ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಭಗವಂತನಿಗೇ ರಕ್ಷಣೆ!

Last Updated 20 ಸೆಪ್ಟೆಂಬರ್ 2021, 20:06 IST
ಅಕ್ಷರ ಗಾತ್ರ

ನಾವು ಚಿಕ್ಕವರಿದ್ದಾಗ ಊರಿಗೆ ಒಂದೆರಡು ದೇವಸ್ಥಾನಗಳು ಮಾತ್ರ ಇರುತ್ತಿದ್ದವು. ಆಗ ಜನರೂ ಬಡವರು ಅದರಂತೆ ದೇವರುಗಳೂ ಬಡವಾಗಿದ್ದವು. ಈಗಿನ ದಿನಗಳಲ್ಲಿ ಪೂಜೆ, ಜಾತ್ರೆ, ಯಾತ್ರೆಗಳು ವಿಪರೀತ ಹೆಚ್ಚಿವೆ. ಭವ್ಯ ಮಂದಿರಗಳ ನಿರ್ಮಾಣವೇ ನಮ್ಮ ಬಹುಮುಖ್ಯ ಆದ್ಯತೆ ಆಗಿಹೋಗಿದೆ. ಈಗ ಯೋಚಿಸಬೇಕಾದದ್ದು ಎಲ್ಲೆಲ್ಲೂ ಗುಡಿ, ಚರ್ಚು, ಮಸೀದಿಗಳ ನಿರ್ಮಾಣದಿಂದ ಆಗುವ ತೊಂದರೆಗಳ ಬಗ್ಗೆ. ಬಹಳಷ್ಟು ‍ಪ್ರಾರ್ಥನಾ ಮಂದಿರಗಳು ನಿರ್ಮಾಣವಾಗುವುದು ಸಾರ್ವಜನಿಕ ರಸ್ತೆ, ಕೆರೆ, ಬೆಟ್ಟಗಳಲ್ಲಿ. ಹೆಚ್ಚು ಜನನಿಬಿಡ ರಸ್ತೆಗಳಂತೂ ದೇವರಿಗೆ ಬಲು ಪ್ರೀತಿ. ಬಡಾವಣೆಗಳಲ್ಲಿ ಕಡ್ಡಾಯವಾಗಿ ಬಿಡಬೇಕಾದ ಉದ್ಯಾನದ ಜಾಗಗಳು ಹಲವೆಡೆ ಪ್ರಾರ್ಥನಾ ಮಂದಿರಗಳಿಗೆ ಮೀಸಲಾಗಿ ಹೋಗಿವೆ.

ಇಂತಹ ಕಡೆ ನಿರ್ಮಾಣ ಕಾರ್ಯಗಳಿಗೆ ಮಿತಿ ಇರುವುದಿಲ್ಲ. ಧಾರ್ಮಿಕ ರಚನೆಗಳಿಗೆ ಹೊಂದಿಕೊಂಡು ಸಮುದಾಯ ಭವನ, ಮಂಗಲ ಮಂಟಪ, ವಾಣಿಜ್ಯ ಚಟುವಟಿಕೆ ಬೆಳೆಯುತ್ತ ಹೋಗಿ ಸುತ್ತಲಿನ ಶಾಂತ ವಾತಾವರಣವನ್ನು ಕದಡುತ್ತ ಹೋಗುತ್ತವೆ. ತೊಂದರೆಗೊಳಗಾದ ಯಾರೋ ಶ್ರೀಸಾಮಾನ್ಯ ಕೋರ್ಟಿನ ಮೊರೆ ಹೋಗುತ್ತಾನೆ. ಆಗ, ಜನರ ಹಕ್ಕಿನ ರಕ್ಷಣೆಗೆ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ಕೋರ್ಟು ಆದೇಶ ಹೊರಡಿಸುತ್ತದೆ. ಆದರೆ ಯಾರು ಹೇಳಿದರೂ ನಾವು ಧಾರ್ಮಿಕ ರಚನೆಗಳ ತೆರವಿಗೆ ಬಿಡುವುದಿಲ್ಲ ಎಂದು ರಾಜಕಾರಣಿಗಳು ಪಕ್ಷಾತೀತವಾಗಿ ಒಂದಾಗಿ ವಿರೋಧಿಸುತ್ತಾರೆ. ಅಸಹಾಯಕ ಮನುಷ್ಯನಿಗೆ ಯಾರೂ ಇಲ್ಲ, ಸರ್ವಶಕ್ತನಾದ ಭಗವಂತನ ರಕ್ಷಣೆಗೆ ಎಷ್ಟೊಂದು ಜನ!
-ಪ್ರೊ. ಶಶಿಧರ ಪಾಟೀಲ್‌,ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT