ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 24 ಏಪ್ರಿಲ್ 2024, 19:27 IST
Last Updated 24 ಏಪ್ರಿಲ್ 2024, 19:27 IST
ಅಕ್ಷರ ಗಾತ್ರ

ಹಣ, ಆಮಿಷಕ್ಕೆ ಬಲಿಯಾದರೆ...

ಒಂದು ರಾಜಕೀಯ ಪಕ್ಷವು ದೇಶ ಅಥವಾ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲು ಚುನಾವಣೆಯಲ್ಲಿ ಸಂಸದರು ಹಾಗೂ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು. ಇವರೆಲ್ಲರೂ
ಯೋಗ್ಯರಾಗಿದ್ದರೆ ಮಾತ್ರ ಸರ್ಕಾರ ಸಹ ಯೋಗ್ಯವಾಗಿರುತ್ತದೆ. ಆದರೆ ನಾವು ಜಾತಿ, ಧರ್ಮದ ಅಭಿಮಾನಕ್ಕೆ, ಹಣ, ಆಮಿಷಕ್ಕೆ ಮತವನ್ನು ಮಾರಿಕೊಂಡರೆ ಯೋಗ್ಯರ ಆಯ್ಕೆ ಹೇಗಾಗುತ್ತದೆ? ಅಂತಹ ಆಯ್ಕೆ ಆಗಿಲ್ಲವೆಂದರೆ ಯೋಗ್ಯ ಸರ್ಕಾರ ರಚನೆ ಹೇಗಾಗುತ್ತದೆ? ಇದನ್ನು ಅರಿತು ಯಾವುದೇ ಆಮಿಷಕ್ಕೆ ಬಲಿಯಾಗದೆ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿದೆ.

–ಸಣ್ಣಮಾರಪ್ಪ, ಚಂಗಾವರ, ಶಿರಾ

***

ಆರೋಪಿಗಳಿಗೆ ಜೈಕಾರ: ಗಂಭೀರವಾಗಿ ಪರಿಗಣಿಸಿ

ಬೆಳಗಾವಿ ಜಿಲ್ಲೆಯ ಹೊಸವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಪ್ರಕರಣ ದೇಶದಾದ್ಯಂತ ಸುದ್ದಿ ಮಾಡಿತ್ತು. ಆರೋಪಿಗಳನ್ನು ಬಂಧಿಸಲಾಗಿತ್ತು. ನಾಲ್ಕು ತಿಂಗಳ ನಂತರ ಈಗ ಎಲ್ಲಾ ಆರೋಪಿಗಳಿಗೆ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ದೊರಕಿದ್ದು, ಈ ಸಂದರ್ಭದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರಿಗೆ ಹಾರ– ತುರಾಯಿ ಹಾಕಿ, ಸಿಹಿ ತಿನ್ನಿಸಿ ಅದ್ದೂರಿಯಾಗಿ ಸ್ವಾಗತ ಕೋರಿರುವುದು ಸುದ್ದಿಯಾಗಿದೆ.

ಈ ಪ್ರಕರಣವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣದ ಎಲ್ಲಾ ಆರೋಪಿಗಳ ಜಾಮೀನು ರದ್ದುಪಡಿಸಿ ಪುನಃ ಅವರನ್ನು ಜೈಲಿಗೆ ತಳ್ಳುವ ಕೆಲಸ ಆಗಬೇಕು. ಇಂತಹ ವಿಚಾರಗಳಲ್ಲಿ ಸಮಾಜ ಕೂಡ ಹೆಚ್ಚು ಸೂಕ್ಷ್ಮವಾಗಿ ವರ್ತಿಸಬೇಕು. ಮಹಿಳೆಯರನ್ನು ವಿವಸ್ತ್ರಗೊಳಿಸುವಂತಹ ಹೀನಕೃತ್ಯಗಳನ್ನು ಎಸಗಿದ ಆರೋಪ ಹೊತ್ತವರನ್ನು, ಮಹಾನ್ ಸಾಧಕರಂತೆ ಕಾಣುವ ಕೆಲಸಕ್ಕೆ ಇಳಿಯಬಾರದು.

–ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ

***

ಅಪರಾಧಕ್ಕೆ ಕೋಮುಬಣ್ಣ ಸಲ್ಲ

‘ಹುಡುಗಿಯರು ಬಲಿಯಾಗುತ್ತಲೇ ಇರಬೇಕೆ?’ ಎಂಬ ಸಬಿತಾ ಬನ್ನಾಡಿ ಅವರ ಲೇಖನ (ಪ್ರ.ವಾ., ಏ. 24) ಈ ಸಮಾಜದಲ್ಲಿ ಹೆಣ್ಣಿಗೆ ಆಗುವ ಕಿರುಕುಳಗಳ ವಾಸ್ತವಾಂಶವನ್ನು ಬಿಚ್ಚಿಟ್ಟಿದೆ. ಒಂದು ಜೀವವನ್ನು ತೆಗೆದು ಸಾಧಿಸುವುದು ಏನೂ ಇಲ್ಲ. ಕೊಲೆಗೆ ಎಂತಹ ಕಾರಣಗಳಿದ್ದರೂ ಕೊಲೆ ಎನ್ನುವುದು ಘೋರ ಅಪರಾಧ. ಯುವತಿ ನೇಹಾ ಹಿರೇಮಠ ಅವರ ದಾರುಣ ಕೊಲೆ ಪ್ರಕರಣವು ಸಮಾಜವೇ ತಲೆತಗ್ಗಿಸುವಂತಹದ್ದು. ಒಂದು ಅಪರಾಧವನ್ನು ಅಪರಾಧವನ್ನಾಗಿಯೇ ನೋಡಬೇಕು. ಅದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಅಂತೆಯೇ ಜಾತಿ, ಧರ್ಮದ ಸೋಂಕು ತಾಕದಂತೆ ಎಚ್ಚರ ವಹಿಸಬೇಕಾದುದು ಭಾರತದಂತಹ ಬಹುತ್ವದ ರಾಷ್ಟ್ರದಲ್ಲಿ ಅಗತ್ಯ.

–ಗೌತಮ್ ಗೌಡಪ್ಪಗೌಡ್ರು, ಮನ್ನಿಕಟ್ಟಿ, ಬಾಗಲಕೋಟೆ

***

ಬ್ಯಾಂಕ್ ಸೇವೆ ಗ್ರಾಹಕಸ್ನೇಹಿಯಾಗಲಿ

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ರಾಷ್ಟ್ರೀಯ ಬ್ಯಾಂಕೊಂದರ ಶಾಖೆಗೆ ಇತ್ತೀಚೆಗೆ ಹೋಗಿದ್ದೆ. ನಿಗದಿತ ಸೇವೆ ಪಡೆಯಬೇಕಾದರೆ, ಅಲ್ಲಿದ್ದ ಯಂತ್ರವೊಂದರಿಂದ ಚೀಟಿ ಪಡೆದು ಆನಂತರ ಕೌಂಟರ್ ಬಳಿ ಬರುವಂತೆ ಹೇಳಿದರು. ಅದೇ ಬ್ಯಾಂಕಿನ ನಿವೃತ್ತ ಅಧಿಕಾರಿಯಾದ ನಾನೇನೋ ನನ್ನಷ್ಟಕ್ಕೆ ಚೀಟಿ ಪಡೆದೆನಾದರೂ ಹಲವು ಅನಕ್ಷರಸ್ಥ ಗ್ರಾಹಕರು ಮತ್ತು ವೃದ್ಧರು ಚೀಟಿಗಾಗಿ ಇತರರ ನೆರವು ಯಾಚಿಸುತ್ತಿದ್ದುದನ್ನು ಕಂಡು ಬೇಸರವೆನಿಸಿತು. 74 ವರ್ಷ ವಯಸ್ಸಿನ ನಾನು ಕೆಲ ದಿನಗಳ ಕೆಳಗಷ್ಟೇ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದುದರಿಂದ ನನಗೂ ಕೊಂಚ ಕಷ್ಟವಾಯಿತೆಂಬುದು ಬೇರೆ ವಿಷಯ.

ಬ್ಯಾಂಕುಗಳು ಹೆಚ್ಚೆಚ್ಚು ಗ್ರಾಹಕಸ್ನೇಹಿಯಾಗುವ ಬದಲು ಗ್ರಾಹಕರಿಗೆ ಈ ರೀತಿ ಹೆಚ್ಚುವರಿ ಕೆಲಸ ನೀಡುವುದು ಸರಿಯೇ? ಇದರಿಂದಾಗಿ ಗ್ರಾಹಕರ ಮತ್ತಷ್ಟು ಸಮಯ ಹಾಳು ಮತ್ತು ಅನಕ್ಷರಸ್ಥರು, ವೃದ್ಧರಿಗೆ ವೃಥಾ ತೊಂದರೆಯಲ್ಲವೇ? ನನ್ನ ಎಂದಿನ ಕೆಲಸಕ್ಕಾಗಿ ನಾನು ಅಂದು ಅಲ್ಲಿ ನಾಲ್ಕು ಕಡೆ ಸರದಿಯಲ್ಲಿ ನಿಲ್ಲಬೇಕಾಯಿತು! ಈ ಬ್ಯಾಂಕಿನೊಡನೆ ಮತ್ತೊಂದು ಬ್ಯಾಂಕ್ ವಿಲೀನ ಆದನಂತರ ಈ ಶಾಖೆಯಲ್ಲಿ ಕೆಲಸದ ಹೊರೆ ದ್ವಿಗುಣಗೊಂಡಿದೆ. ಆದರೆ ಇದಕ್ಕೆ ಅನುಗುಣವಾಗಿ ಸಿಬ್ಬಂದಿಯ ಸಂಖ್ಯೆ ಏರಿಕೆ ಕಂಡಿಲ್ಲ. ಸ್ಥಳಾವಕಾಶದ ತೀವ್ರ ಕೊರತೆ ಇದೆ. ಈ ಕೊರತೆಗಳನ್ನು ನಿವಾರಿಸಿಕೊಂಡು ಬ್ಯಾಂಕು ಹೆಚ್ಚು ಗ್ರಾಹಕಸ್ನೇಹಿಯಾಗಬೇಕಾದ ಅವಶ್ಯಕತೆ ಇದೆ. ನಮ್ಮ ‘ಸರ್ಕಾರಿ’ ಬ್ಯಾಂಕುಗಳು ಖಾಸಗಿ ಬ್ಯಾಂಕುಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ.

–ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT