ಆರೋಗ್ಯ ಕಾಪಾಡುವ ಪೌರಸೇನಾನಿಗಳಿಗೆ ‘ಭಾರತರತ್ನ’ದಂಥ ಪ್ರಶಸ್ತಿ ನೀಡಿ ಆ ವರ್ಗದ ಜನರಲ್ಲಿ ಆತ್ಮವಿಶ್ವಾಸ ಹಾಗೂ ತಲೆಯೆತ್ತಿ ನಿಲ್ಲುವ ಚೈತನ್ಯ ನೀಡಬೇಕೆಂಬ ಬೇಡಿಕೆಯನ್ನೂ ಸರ್ಕಾರ ಮನ್ನಿಸಿಲ್ಲ. ಇನ್ನು ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಪೌರ ಸೇನಾನಿಗಳಿಗೆ ಸ್ಥಾನ ನೀಡಿ ಎಂಬ ಒತ್ತಾಯವನ್ನು ರಾಜಕೀಯ ಪಕ್ಷಗಳು ಕಿವಿಗೆ ಹಾಕಿಕೊಳ್ಳುವುದಿಲ್ಲ. ಇದೀಗ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಈ ವರ್ಗದ ಪ್ರತಿನಿಧಿಯನ್ನು ಕಣಕ್ಕೆ ಇಳಿಸುವ ಮೂಲಕ ರಾಜಕೀಯ ಪಕ್ಷಗಳು ನಿಜವಾದ ಅರ್ಥದಲ್ಲಿ ಅವರ ಶ್ರೇಯೋಭಿವೃದ್ಧಿಗೆ ಮುಂದಾಗಬೇಕಿದೆ. ಪೌರ ಸೇನಾನಿಗೆ ದೇಶದ ಪ್ರಥಮ ಪ್ರಜೆಯ ಗೌರವ ಕೊಡುವ ಧರ್ಮವನ್ನು ಪಾಲಿಸಬೇಕಿದೆ.
ಡಾ. ಬಿ.ಎಸ್.ಶಿವಣ್ಣ, ಮಳವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT