ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 22 ಮೇ 2024, 22:30 IST
Last Updated 22 ಮೇ 2024, 22:30 IST
ಅಕ್ಷರ ಗಾತ್ರ

ಶಾಲಾ ಸೇರ್ಪಡೆ: ಅವೈಜ್ಞಾನಿಕ ನಿಯಮ

ಒಂದನೇ ತರಗತಿ ಸೇರ್ಪಡೆಗೆ ಆಯಾ ಶೈಕ್ಷಣಿಕ ವರ್ಷದ ಜೂನ್‌ 1ಕ್ಕೆ ಮಗುವಿನ ವಯಸ್ಸು ಕಡ್ಡಾಯವಾಗಿ
6 ವರ್ಷ ಪೂರೈಸಿರಬೇಕು ಎಂಬ ಅವೈಜ್ಞಾನಿಕ ನಿಯಮವನ್ನು ಯಾರೂ ಪ್ರಶ್ನಿಸದಿರುವುದು ಸರಿಯಲ್ಲ.
ಈ ನಿಯಮದ ಅನುಸಾರ, ಮಗುವೇನಾದರೂ ಜೂನ್ 2ರಂದು ಜನಿಸಿದ್ದರೂ ಅದು ಒಂದನೇ ತರಗತಿಗೆ ಬರುವ ವೇಳೆಗೆ 7 ವರ್ಷ ವಯಸ್ಸಾಗುತ್ತದೆ. ಪದವಿ ಮುಗಿಸಿ ಜೀವನ ರೂಪಿಸಿಕೊಳ್ಳುವಷ್ಟರಲ್ಲಿ ಬಹಳಷ್ಟು ವಯಸ್ಸಾಗಿ ಬಿಟ್ಟಿರುತ್ತದೆ. ಇಂತಹ ಸಮಸ್ಯೆಯನ್ನು ಅರಿತಿದ್ದ ತಜ್ಞರು ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿಯನ್ನು 5 ವರ್ಷ 5 ತಿಂಗಳಿಗೆ ನಿಗದಿಪಡಿಸಿದ್ದರು. ಆ ವಯೋಮಾನಕ್ಕೆ ಬಾರದ ಮಗು ನಂತರ ಪ್ರವೇಶ ಪಡೆದರೆ ಸುಮಾರು 6 ತಿಂಗಳಷ್ಟೇ ನಿಧಾನವಾಗುತ್ತಿತ್ತು.

ಹಾಗಿದ್ದರೆ, ಈಗಿನ ಮಕ್ಕಳು ಹೆಚ್ಚು ಚೂಟಿಯಿಂದ ಇರುತ್ತಾರೆ ಎಂದು ಹೇಳುವ ಮನೋವಿಜ್ಞಾನದ ವ್ಯಾಖ್ಯಾನ ಹುಸಿಯೇ? ಕಲಿಕೆಯಲ್ಲಿ ಮುಂದಿರುವ ಈ ಕಾಲದ ಮಕ್ಕಳ ಮನಃಸ್ಥಿತಿ ಇಂತಹ ನಿಧಾನಗತಿಯ ಕಲಿಕೆಯಿಂದ ಏನಾಗಬಹುದು?! ಇದನ್ನು ಮನಗಂಡು, ಮಕ್ಕಳ ಬದುಕಿನ ಅಮೂಲ್ಯ ಕ್ಷಣಗಳು ಅನಗತ್ಯವಾಗಿ ವ್ಯರ್ಥವಾಗದ ರೀತಿಯಲ್ಲಿ, ಮೊದಲಿದ್ದ ವಯಸ್ಸನ್ನೇ ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿಯಾಗಿ ನಿಗದಿಪಡಿಸಬೇಕು.

- ಹೇಮಚಂದ್ರ ದಾಳಗೌಡನಹಳ್ಳಿ, ಮೈಸೂರು

ಹೊರಗುತ್ತಿಗೆ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಸುವ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮಹಿಳೆಯರಿಗೂ ಸೇರಿದಂತೆ ಮೀಸಲಾತಿ ನೀಡಿಕೆಯನ್ನು ಕಡ್ಡಾಯವಾಗಿ ಪಾಲಿಸಲು ಸರ್ಕಾರ ಆದೇಶಿಸಿರುವುದು ಉತ್ತಮ ಕ್ರಮವಾಗಿದೆ. ಏಜೆನ್ಸಿಗಳ ಮೂಲಕ ನಡೆಯುತ್ತಿದ್ದ ನೇಮಕಾತಿಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದಾಗಿ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗೆ ಅನ್ಯಾಯವಾಗುತ್ತಿತ್ತು. ಆದರೆ ಈಗ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿಯನ್ನು ಪಾಲಿಸಬೇಕಾಗಿರುವುದರಿಂದ
ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಂತಾಗಿದೆ.

ಈ ನಿಯಮವು ಸರ್ಕಾರದ ಎಲ್ಲಾ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮ, ಮಂಡಳಿಗಳು,
ವಿಶ್ವವಿದ್ಯಾಲಯಗಳಿಗೆ ಅನ್ವಯ ಆಗಲಿರುವುದರಿಂದ, ಇದುವರೆಗೂ ಅವಕಾಶ ಪಡೆಯದ ಹಲವರಿಗೆ ಉದ್ಯೋಗ ದೊರಕುವ ಸಾಧ್ಯತೆ ಇದೆ.

- ರಾಸುಮ ಭಟ್, ಚಿಕ್ಕಮಗಳೂರು

ಅನಾರೋಗ್ಯಕರ ಆಹಾರ: ಇರಲಿ ಎಚ್ಚರ

ಬೆಂಗಳೂರಿನಲ್ಲಿ ಇತ್ತೀಚೆಗೆ ಮದುವೆಯೊಂದರ ಆರತಕ್ಷತೆಯಲ್ಲಿ ನೀಡಿದ್ದ ಲಿಕ್ವಿಡ್‌ ನೈಟ್ರೋಜನ್‌ ಪಾನ್‌ ತಿಂದು ಬಾಲಕಿಯೊಬ್ಬಳ ಹೊಟ್ಟೆಯಲ್ಲಿ ರಂಧ್ರವಾಗಿರುವುದು ಮತ್ತು ಅದಕ್ಕಾಗಿ ಆಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂದದ್ದು ದುರದೃಷ್ಟಕರ. ಬಾಯಿಯಲ್ಲಿ ಹಾಕಿದ ಕೂಡಲೇ ಹೊಗೆ ತರಿಸುವ ಲಿಕ್ವಿಡ್ ನೈಟ್ರೋಜನ್ ತುಂಬಿದ ಪಾನ್ ಸೇವಿಸುವುದು ಇತ್ತೀಚಿನ ದಿನಗಳಲ್ಲಂತೂ ಟ್ರೆಂಡ್ ಆಗಿದೆ. ಆದರೆ ಈ ರೀತಿ ಟ್ರೆಂಡಿ ಫುಡ್‌ಗಳು ಹಾಗೂ ಬಾಯಿಗೆ ರುಚಿ ಕೊಡುವ ಅನಾರೋಗ್ಯಕರ ಪದಾರ್ಥಗಳ ಸೇವನೆಯಿಂದ ತಮ್ಮ ದೇಹದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು.

-ಅಂಬಿಕಾ ಬಿ.ಟಿ., ಹಾಸನ

ಜೆಡಿಎಸ್‌ ಅಧ್ಯಕ್ಷರ ಕೂಗು ಕೇಳುತ್ತಿಲ್ಲವೇ?

ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿ, ಈ ಸಂಬಂಧ ತಲೆಮರೆಸಿಕೊಂಡು ಸದ್ಯ ವಿದೇಶದಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ‘ನಿಮ್ಮ ತಾತ (ಎಚ್.ಡಿ.ದೇವೇಗೌಡ) ಮತ್ತು ಪಕ್ಷದ ಕಾರ್ಯಕರ್ತರಿಗೆ
ನೀನು ಗೌರವ ಕೊಟ್ಟು, ಎಲ್ಲೇ ಇದ್ದರೂ 48 ಗಂಟೆಯ ಒಳಗೆ ಬಂದು, ಈ ನೆಲದ ಕಾನೂನಿಗೆ ಗೌರವ ಕೊಟ್ಟು ತನಿಖೆಗೆ ಸಹಕರಿಸು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಮನವಿ ಮಾಡಿರುವುದು ಸರಿಯಷ್ಟೆ. ಆದರೆ ಈ ಕೂಗು ಇನ್ನೂ ಪ್ರಜ್ವಲ್ ಕಿವಿಗೆ ಬಿದ್ದಿಲ್ಲವೇನೋ ಎನಿಸುತ್ತದೆ ಅಥವಾ ಕೇಳಿಸಿದ್ದರೂ ತಮಗೂ ಕುಮಾರಸ್ವಾಮಿ ಅವರ ಮನವಿಗೂ ಸಂಬಂಧ ಇಲ್ಲ ಎಂಬ ಧೋರಣೆಯಿಂದ ಅವರು ಸುಮ್ಮನೆ ಇರಬಹುದು. ರಾಜ್ಯದ ಅನೇಕ ರಾಜಕೀಯ ಪಂಡಿತರು ಹೇಳುವಂತೆ, ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಜೂನ್ 4ರ ತನಕವೂ ಪ್ರಜ್ವಲ್‌ ಭಾರತಕ್ಕೆ ಬರುವ ಸಾಧ್ಯತೆ ಕಡಿಮೆ. 

-ಬೂಕನಕೆರೆ ವಿಜೇಂದ್ರ, ಮೈಸೂರು

ಉದ್ಯಾನ ಪ್ರವೇಶಾತಿ: ನಿರ್ಬಂಧ ಸಲ್ಲ

ಬೆಂಗಳೂರಿನ ಉದ್ಯಾನಗಳು ಮತ್ತು ಕೆರೆಗಳ ಪ್ರವೇಶಕ್ಕೆ ಸಮಯದ ನಿರ್ಬಂಧ ವಿಧಿಸಿರುವ ಬಗ್ಗೆ ರಾಜನ್ ನಾಯರ್ ಎಂಬುವರು ಆಕ್ಷೇಪಿಸಿದ್ದಾರೆ (ಕಿಡಿನುಡಿ, ಪ್ರ.ವಾ., ಮೇ 22). ಬೆಂಗಳೂರಿನಲ್ಲಿರುವ ಬಹುತೇಕ ಉದ್ಯಾನಗಳು ಹಾಗೂ ದೇವಸ್ಥಾನಗಳು ಬೆಳಿಗ್ಗೆ 11 ಗಂಟೆಯವರೆಗೆ ಮಾತ್ರ ಸಾರ್ವಜನಿಕರಿಗಾಗಿ ತೆರೆದಿರುತ್ತವೆ ಮತ್ತೆ ಸಂಜೆ 4–5 ಗಂಟೆಗೆ ತೆರೆಯುತ್ತವೆ. 

ನಿವೃತ್ತರಾಗಿ ಮನೆಯಲ್ಲೇ ಇರುವ, ಸಣ್ಣ ಮಕ್ಕಳನ್ನು ನೋಡಿಕೊಳ್ಳುವ ಹಿರಿಯ ನಾಗರಿಕರು ಈ ನಡುವಿನ ಅವಧಿಯಲ್ಲಿ ಇಂತಹ ಸ್ಥಳಗಳಿಗೆ ಭೇಟಿ ಕೊಡಲು ಸಾಧ್ಯವಿಲ್ಲ. ಏನಿದ್ದರೂ ಜನದಟ್ಟಣೆ ಇರುವ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಷ್ಟೇ ಅವರು ಇಲ್ಲಿಗೆ ಭೇಟಿ ಕೊಡಬೇಕಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಮುಂಜಾನೆಯಿಂದ ಸಂಜೆಯವರೆಗೆ ಈ ಸ್ಥಳಗಳು ನಿರಂತರವಾಗಿ ತೆರೆದಿರುವಂತೆ ಮಾಡಬೇಕು. ಆಗ ಜನದಟ್ಟಣೆ ನಿವಾರಣೆಯಾಗುವುದಲ್ಲದೆ, ಹಿರಿಯ ನಾಗರಿಕರು ಮತ್ತು ಮಕ್ಕಳು ತಮ್ಮ ಬಿಡುವಿನ ವೇಳೆಯನ್ನು ಇಲ್ಲಿ ಕಳೆಯಲು ಸಾಧ್ಯವಾಗುತ್ತದೆ.

-ಟಿ.ವಿ.ಬಿ.ರಾಜನ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT